ಚಿತ್ರದುರ್ಗ: ನವಜಾತ ಶಿಶುವಿಗೆ ತಾಯಿ ಹಾಲೇ ಸಂಜೀವಿನಿ ಎಂದು ಡಿಎಚ್ಒ ಡಾ.ಸಿ.ಎಲ್. ಪಾಲಾಕ್ಷ ಹೇಳಿದರು.
ಜಿಲ್ಲಾಸ್ಪತ್ರೆಯ ಬಿ.ಸಿ. ರಾಯ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ತಾಯಿ ಹಾಲುಣಿಸಿದರೆ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಪಾಲಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 1992 ರಿಂದ ಸಪ್ತಾಹ ಆಚರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತಾಯಂದಿರಲ್ಲಿ ಒಂದಿಷ್ಟು ಅರಿವು ಮೂಡಿದೆ ಎಂದು ತಿಳಿಸಿದರು.
ಸ್ತನ್ಯಪಾನ ಒಂದು ಸಹಜ ಕ್ರಿಯೆ. ಶಿಶುವು ಸಂಪೂರ್ಣ ವಿಕಾಸಹೊಂದಿ ನ್ಯೂಮೋನಿಯಾ, ಅತಿಸಾರಭೇದಿ, ಅಪೌಷ್ಟಿಕತೆ ಇತ್ಯಾದಿ ತೊಂದರೆಗಳಿಂದ ರಕ್ಷಣೆ ಪಡೆಯಲು ಸಹಕಾರಿಯಾಗುತ್ತದೆ. ಆರು ತಿಂಗಳ ಕಾಲ ತಾಯಿ ಹಾಲನ್ನೇ ಉಣಿಸಬೇಕು. ಎದೆ ಹಾಲಿನ ಕೊರತೆ ಇಲ್ಲದೆ ಹೋದರೆ ಎರಡು ವರ್ಷ ಉಣಿಸಬಹುದು. ಇದು ಮಗುವಿನ ಬೆಳವಣಿಗೆಗೆ ಅಮೃತವಿದ್ದಂತೆ ಎಂದರು.
ಮಕ್ಕಳ ತಜ್ಞೆ ಡಾ. ಅನುರಾಧಾ ಮಾತನಾಡಿ, ಅಧ್ಯಯನದ ಪ್ರಕಾರ 100 ಮಕ್ಕಳು ಜನಿಸಿದರೆ ಹುಟ್ಟಿದ ಒಂದು ಗಂಟೆಯೊಳಗೆ ಹಾಲುಣಿಸುವ ಪ್ರಮಾಣ ಶೇ. 54 ರಷ್ಟಿದೆ. ಈ ಗುರಿ ನೂರರಷ್ಟು ಆಗಬೇಕು. ಇದರಿಂದ ತಾಯಂದಿರ ಸೌಂದರ್ಯ ಹಾಳಾಗುವುದಿಲ್ಲ ಎಂದರು.
ಮಕ್ಕಳ ತಜ್ಞ ಡಾ. ಶ್ರೀರಾಮ್, ಡಾ. ಆನಂದಪ್ರಕಾಶ್, ಡಾ. ದೇವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ , ಬಿ. ಮೂಗಪ್ಪ, ಡಿ. ಮಹಂತೇಶ್, ಕುಸುಮಾ, ಹನುಮಂತಪ್ಪ, ಕನಕಪ್ಪ ಮೇಟಿ ಉಪಸ್ಥಿತರಿದ್ದರು.