ಪೈಪ್‌ಲೈನ್ ಕಾಮಗಾರಿ ನಡೆಸಿದರೆ ಹುಷಾರ್

ಚಿತ್ರದುರ್ಗ: ಒಳಚರಂಡಿ ಹಾಗೂ ಕುಡಿವ ನೀರು ಸಂಪರ್ಕ ಜಾಲ ಸುಧಾರಣೆ ಕಾಮಗಾರಿಗಳು ಎಂಟು ವರ್ಷದಿಂದ ಕುಟುಂತ ಸಾಗುತ್ತಿದ್ದು, ಕಳಪೆ ಆಗಿದೆ ಎಂದು ಅಧಿಕಾರಿಗಳನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಸಭೆಗೆ ಆಗಮಿಸದ ಒಳ ಚರಂಡಿ ಕಾಮಗಾರಿ ಗುತ್ತಿಗೆದಾರರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಶಾಸಕರು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಏನು ನಮ್ಮ ಮನೆ ಕೆಲಸಕ್ಕೆ ಬನ್ನಿ ಎಂದು ಕರೆದಿದ್ದೇವೆಯೇ? ಬಾಕಿ ಕಾಮಗಾರಿ ಯಾವಾಗ ಪೂರ್ಣಗೊಳಿಸುತ್ತೀರಿ? ಟೆಂಡರ್ ನಿಯಮ ಪಾಲಿಸುತ್ತಲ್ಲವೆಂದು ದೂರಿದರು.

ಮಂಡಳಿ ಇಇ ಹನುಮಂತಪ್ಪ ವಿರುದ್ಧವೂ ಹರಿಹಾಯ್ದ ಶಾಸಕರು, ನೀವೇನು ಬಿಲ್ ಪಾಸ್ ಮಾಡುವುದಕ್ಕೆ ಇರುವುದಾ? ಗುತ್ತಿಗೆದಾರರು ಕೇಳಿದಾಕ್ಷಣ ಬಿಲ್ ಪಾವತಿಸುವುದರಿಂದಾಗಿ ಇವರ‌್ಯಾರು ನಿಮ್ಮ ಮಾತು ಕೇಳದಂತಾಗಿದ್ದಾರೆ ಎಂದರು.

ಅಮೃತ್ ಯೋಜನೆ ಕುಡಿವ ನೀರು ಸಂಪರ್ಕ ಯೋಜನೆ ಗುತ್ತಿಗೆದಾರ ಕಂಪನಿ ಇಂಜಿಯರ್ ಮಹೇಶ್‌ಗೆ, ಪೈಪ್‌ಲೈನ್ ಅಳವಡಿಸಲು ಅಗೆದಿರುವ ರಸ್ತೆಗಳನ್ನು 45 ದಿನದೊಳಗೆ ಅಭಿವೃದ್ಧಿ ಪಡಿಸಬೇಕು. ಅಲ್ಲಿಯವರೆಗೂ ಕೆಲಸ ಮುಂದುವರಿಸುವುದು ಬೇಡ. ಪೈಪ್‌ಲೈನ್ ಹಾಕಲು ಒಂದಿಂಚು ರಸ್ತೆ ಅಗೆಯಲು ಇವರಿಗೆ ಅವಕಾಶ ಕೊಡಬೇಡಿ ಎಂದು ನಗರಸಭೆ ಸದಸ್ಯರಿಗೆ ತಿಳಿಸಿದರು.

ನಗರಸಭೆ ಆಯುಕ್ತ ಚಂದ್ರಪ್ಪ ಮಾತನಾಡಿ, 78.47 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ 2013ರಲ್ಲಿ ಆರಂಭವಾಗಿದ್ದರೂ ಮನೆಗಳ ಬಳಿ ರಿಸಿವಿಂಗ್ ಛೇಂಬರ್‌ಗಳ ಸ್ಥಾಪನೆಯಾಗಿಲ್ಲ. ಹೆಚ್ಚುವರಿ ರಿಸಿವಿಂಗ್ ಛೇಂಬರ್‌ಗಳಿಗೆ ನಗರಸಭೆ ವತಿಯಿಂದ ಮಂಡಳಿಗೆ 6.60 ಕೋಟಿ ರೂ. ಕೊಡಲಾಗಿದೆ ಎಂದು ಹೇಳಿದರು.

ಪ್ರಗತಿ ಕುರಿತಂತೆ ಮಾತನಾಡಿದ ಮಂಡಳಿ ಇಇ ಹನುಮಂತಪ್ಪ, 16500 ಸಂಪರ್ಕದಲ್ಲಿ 4000 ಪೂರ್ಣಗೊಂಡಿದೆ. ಎಸ್‌ಟಿಪಿ ಕಾರ್ಯಾರಂಭ ಮಾಡಿದೆ. ಮುಖ್ಯ ವೆಟ್‌ವೆಲ್‌ನಲ್ಲಿ ಕೊಳೆಚೆ ನೀರನ್ನು ಶುದ್ಧೀಕರಿಸಿ ಗೋನೂರು ಕೆರೆಗೆ ಬಿಡಲಾಗುತ್ತಿದೆ.

ನಗರದಲ್ಲಿ 27348 ಮನೆಗಳ ಪೈಕಿ 18286 ಮನೆಗಳಿಗೆ ಮೀಟರ್ ಅಳವಡಿಕೆ, 9062 ಮನೆಗಳಿಗೆ ಮೀಟರ್ ಸಹಿತ ಹೊಸ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಮಂಡಳಿ ಇಂಜಿನಿಯರ್ ರವಿ, ನಗರಸಭೆ ಇಇ ಕೃಷ್ಣಮೂರ್ತಿ ಮತ್ತಿತರ ಅಧಿಕಾರಿಗಳಿದ್ದರು.