ನೀರೇ ಇಲ್ಲ ತಣ್ಣೀರು ದೋಣಿಯಲ್ಲಿ

ಚಿತ್ರದುರ್ಗ: ಸಿಡಿಲಿಗೂ ಬೆಚ್ಚದ ಕೋಟೆಯ ತಣ್ಣೀರು ದೋಣಿ ಬತ್ತಿದ್ದು, ಜಿಲ್ಲೆಯ ಬರದ ಭೀಕರತೆಗೆ ಸಾಕ್ಷಿಯಾಗಿದೆ.

ಕಳೆದ ಕೆಲ ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಜಿಲ್ಲೆಯಲ್ಲಿ ಸಾಲು ಸಾಲು ಕೆರೆಗಳು, ಹೊಂಡಗಳು ಬತ್ತುವ ಮೂಲಕ ಒಣ ಭೂಮಿಗಳಾಗುತ್ತಿವೆ. ಅಂರ್ತಜಲ ಎಷ್ಟೇ ಕುಸಿದರು ಕೋಟೆಯ ತಣ್ಣೀರು ದೋಣಿಯಲ್ಲಿ ಮಾತ್ರ ಜುಳು..ಜುಳು… ಸದ್ದು ಕೇಳುತ್ತಿತ್ತು. ಆದರೆ, ಕೆಲ ದಿನಗಳಿಂದ ಸದ್ದು ಮೌನವಾಗಿದೆ.

ಒನಕೆ ಓಬವ್ವನ ಕಿಂಡಿಗೆ ಈ ದೋಣಿಯನ್ನು ದಾಟಿಯೇ ಹೋಗಬೇಕು. ಹೈದರಾಲಿ ಸೈನಿಕರು ಕೋಟೆಯೊಳಗೆ ತೂರಿ ಬರುವಾಗ ಓಬವ್ವ ನೀರು ತರಲೆಂದು ಇದೇ ತಣ್ಣೀರು ದೋಣಿಗೆ ಬಂದಿದ್ದಳೆಂಬುದು ಜನಮಾತು.

ಮೇಲುದುರ್ಗದಲ್ಲಿ ಬಿದ್ದ ಮಳೆ ನೀರು ಝರಿಯಾಗಿ ಹರಿದು ಗೋಪಾಲಸ್ವಾಮಿ ಹೊಂಡಕ್ಕೆ ಬರುತ್ತದೆ. ಅಲ್ಲಿಂದ ಅಕ್ಕ-ತಂಗಿಯರ ಹೊಂಡಕ್ಕೆ ಹರಿದು ಮುಂದೆ ಗುಪ್ತಗಾಮಿನಿಯಾಗಿ ಹರಿಯುವ ನೀರು, ತಣ್ಣೀರು ದೋಣಿ ಮೂಲಕ ಒನಕೆ ಓಬವ್ವನ ಕಿಂಡಿಯ ಮೂಲಕ ಸಾಗಿ ಸಿಹಿನೀರು ಹೊಂಡ ಸೇರುತ್ತದೆ.

ನೂರಾರು ವರ್ಷಗಳಿಂದ ಎಷ್ಟೇ ಭೀಕರ ಬರಗಾಲ ಬಂದಿದ್ದರೂ ದೋಣಿಯಲ್ಲಿ ತಿಳಿ ನೀರು ಹರಿಯುತ್ತಿತ್ತು. ಕೋಟೆ ಸುತ್ತಿ ಸುಸ್ತಾಗಿ ಬಂದವರು ನೀರು ಕುಡಿದು ಧಣಿವಾರಿಸಿಕೊಳ್ಳುವುದು ರೂಢಿಗತವಾಗಿತ್ತು. ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಜಲಪಾತ್ರೆ ಆಗಿತ್ತು.
ಆದರೆ, ಈಗ ಕೋಟೆಯ ಗೋಪಾಲಸ್ವಾಮಿ ಹೊಂಡದಲ್ಲಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದೆ. ಅಕ್ಕ ಹೊಂಡದಲ್ಲಿ ಕೊಂಚ ನೀರಿದ್ದರೆ ತಂಗಿ ಹೊಂಡ ಮಾತ್ರ ಸಂಪೂರ್ಣ ಬರಿದಾಗಿ ಕೆಸರು ತುಂಬಿ ಕೊಂಡಿದೆ. ಪರಿಣಾಮ ತಣ್ಣೀರು ದೋಣಿ ಬತ್ತಿದೆ.

ನೀರಿಗೆ ಹಾಹಾಕಾರ: ಜಲಮೂಲಗಳು ಬತ್ತಿರುವುದರಿಂದ ಪ್ರಾಣಿ ಪಕ್ಷಿಗಳು ನೀರಿಗೆ ಪರದಾಡುತ್ತಿವೆ. ಬಿಸಿಲಝಳಕ್ಕೆ ಕೋತಿಗಳು ತತ್ತರಿಸಿ ನಗರದ ಕಡೇ ಮುಖ ಮಾಡಿವೆ. ಇನ್ನೂ ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಪ್ರವಾಸಿಗರು ಬಾಟಲಿ ನೀರಿಗೆ ಮೊರೆ ಹೋಗಿದ್ದಾರೆ.

ದೇವರ ಪೂಜೆಗೂ ನೀರಿಲ್ಲ: ಮೇಲುದುರ್ಗದ ಏಕನಾಥೇಶ್ವರಿ, ಗಣಪತಿ, ಸಂಪಿಗೆ ಸಿದ್ದೇಶ್ವರ ಹಾಗೂ ಹಿಡಂಬೇಶ್ವರ, ಗೋಪಾಲಸ್ವಾಮಿ ದೇವಸ್ಥಾನಗಳ ಪೂಜೆಗೆ ತಂಗಿ ಹೊಂಡ ಇಲ್ಲವೇ ತಣ್ಣೀರು ದೋಣಿಯ ನೀರನ್ನು ಬಳಸಲಾಗುತ್ತಿತ್ತು. ಆದರೆ, ನೀರು ಬರಿದಾಗಿರುವುದರಿಂದ ಅರ್ಚಕರು ಮನೆಗಳಿಂದ ನೀರು ತಂದು ಪೂಜೆ ಮಾಡುತ್ತಿದ್ದಾರೆ. ಕೋಟೆ ಪ್ರದೇಶದಲ್ಲಿ ಮಳೆಬಾರದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಲಿದೆ.

ಕೋಟೆಗೆ ಬರುವ ಪ್ರವಾಸಿಗರಿಗೆ ತಣ್ಣೀರು ದೋಣಿ ತೋರಿಸುವಾಗ ಸಂಕಟವಾಗುತ್ತದೆ. ಈ ದೋಣಿಯಲ್ಲಿ ನೀರು ಯಾವಾಗಲೂ ತಣ್ಣಗಿರುತ್ತದೆ. ಆದರೆ, ಈ ವರ್ಷ ಬತ್ತಿದೆ ಎಂದು ಮಾಹಿತಿ ನೀಡಬೇಕಾದ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಪ್ರವಾಸಿ ಗೈಡ್ ಸಿ.ಪಿ.ಮುರಳೀಧರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *