ಚಿತ್ರದುರ್ಗ: ಪ್ರಧಾನ ಮಂತ್ರಿ ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಅ.ಜೊಲ್ಲೆ ಹೇಳಿದರು.
ಜಿಪಂ ಸಭಾಂಗಣದಲ್ಲಿ ಭಾನುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಹಾರ, ನಾಗರಿಕ ಸರಬರಾಜು ಇಲಾಖೆಗಳ ಪ್ರಗತಿ ಪರಿಶೀಲಿಸಿ, ಕೇಂದ್ರ ಅಭಿಯಾನ ಆರಂಭಿಸಿ 2 ವರ್ಷಗಳಾದರೂ ಕರ್ನಾಟಕದಲ್ಲಿ ಜಾರಿಯಾಗಿಲ್ಲ ಎಂದು ಬೇಸರಿಸಿದರು.
ಕೇಂದ್ರಕ್ಕೆ ಉತ್ತಮ ಹೆಸರು ಬರುತ್ತದೆ ಎಂಬ ಕಾರಣದಿಂದ ಹಿಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಇದನ್ನು ಕಡೆಗಣಿಸಿತ್ತು. ಆದರೆ, ಈಗ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಜ.20ರೊಳಗೆ ಕಾರ್ಯಕರ್ತೆಯರಿಗೆ ಫೋನ್ ವಿತರಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ಅಂಗನವಾಡಿ ಮಗುವಿನ ಮಾಹಿತಿ ಬೆರಳು ತುದಿಯಲ್ಲಿ ಲಭ್ಯವಾಗಲಿದೆ ಎಂದರು.
ಹಲವು ಕಾರ್ಯಕರ್ತೆಯರಿಗೆ 6-12 ತಿಂಗಳವರೆಗೆ ವೇತನ ಬಾಕಿ ಇದೆ. ಇನ್ನು ಕೆಲವೆಡೆ ಮಕ್ಕಳ ಹಾಜರಾತಿ ಬಗ್ಗೆ ತಪ್ಪು ಮಾಹಿತಿ ಕೊಡಲಾಗುತ್ತಿದೆ. ಇದನ್ನು ತಪ್ಪಿಸಲು ಅಂಗನವಾಡಿಗಳಲ್ಲಿ ಇನ್ನು ಮುಂದೆ ಮಕ್ಕಳ ಹಾಜರಿಯನ್ನು ಫೇಸ್‌ರೀಡಿಂಗ್ ಯಂತ್ರದ ಮೂಲಕ ಸಂಗ್ರಹಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದೆಲ್ಲೆಡೆ ಏಕರೂಪದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಲಹೆ ನೀಡಿದರು. ಇದನ್ನೊಪ್ಪಿದ ಸಚಿವರು, ಈಗಾಗಲೇ ಹೈಟೆಕ್ ಕಟ್ಟಡದ ಡಿಸೈನ್ ಸಿದ್ಧವಾಗಿದೆ ಎಂದರು.
ನಗರದ ಬಿಎಲ್ ಗೌಡ ಲೇಔಟ್‌ನಲ್ಲಿ ಅಂಗನವಾಡಿ ಕೇಂದ್ರ ಮಂಜೂರಿಗೆ ಎಂಎಲ್‌ಸಿ ಜಯಮ್ಮ ಬಾಲರಾಜ್ ಕೋರಿದರು.
ಸಭೆಗೆ ಬಾರದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಜಿ.ಮೂಡಲಗಿರಿಯಪ್ಪಗೆ ನೋಟಿಸ್ ಜಾರಿಗೊಳಿಸುವಂತೆ ಸಿಇಒ ಸಿ.ಸತ್ಯಭಾಮಾಗೆ ಸಚಿವೆ ಸೂಚಿಸಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಕೆ.ರಾಜನಾಯಕ, ಆಹಾರ ಇಲಾಖೆ ಡಿಡಿ ಮಧುಸೂದನ್ ಇದ್ದರು.
ಸರ್ಕಾರೇತರ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್: ಅನುದಾನ ಪಡೆವ ಅನಾಥ ಆಶ್ರಮ, ಬಾಲಮಂದಿರ ಇತ್ಯಾದಿ ಸರ್ಕಾರೇತರ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್ ಹಾಜರಿ ಕಡ್ಡಾಯ. ಎನ್‌ಜಿಒಗಳ ಪೈಕಿ ಅನೇಕ ಸಂಸ್ಥೆಗಳು ನಿವಾಸಿಗಳ ಹಾಜರಿ ಕುರಿತಂತೆ ತಪ್ಪು ಲೆಕ್ಕ ಕೊಡುತ್ತಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ 15 ದಿನದೊಳಗೆ ವರದಿ ಸಲ್ಲಿಸಬೇಕೆಂದು ಶಶಿಕಲಾ ಜೊಲ್ಲೆ ಸೂಚಿಸಿದರು.
ಆಹಾರ ಇಲಾಖೆಯೆಡೆ ಅಸಮಾಧಾನ: ದುರ್ಗದಲ್ಲಿ ನಿಮ್ಮ ಇಲಾಖೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಜಿಲ್ಲೆ ಆಹಾರ ಮತ್ತು ನಾಗರಿಕರ ಇಲಾಖೆ ಅಧಿಕಾರಿಗಳೆಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಶಿಕಲಾ ಜೊಲ್ಲೆ, ಶ್ರೀಮಂತರು ಬಿಪಿಎಲ್ ಕಾರ್ಡ್ ಹೊಂದಿರುವ ಮಾಹಿತಿ ಇದ್ದು, ಜನವರಿ ಅಂತ್ಯದೊಳಗೆ ಕಾರ್ಡ್ ಹಿಂತಿರುಗಿಸಲು ಅವಕಾಶ ಇದೆ. ಒಂದು ವೇಳೆ ಒಪ್ಪಿಸದಿದ್ದಲ್ಲಿ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.