ಮಾ.3 ರಂದು ದುರ್ಗದಲ್ಲಿ ಚುನಾವಣೆ ಸಿದ್ಧತಾ ಸಭೆ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಾ. 3ರಂದು ನಗರದಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ ಸಭೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ತಿಳಿಸಿದರು.
ನಮ್ಮ ಪರಿವಾರ ಬಿಜೆಪಿ ಪರಿವಾರ ಆಂದೋಲನ ಅಂಗವಾಗಿ ನಗರದ ತಮ್ಮ ನಿವಾಸದಲ್ಲಿ ಬಿಜೆಪಿ ಬಾವುಟ ಹಾರಿಸಿ ಮಾತನಾಡಿದರು.
ಅಂದು ಪಕ್ಷದ ಮುಖಂಡರೊಂದಿಗೆ ಬಿಎಸ್‌ವೈ ಸಮಾಲೋಚನೆ ನಡೆಸಲಿದ್ದಾರೆ. ಇನ್ನು 15 ದಿನದೊಳಗೆ ಕ್ಷೇತ್ರದ ಪಕ್ಷದ ಅಭ್ಯರ್ಥಿ ಯಾರೆಂಬುದು ಅಂತಿಮವಾಗುವ ಸಾಧ್ಯತೆ ಇದೆ ಎಂದರು.
ನಗರದಲ್ಲಿ ಫೆ.27ರಂದು ಬುದ್ಧಿಜೀವಿಗಳೊಂದಿಗೆ ಸಮಾಲೋಚನೆ ಸಭೆ ನಡೆಯಲಿದೆ. ಇದರಲ್ಲಿ ಕೇಂದ್ರದ ಆಯುಷ್ ಸಚಿವ ಶ್ರೀಪಾದ್ ನಾಯಕ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ. ಕ್ಷೇತ್ರದಲ್ಲಿ ಮತ ಕೇಳುವ ಹಕ್ಕನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದುಕೊಂಡಿವೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನ, ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳ ಅನುಷ್ಠಾನದ ವ್ಯತ್ಯಾಸಗಳನ್ನು ಸದ್ಯದಲ್ಲೇ ಜನತೆ ಮುಂದಿಡುವುದಾಗಿ ತಿಳಿಸಿದರು.
ಪಕ್ಷದ ನಗರಾಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ರಮೇಶ್, ಸಂಪತ್, ಮುರಳಿ ಇತರರಿದ್ದರು.