ಚಿತ್ರದುರ್ಗ: ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರವನ್ನು ಒತ್ತಾಯಿಸಿ ಬ್ಯಾಂಕ್ ಅಧಿಕಾರಿ, ನೌಕರರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಮುಷ್ಕರಕ್ಕೆ ಚಿತ್ರದುರ್ಗದಲ್ಲಿ ಮೊದಲ ದಿನ ಶುಕ್ರವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿರುವ 222 ಬ್ಯಾಂಕ್ ಶಾಖೆಗಳ ಪೈಕಿ, ವಿವಿಧ ಖಾಸಗಿ ಬ್ಯಾಂಕ್‌ಗಳ ಶಾಖೆಗಳಲ್ಲಿ ವಹಿವಾಟು ಎಂದಿನಂತೆ ನಡೆದಿವೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಆಫ್‌ಲೈನ್ ವಹಿವಾಟು ಸಂಪೂರ್ಣ ಬಂದ್ ಆಗಿತ್ತು.
ಇದರಿಂದಾಗಿ ವಿಷಯ ಗೊತ್ತಿಲ್ಲದ ಗ್ರಾಹಕರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಬ್ಯಾಂಕ್ ಬಾಗಿಲು ಹಾಕಿದ್ದನ್ನು ನೋಡಿ ಹಿಂತಿರುಗಿದರು.
ಜಿಲ್ಲೆಯ ಎಲ್ಲ ಎಟಿಎಂಗಳಿಗೆ ಹಣ ಭರ್ತಿಯಾಗಿದ್ದರೂ ಶನಿವಾರದ ಮಧ್ಯಾಹ್ನವರೆಗೆ ಅವುಗಳಲ್ಲಿ ಗ್ರಾಹಕರಿಗೆ ಹಣ ದೊರೆಯುವ ವಿಶ್ವಾಸವಿದೆ. ಆದರೆ, ಭಾನುವಾರ ರಜೆ ಇರುವುದರಿಂದ, ಸೋಮವಾರ ಎಟಿಎಂಗಳಿಗೆ ಹಣ ಭರ್ತಿ ಮಾಡುವವರೆಗೆ ಗ್ರಾಹಕರು ಕಾಯಲೇ ಬೇಕಾಗಿದೆ.
ಎಸ್‌ಬಿಎಸ್‌ಯು ನೇತೃತ್ವದಲ್ಲಿ ಎನ್‌ಪಿಬಿಇ, ಎಐಬಿಇಎ ಸಹಿತ 9 ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ಸಂಘಟನೆಗಳ ನೂರಾರು ಸದಸ್ಯರು ನಗರದ ಬಿಡಿ ರಸ್ತೆ ಎಸ್‌ಬಿಐ ಮುಖ್ಯ ಶಾಖೆ ಬಳಿ ಜಮಾಯಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು.
ಎನ್‌ಪಿಎಸ್ ರದ್ದು ಮಾಡಬೇಕು, ಕುಟುಂಬ ಪಿಂಚಣಿ ಮೊತ್ತ ಹೆಚ್ಚಿಸಬೇಕು, ಹೊರಗುತ್ತಿಗೆ ನೇಮಕ ಸ್ಥಗಿತಗೊಳಿಸಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಸಣ್ಣ ಬ್ಯಾಂಕ್‌ಗಳಿಗೆ ಅನುಮತಿ ಕೊಡಬಾರದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರವನ್ನು ಆಗ್ರಹಿಸಿದರು.
ವೀರೇಶ್, ಪ್ರಶಾಂತ್, ಸದಾಶಿವಪ್ಪ, ಸಂತೋಷ್ ಸೇರಿ ಹಲವು ಮುಖಂಡರು ಪ್ರತಿಭಟನೆ ನೇತೃತ್ವ ವಹಿಸಿದ್ದರು.