ಚಿತ್ರದುರ್ಗ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯ ಅಂಗವಾಗಿ ಫೆ.10ರಂದು ಜಿಲ್ಲೆಯ 1ರಿಂದ 19 ವರ್ಷದೊಳಗಿನ 4.55 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸಲಾಗುಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ, ಕಾಲೇಜು ಹಾಗೂ ಅಂಗನವಾಡಿಯ ಮಕ್ಕಳಿಗೆ ಜಂತುಹುಳು ನಿವಾರಕ ಅಲ್ಬೆಂಡಾಜೋಲ್ ಮಾತ್ರೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ 1ರಿಂದ 2 ವರ್ಷದೊಳಗಿನ ಒಟ್ಟು 30,983 ಹಾಗೂ 2ರಿಂದ 19 ವರ್ಷದೊಳಗಿನ 4,24,429 ಸೇರಿ ಒಟ್ಟು 455412 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಮಾತ್ರೆಯನ್ನು ಶಾಲೆ, ಕಾಲೇಜು ಅಂಗನವಾಡಿಗಳಲ್ಲಿಯೇ ಮಕ್ಕಳಿಗೆ ಸೇವನೆಗೆ ನೀಡಬೇಕು. ಯಾವುದೇ ಕಾರಣಕ್ಕೂ ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ಕೊಡಬಾರದು ಎಂದು ಸೂಚಿಸಿದರು.
ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಮಾತ್ರೆಯನ್ನು ಸಂಬಂಧಿಸಿದವರ ಮೇಲ್ವಿಚಾರಣೆಯಲ್ಲಿಯೇ ಮಕ್ಕಳಿಗೆ ನೀಡಬೇಕು. ಕಾರ್ಯಕ್ರಮ ಕುರಿತು ವ್ಯಾಪಕ ಪ್ರಚಾರ ಕೊಡಬೇಕು ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯ 2250 ಶಾಲೆಗಳು, 2333-ಅಂಗನವಾಡಿ ಕೇಂದ್ರಗಳು, 28-ನರ್ಸಿಂಗ್ ಕಾಲೇಜು, 51-ಐಟಿಐ, 9-ಪಾಲಿಟೆಕ್ನಿಕ್, 55-ಪದವಿ ಕಾಲೇಜು ಸೇರಿ ಒಟ್ಟು 5216 ಸಂಸ್ಥೆಗಳಲ್ಲಿ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡಲಾಗುವುದು ಎಂದರು.
ಎಡಿಸಿ ಸಿ.ಸಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ರೇಣುಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ.ಗಿರೀಶ್, ಡಾ.ಆನಂದಪ್ರಕಾಶ್, ಡಾ.ಸುಧಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.