ಚುನಾವಣೆ ವೆಚ್ಚ ನಿಯಮ ಪಾಲಿಸಿ: ಸ್ಥಳೀಯ ಸಂಸ್ಥೆ ಅಭ್ಯರ್ಥಿಗಳಿಗೆ ಎಡಿಸಿ ಸಂಗಪ್ಪ ಸೂಚನೆ

ಚಿತ್ರದುರ್ಗ: ಮೇ 29ರಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಖರ್ಚು, ವೆಚ್ಚಗಳ ನಿರ್ವಹಣೆ ಸರಿಯಾಗಿ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ಅಭ್ಯರ್ಥಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಖರ್ಚು, ವೆಚ್ಚಗಳ ನಿರ್ವಹಣೆ ಕುರಿತಂತೆ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಮಾಹಿತಿ ಸಭೆಯಲ್ಲಿ ಮಾತನಾಡಿದರು.

ಪ್ರತ್ಯೇಕ ಮತ್ತು ಸರಿಯಾದ ಲೆಕ್ಕಪತ್ರವನ್ನು ಚುನಾವಣಾ ಫಲಿತಾಂಶ ಘೋಷಣೆ ದಿನದವರೆಗೂ ನಿರ್ವಹಿಸಬೇಕು. ಆಯೋಗ ನಿರ್ದೇಶನದಂತೆ 2 ದಿನಗಳಿಗೆ ಒಮ್ಮೆ ಸಲ್ಲಿಸಬೇಕು. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 16ಬಿ ಪ್ರಕಾರ ಚುನಾವಣಾ ಫಲಿತಾಂಶ ಘೋಷಿಸಿದ 30 ದಿನದೊಳಗೆ ಲೆಕ್ಕ ಪತ್ರ ಪ್ರತಿಯನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕು.

ಹಿಂದಿನ ಚುನಾವಣೆಗಳನ್ನು ಅವಲೋಕಿಸಿದಾಗ ಮಾಹಿತಿ ಕೊರತೆ ಕಾರಣದಿಂದ ಖರ್ಚು, ವೆಚ್ಚಗಳ ವಿವರ ನೀಡದೆ ನಿಯಮ ಉಲ್ಲಂಘಿಸಿದ ಹಲವು ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ಅನರ್ಹಗೊಳಿಸಿದ ಉದಾಹರಣೆಗಳಿವೆ ಎಂದು ಎಚ್ಚರಿಸಿದರು.

ಸ್ಥಳೀಯ ಲೆಕ್ಕ ಪರಿಶೋಧಕ ವರ್ತುಲ ಇಲಾಖೆ ಉಪ ನಿರ್ದೇಶಕ ಷಣ್ಮುಖಪ್ಪ ಮಾತನಾಡಿ, ನಗರಸಭೆೆಗೆ 2 ಲಕ್ಷ ರೂ. ಹಾಗೂ ಪಪಂಗೆ 1 ಲಕ್ಷ ರೂ. ವೆಚ್ಚದ ಮಿತಿ ನಿಗದಿಪಡಿಸಲಾಗಿದೆ ಎಂದರು.

ನಿಗದಿತ ಮೊತ್ತ ಮೀರಿ ಲೆಕ್ಕ ತೋರಿಸಿದರೆ ಕಾನೂನು ರೀತ್ಯಾ ಕ್ರಮಕ್ಕೆ ಒಳಗಾಗ ಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ವೆಚ್ಚದ ಪ್ರತ್ಯೇಕ ಲೆಕ್ಕಪತ್ರಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯಿತಿ ವಾರ್ಡ್‌ಗಳ ಅಭ್ಯರ್ಥಿಗಳು ಇದ್ದರು.

Leave a Reply

Your email address will not be published. Required fields are marked *