ಮುರುಘಾಮಠದಲ್ಲಿ ಸಮಾಜಸೇವಾ ದೀಕ್ಷೆ ಸಮಾರಂಭ

ಚಿತ್ರದುರ್ಗ: ಪ್ರಜ್ಞೆ ಬೆಳೆಸುವ ಮೂಲಕ ಜೀವನದಲ್ಲಿರುವ ಅಜ್ಞಾನ ಹೋಗಲಾಡಿಸುವ ಕೆಲಸದಲ್ಲಿ ಶ್ರೀಮಠ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅನುಭವ ಮಂಟಪದಲ್ಲಿ ಶರಣೆ ಚಂದ್ರಮ್ಮಗೆ ಬಸವತತ್ತ್ವ ಹಾಗೂ ಸಮಾಜಸೇವಾ ದೀಕ್ಷೆಯೊಂದಿಗೆ ಶರಣೆ ಅಕ್ಕನಾಗಲಾಂಬಿಕೆ ಎಂದು ನಾಮಕರಣ ಮಾಡಿದ ಬಳಿಕ ಆಶೀರ್ವಚನ ನೀಡಿದರು.

ನಾವಿಂದು ಅನುಭಾವ, ವಚನ, ಪರಿವರ್ತನೆ, ಸಮಾನತೆ, ಸಂಸ್ಕೃತಿ ಹಾಗೂ ಪ್ರಯೋಗಶೀಲ ಯುಗಗಳಲ್ಲಿ ಇದ್ದೇವೆ. ಇವು ನಮ್ಮೆಲ್ಲರಿಗೆ ಆದರ್ಶವಾಗಿವೆ. ಶ್ರೀಮಠ ಮಗುವಿನಿಂದ ಹಿಡಿದು ಸಾಧಕರವರೆಗೆ ಪ್ರಜ್ಞಾವಂತಿಕೆಯನ್ನು ಬೆಳೆಸುವ ಕಾರ್ಯ ಮಾಡುತ್ತಿದೆ. ಮಠದಲ್ಲಿ ಮಕ್ಕಳಿಗೆ ಸ್ವಚ್ಛತೆ, ಶಾಂತಿ, ಸಹನೆ ಅರಿವು ಮೂಡಿಸುತ್ತಿದೆ ಎಂದರು.

ಸಾಧಕರಿಗೆ ಬಸವತತ್ತ್ವ ಕಲಿಸಲಾಗುತ್ತದೆಯೇ ಹೊರತು ಜ್ಯೋತಿಷ್ಯ ಕಲಿಸಲ್ಲ. ವಂಚನೆಯ ಸಾಧಕರಾಗದೇ ಸುಜ್ಞಾನ ನೀಡುವ ಮೂರ್ತಿಗಳಾಗಿ ತತ್ತ್ವ ಪ್ರಸಾರದೊಂದಿಗೆ ಸಮಾಜ ಸೇವೆ ಮಾಡಿರಿ ಎಂದರು.

ಶರಣೆ ಅಕ್ಕನಾಗಲಾಂಬಿಕೆ ಅವರಿಗೆ ವಚನ ಗ್ರಂಥಗಳನ್ನು ನೀಡಿ ಶುಭ ಹಾರೈಸಿದರು. ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಚಳ್ಳಕೆರೆ ತಾಲೂಕು ನಾಗಗೊಂಡನಹಳ್ಳಿ ಶ್ರೀ ಚಿಲುಮೆ ರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮೀಜಿ ಇದ್ದರು. ಗುರುಕುಲದ ಸಾಧಕರು ವಚನ ಪಠಣ ಮಾಡಿದರು.

Leave a Reply

Your email address will not be published. Required fields are marked *