ಕೋಡಿ ಕಲ್ಲೇಶ್ವರ ಭಕ್ತರ ಆರಾಧ್ಯ ದೈವ

ಚಿತ್ರದುರ್ಗ: ಬಿಲ್ವಪತ್ರೆ ಪ್ರಿಯ ಕೆರೆ ಕೋಡಿ ಕಲ್ಲೇಶ್ವರ ಸ್ವಾಮಿ ಹೊಸದುರ್ಗ ತಾಲೂಕು ಬಾಗೂರಿನ ‘ಹೊನ್ನಸೂರೆ’ ಭಕ್ತರ ಆರಾಧ್ಯ ದೈವ.

ನೂರೊಂದು ದೇವರಿರುವ ಪುಣ್ಯಭೂಮಿ ಬಾಗೂರಿನ ಕೆರೆ ಕೋಡಿಯಲ್ಲಿ ಕಲ್ಲೇಶ್ವರ ನೆಲೆ ನಿಂತಿದ್ದೇ ಒಂದು ಪವಾಡ. ದೆಹಲಿಯಿಂದ ಭಕ್ತರು ತಮ್ಮ ಇಷ್ಟ ದೇವರುಗಳನ್ನು ಗಾಡಿಯಲ್ಲಿಟ್ಟುಕೊಂಡು ಪ್ರಯಾಣ ಬೆಳೆಸಿ ಬಾಗೂರಿನ ದೇವರಗುಡ್ಡ ತಲುಪಿದರು.

ಆಗ ಕಲ್ಲೇಶ್ವರ ಸ್ವಾಮಿ ಹೊತ್ತ ಬಂಡಿ ಹಳ್ಳದಲ್ಲಿ ಸಿಲುಕುತ್ತದೆ. ಎಷ್ಟೇ ಪ್ರಯತ್ನಿಸಿದರು ಎತ್ತಿನ ಗಾಡಿ ಮೇಲೆತ್ತಲು ಆಗಲಿಲ್ಲ. ಆಗ ಬಾಲಕನೊಬ್ಬ ನಾನು ಇದೇ ಭೂಮಿಯಲ್ಲಿ ನೆಲೆಸುತ್ತೇನೆ ಎಂದು ನುಡಿಯುತ್ತಾನೆ. ಬಳಿಕ ದೇವರನ್ನು ಕೆರೆ ಕೋಡಿಯಲ್ಲಿಟ್ಟರು. ಅಂದಿನಿಂದ ‘ಹೊನ್ನು ಒಕ್ಕಲು’ ‘ಹೊನ್ನಸೂರೆ’ ಬೆಡಗಿನವರು ಕಲ್ಲೇಶ್ವರನನ್ನು ಪೂಜಿಸುತ್ತಿದ್ದಾರೆ.

ಬಿಲ್ವಪತ್ರೆ ಪೂಜೆ: ದೇವರಿಗೆ ವರ್ಷದ 365 ದಿನವೂ ಬಿಲ್ವಪತ್ರೆಯಲ್ಲಿ ಪೂಜೆ ಮಾಡಲಾಗುತ್ತದೆ. ಅದರಲ್ಲೂ ಪ್ರತಿ ಸೋಮವಾರ ಅಭಿಷೇಕ ಮಾಡಿ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತದೆ. ಶಿವರಾತ್ರಿಯಲ್ಲಿ ಒಂದು ತಿಂಗಳು ನಿತ್ಯ ರುದ್ರಾಭಿಷೇಕ ನೆರವೇರಿಸಲಾಗುತ್ತದೆ. ಶ್ರಾವಣ ಮಾಸದ ನಾಗರಪಂಚಮಿ ಹಾಗೂ ಧರ್ನುಮಾಸದಲ್ಲಿ ಒಕ್ಕಲಿನವರು ಪೂಜೆ ಸಲ್ಲಿಸುತ್ತಾರೆ.

ಬಾಗೂರು ಕೆರೆ ಕೋಡಿ ಬಿದ್ದಾಗ ಸ್ವಾಮಿಯ ಮೂರ್ತಿ ಸಂಪೂರ್ಣ ಮುಳುಗಿ ಹೋಗುತ್ತಿತ್ತು. ಇದನ್ನು ಅರಿತ ಒಕ್ಕಲಿನವರು ದೇವರಿಗೆ ಗುಡಿ ಕಟ್ಟಿಸಿದರೂ ಮಳೆಗಾಲದಲ್ಲಿ ನೀರಿನಲ್ಲೇ ನಿಂತು ಪೂಜೆ ಮಾಡಬೇಕಿತ್ತು. ಬಳಿಕ ದೇವಸ್ಥಾನ ಸಮಿತಿ ಅಸ್ತಿತ್ವಕ್ಕೆ ಬಂದ ನಂತರ ದೇವಸ್ಥಾನದ ಸುತ್ತ ತಡೆಗೋಡೆ ನಿರ್ಮಿಸಿ ಜೀರ್ಣೋದ್ಧಾರ ಮಾಡಲಾಗಿದೆ.

ಭಕ್ತರಿಗೆ ಸೌಲಭ್ಯ: ಬಾಗೂರಿನಿಂದ ಒಂದು ಕಿಮೀ ದೂರದಲ್ಲಿರುವ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಮಿತಿ ಮೂಲ ಸೌಲಭ್ಯ ಕಲ್ಪಿಸಿದೆ. ಪ್ರಸಾದ ಕೋಣೆ, ಊಟದ ಹಾಲ್ ಹಾಗೂ ಸಮುದಾಯ ಭವನ ನಿರ್ಮಿಸಿದೆ. ಜತೆಗೆ ನೀರಿನ ವ್ಯವಸ್ಥೆ ಮಾಡಲಾಗಿದ್ದು ಶಿವರಾತ್ರಿಯಲ್ಲಿ ನಿತ್ಯ ದಾಸೋಹ ನಡೆಯುತ್ತದೆ.

ದೆಹಲಿಯಿಂದ ಬಂದ ಕೋಡಿ ಕಲ್ಲೇಶ್ವರ ಸ್ವಾಮಿಗೆ ಒಕ್ಕಲಿನವರು ಮೊದಲಿನಿಂದ ನಡೆದುಕೊಳ್ಳುತ್ತಿದ್ದಾರೆ. ಎಲ್ಲರ ಸಹಕಾರದಿಂದ ಹಂತ ಹಂತವಾಗಿ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಿವರಾತ್ರಿ, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತವೆ ಎಂದು ಕೆರೆ ಕೋಡಿ ಕಲ್ಲೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಸಿ.ಬಸವರಾಜಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *