ಮದಕರಿ ಬಗ್ಗೆ ಸುದೀಪ್ ಸ್ಪಷ್ಟನೆ

ಚಿತ್ರದುರ್ಗದ ಮದಕರಿ ನಾಯಕನ ಬಯೋಪಿಕ್​ನಲ್ಲಿ ‘ಕಿಚ್ಚ’ ಸುದೀಪ್ ನಟಿಸಲಿದ್ದಾರೆ ಮತ್ತು ಬಿಗ್ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಲಿದೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ ಟ್ರೆಂಡಿಂಗ್​ನಲ್ಲಿದೆ. ಈ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದು, ಕಳೆದ ಒಂದೂವರೆ ವರ್ಷದಿಂದ ಈ ಸಿನಿಮಾಗಾಗಿ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ. ‘ಮದಕರಿ ನಾಯಕನ ಕುರಿತ ಸಿನಿಮಾ ಮಾಡುವ ಆಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದ್ದು. ಆ ದಿಸೆಯಲ್ಲಿ ನಮ್ಮ ತಂಡ ಒಂದಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಇತ್ತೀಚೆಗೆ ಇದೇ ಕಥೆ ಆಧರಿಸಿ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು. ಸಹಜವಾಗಿಯೇ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟುಹಾಕಿತು. ಯಾರೇ ಆಗಲಿ, ಇತಿಹಾಸ ವಿಷಯಗಳ ಮೇಲೆ ಸಿನಿಮಾ ನಿರ್ವಿುಸಲು ಅರ್ಹರಿದ್ದಾರೆ’ ಎಂದೂ ಹೇಳಿದ್ದಾರೆ. ಅಂದಹಾಗೆ, ಸುದೀಪ್ ನಟಿಸಲಿರುವ ಚಿತ್ರಕ್ಕೆ ‘ದುರ್ಗದ ಹುಲಿ’ ಶೀರ್ಷಿಕೆ ಇಡಲಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. 2019ರ ವೇಳೆಗೆ ಸಿನಿಮಾ ಸೆಟ್ಟೇರಲಿದೆಯಂತೆ. ಇತ್ತೀಚೆಗೆ ‘ಮದಕರಿ ನಾಯಕ’ ಶೀರ್ಷಿಕೆಯನ್ನಿಟ್ಟುಕೊಂಡೇ ರಾಕ್​ಲೈನ್ ವೆಂಕಟೇಶ್ ಸಿನಿಮಾ ಘೋಷಣೆ ಮಾಡಿದ್ದರು. ಅದರಲ್ಲಿ ದರ್ಶನ್ ಮದಕರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನೂ ಚಿತ್ರತಂಡ ಖಚಿತಪಡಿಸಿತ್ತು.