
ಚಿತ್ರದುರ್ಗ: ಜಿಲ್ಲಾದ್ಯಂತ ನಾಲ್ಕು ದಿನಗಳ ಕಾಲ ಸಂಚರಿಸಲಿರುವ ಕಾನೂನು ಸಾಕ್ಷರತಾ ರಥಕ್ಕೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬುಧವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ವಟವಟಿ ಚಾಲನೆ ನೀಡಿದರು.
ಬಳಿಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತಿತರ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾವಿಕಾಸ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನು ಪಾಲನೆ ಕುರಿತಂತೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸುವುದು ರಥದ ಉದ್ದೇಶವಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಕಾನೂನಿನ ಅರಿವು ಮೂಡಬೇಕಿದೆ ಎಂದರು.
ಮನುಷ್ಯನಿಗೆ ಹುಟ್ಟಿನಿಂದಲೂ ಕಾನೂನು ಅವಶ್ಯವಿದೆ. ಜನನ, ಮರಣ, ಆಸ್ತ್ತಿ ಮುಂತಾದ ವಿಷಯಗಳಲ್ಲಿ ಆತ ಕಾನೂನಿನ ಚೌಕಟ್ಟಿನಲ್ಲಿರುತ್ತಾನೆ. ಇದರಿಂದ ನೆಮ್ಮದಿ ಜೀವನ ಸಾಧ್ಯ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ್ ಮಾತನಾಡಿ, ದೇಶದ ಪ್ರಜೆಗಳು ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಹೊಂದಬೇಕು ಎಂದರು.
ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದರ ಬಗ್ಗೆ ಸಂವಿಧಾನದ ಪಾತ್ರವೂ ಮುಖ್ಯವಾಗಿದೆ. ಎಲ್ಲ ಕಾನೂನುಗಳಿಗೂ ತಾಯಿಯಾಗಿರುವ ಸಂವಿಧಾನದ ಆಶಯಗಳನ್ನು ಸರ್ವರೂ ಗೌರವಿಸಬೇಕು ಎಂದು ತಿಳಿಸಿದರು.
ಸಮಾನತೆ, ಸ್ವಾತಂತ್ರ್ಯ, ಶೋಷಣೆ ವಿರುದ್ಧದ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಪರಿಹಾರ ಹಕ್ಕುಗಳ ಕುರಿತು ವಕೀಲೆ ದಿಲ್‌ಶಾದ್ ಉನ್ನೀಸಾ ಉಪನ್ಯಾಸ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಉಪಾಧ್ಯಕ್ಷ ಟಿ.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಅನಿಲ್‌ಕುಮಾರ್, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್ ಉಪಸ್ಥಿತರಿದ್ದರು.