ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ಬೆನ್ನಲ್ಲೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಾಜಿ ಸಚಿವ ಎಚ್. ಆಂಜನೇಯ ಅಪಸ್ವರವೆತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಾಜ್ಯದ ಆಡಳಿತಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈತ್ರಿ ಸರ್ಕಾರ ಆಡಳಿತಕ್ಕೆ ಸೀಮಿತವಾಗಬೇಕಿತ್ತು. ಆಯಾ ಪಕ್ಷಗಳು ತಮ್ಮ ಪ್ರಣಾಳಿಕೆ ಆಧರಿಸಿ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಕನಿಷ್ಠ 16 ಸೀಟು ಬರುತ್ತಿತ್ತು. ತ್ರಿಕೋನ ಸ್ಪರ್ಧೆ ಉಂಟಾಗಿದ್ದರೆ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಮೈತ್ರಿಯಿಂದ ಅನುಕೂಲಕ್ಕಿಂತ ನಷ್ಟವೇ ಹೆಚ್ಚಾಯಿತು. ಕಾಂಗ್ರೆಸ್‌ನವರು ಜೆಡಿಎಸ್‌ಗೆ, ಜೆಡಿಎಸ್‌ನವರು ಕಾಂಗ್ರೆಸ್ಸಿಗೆ ಮತ ಹಾಕಿಲ್ಲ. ಈಗಲಾದರೂ ಮೈತ್ರಿ ಕುರಿತಂತೆ ಕಾಂಗ್ರೆಸ್ ಪ್ರಮುಖರು ವಿಮರ್ಶೆ ಮಾಡಲಿ ಎಂದು ಸಲಹೆ ನೀಡಿದರು.

ಧರ್ಮ, ಯುದ್ಧದ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಪ್ರಧಾನಿ ನರೇಂದ್ರ ಮೋದಿ ಗೆಲುವು ಸಾಧಿಸಿದ್ದಾರೆ. ಆದರೆ ಇಡೀ ದೇಶದಲ್ಲೇನೂ ಅವರ ಅಲೆ ಇಲ್ಲವೆಂಬುದಕ್ಕೆ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳು ಉದಾಹರಣೆ. ಚಿತ್ರದುರ್ಗದಲ್ಲಿ ಬಿ.ಎನ್.ಚಂದ್ರಪ್ಪ ಸೋಲು ಅನಿರೀಕ್ಷಿತ ಎಂದರು.

ಕಿಂಚಿತ್ತೂ ಅನುಮಾನ ಇರಲಿಲ್ಲ‘ ಮಾಜಿ ಸಂಸದ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಸೋಲು ಅನಿರೀಕ್ಷಿತದಲ್ಲಿ ಅನಿರೀಕ್ಷಿತ. ಗೆದ್ದಿರುವ ಬಿಜೆಪಿಗೇ ಗೆಲುವಿನ ಭರವಸೆ ಇರಲಿಲ್ಲ. ಆದರೆ, ಮತದಾರರ ತೀರ್ಪಿಗೆ ತಲೆಬಾಗುತ್ತೇವೆ. ಪಕ್ಷದ ಪರವಾಗಿ ಮತದಾನ ಮಾಡಿದ, ಚುನಾವಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರಿಗೆ ಶುಭ ಹಾರೈಸುತ್ತೇನೆ ಎಂದರು.

ಸೋಲಿಗೆ ಅಂಜಿ ಬೆನ್ನು ತೋರಿಸಿ ಓಡಿ ಹೋಗಲ್ಲ. ಇಲ್ಲೇ ಸ್ವಂತ ಮನೆ ಮಾಡಿ ಜನ ಸೇವೆ ಮುಂದುವರಿಸುತ್ತೇನೆ. ರಾಜ್ಯ,ದೇಶದಲ್ಲಿ ಆದ ಕಾಂಗ್ರೆಸ್ ಸೋಲಿನ ಕುರಿತು ವರಿಷ್ಠರು ಚರ್ಚಿಸುತ್ತಾರೆ. ಕ್ಷೇತ್ರದಲ್ಲಾದ ಸೋಲಿಗೆ ಸಾಮೂಹಿಕ ಹೊಣೆ ಹೊರುತ್ತೇವೆ ಎಂದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ, ವಿಜೇತ ಅಭ್ಯರ್ಥಿ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಪಕ್ಷದ ಪರವಾಗಿ ಶುಭಾಶಯ ಕೋರುವುದಾಗಿ ತಿಳಿಸಿದರು.

ಮಾಜಿ ಶಾಸಕರಾದ ಡಿ.ಸುಧಾಕರ್, ಉಮಾಪತಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಕಾರ‌್ಯದರ್ಶಿ ಹನುಮಲಿ ಷಣ್ಮುಖಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಜಿ.ಪಂ.ಸದಸ್ಯ ಡಾ.ಯೋಗೇಶ್ ಬಾಬು ಇದ್ದರು.