ಚಿತ್ರದುರ್ಗ: ಕರೊನಾ, ಓಮಿಕ್ರಾನ್ ಸೋಂಕಿನ ಆತಂಕ ಹೊಸ ವರ್ಷದ ಬಹಿರಂಗ ಆಚರಣೆಗೆ ತಡೆ ಹಾಕಿದರೂ, ಮನೆ ಅಂಗಳದಲ್ಲಿ ಕುಟುಂಬದ ಸದಸ್ಯರು, ಆಪ್ತರ ಜತೆಗೆ ಸಂಭ್ರಮಿಸಲು ಅಡ್ಡಿಯಾಗಲಿಲ್ಲ.
ಶುಕ್ರವಾರ ರಾತ್ರಿ ಹಾದಿ ಬೀದಿಯಲ್ಲಿ ಮೋಜು, ಮಸ್ತಿ ಕಾಣದಿದ್ದರೂ ಸೀಮಿತ ಅವಕಾಶದಲ್ಲಿ ಜನರು ಪರಸ್ಪರ ಖುಷಿಯನ್ನುಹಂಚಿಕೊಂಡರು.
ಡಾಬಾ, ತೋಟದ ಮನೆ, ಜಮೀನು, ನಿರ್ಜನ ಪ್ರದೇಶ ಇನ್ನಿತರ ಕಡೆಗಳಲ್ಲಿ ಸೇರುವುದು, ಕೇಕೆ, ಕುಣಿತಗಳು ಕಂಡುಬರಲಿಲ್ಲ. ಬೈಕ್‌ರೈಡ್, ಪಟಾಕಿ ಸಿಡಿಸುವುದು, ಪ್ರಮುಖ ವೃತ್ತಗಳಲ್ಲಿ ಕೇಕ್ ಕತ್ತರಿಸಿ ಕೇಕೆ ಹಾಕುವುದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿತ್ತು.
ಆದರೆ, ಮನೆಯ ಅಂಗಳ, ಛಾವಣಿಯಲ್ಲಿ ಕುಳಿತು ಕೇಕ್ ಕತ್ತರಿಸಿದರು. ನೆರೆಹೊರೆಯವರ ಜತೆಗೂಡಿ ಸಂಭ್ರಮಿಸಿದರು.
ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ರಾತ್ರಿ 10 ರ ನಂತರ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ಇರಲಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಬಹಿರಂಗ ಸಂಭ್ರಮಕ್ಕೆ ಸಂಪೂರ್ಣ ಕಡಿವಾಣ ಬಿದ್ದಿತ್ತು.
ಸಂಗೀತ ರಸಮಂಜರಿ, ಡಿಜೆ ಸದ್ದು, ಕಲಾವಿದರ ಕುಣಿತ ಎಲ್ಲಿಯೂ ಇರಲಿಲ್ಲ. ವಿದ್ಯುದ್ದೀಪಗಳ ಅಲಂಕಾರ ಕಾಣಲಿಲ್ಲ.
ಕೇಕ್: ಹೊಸ ವರ್ಷವನ್ನು ಶುಕ್ರವಾರ ರಾತ್ರಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ನಗರ, ಪಟ್ಟಣದ ಅಂಗಡಿಗಳು, ಬೇಕರಿಗಳಲ್ಲಿ ಬೆಳಗ್ಗೆಯಿಂದಲೇ ಸಿದ್ಧತೆ ನಡೆದಿದ್ದು, ಕೇಕ್‌ಗಳಿಗೆ ಸ್ವಲ್ಪಮಟ್ಟಿಗೆ ಬೇಡಿಕೆ ಹೆಚ್ಚಾಗಿತ್ತು.