ವಿಮಾ ಕಂಪನಿಗಳ ವಿರುದ್ಧ ರೈತರ ಕೂಗು

ಚಿತ್ರದುರ್ಗ: ಮಳೆಯಿಲ್ಲದೆ ಬೆಳೆ ನಷ್ಟಕ್ಕೀಡಾದ ಜಿಲ್ಲೆಯ ರೈತರಿಗೆ ಬೆಳೆವಿಮೆ ನೀಡಲು ವಿಮಾ ಕಂಪನಿಗಳು ನಿರ್ಲಕ್ಷೃವಹಿಸಿವೆ ಎಂದು ಆರೋಪಿಸಿ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಅನ್ನದಾತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಮಾ ಕಂಪನಿಗಳು ರೈತರ ಖಾತೆಗಳಿಗೆ ಹಣ ಜಮೆ ಮಾಡಲು ಸತಾಯಿಸುತ್ತಿವೆ. ಬೆಳೆ ನಷ್ಟ, ಇನ್‌ಪುಟ್ ಸಬ್ಸಿಡಿ ವಿತರಿಸುವಲ್ಲಿ ಉಭಯ ಸರ್ಕಾರಗಳು ವಿಫಲವಾಗಿವೆ. ಸಾಲಮನ್ನಾ ಯೋಜನೆ ಹಣ ವಾಪಸ್ ಹೋಗುತ್ತಿದೆ. ಅಂತರ್ಜಲ ಬತ್ತಿದ್ದು ತೋಟದ ಬೆಳೆ ಉಳಿಸಿಕೊಳ್ಳಲಾಗುತ್ತಿಲ್ಲ. ಇದು ಮುಂದುವರೆದರೆ ರೈತರ ಆತ್ಮಹತ್ಯೆಗೆ ಸರ್ಕಾರಗಳೇ ನೇರ ಹೊಣೆಯಾಗಲಿವೆ ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಆರ್.ಎ.ದಯಾನಂದ ಮೂರ್ತಿ, ಆರ್.ಎಸ್.ಅಮರೇಶ್, ಚಿತ್ರಲಿಂಗಪ್ಪ, ಜಯಶೀಲ ರೆಡ್ಡಿ ಇತರರು ಪಾಲ್ಗೊಂಡಿದ್ದರು.

ಡಿಸಿ ವಿರುದ್ಧ ಆಕ್ರೋಶ: ಮನವಿ ಸ್ವೀಕರಿಸಲು ಡಿಸಿ ಬರುವಿಕೆಗಾಗಿ ರೈತರು ಕಾದು ಸುಸ್ತಾದರು. ಅವರು ಬರದಿದ್ದಾಗ ಆಕ್ರೋಶಗೊಂಡು ಮನವಿ ಪತ್ರವನ್ನು ಕಚೇರಿ ಗೋಡೆಗೆ ಅಂಟಿಸಿ ಡಿಸಿ ವಿನೋತ್ ಪ್ರಿಯಾ ವಿರುದ್ಧ ಧಿಕ್ಕಾರ ಕೂಗಿದರು. ಸಂಕಷ್ಟದಲ್ಲಿರುವ ರೈತರ ನೋವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ. ಅನ್ನದಾತರು ಆತ್ಮಹತ್ಯೆಗೆ ಯತ್ನಿಸಿದರೂ ಇವರು ಸ್ಪಂದಿಸುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶಿಸುವ ಜತೆಗೆ ಡಿಸಿ ವರ್ಗಾವಣೆಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು. ಬಳಿಕ ಜಿಲ್ಲಾಧಿಕಾರಿ, ಎಡಿಸಿ ಸಂಗಪ್ಪ ಒಟ್ಟಿಗೆ ಬಂದರಾದರೂ ರೈತರು ಧಿಕ್ಕಾರ ಕೂಗಿ ಹೊರ ನಡೆದರು.

Leave a Reply

Your email address will not be published. Required fields are marked *