ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ

ಚಿತ್ರದುರ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ (ಸಿಡಿಸಿಸಿ) ನಿರ್ದೇಶಕರ ಸ್ಥಾನಗಳಿಗೆ ಬ್ಯಾಂಕ್ ಆವರಣದಲ್ಲಿ ಚುನಾವಣೆ ನಡೆಯಿತು.

ಒಟ್ಟು 12 ನಿರ್ದೇಶಕರ ಸ್ಥಾನದಲ್ಲಿ 8 ಅವಿರೋಧ ಆಯ್ಕೆಯಾಗಿತ್ತು. ಉಳಿದ ನಾಲ್ಕು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಬಿ. ಮಂಜುನಾಥ, ಪಿ.ರಾಜು, ಎಚ್.ಟಿ.ನಾಗರೆಡ್ಡಿ, ಸಿ.ವೀರಭದ್ರಬಾಬು ಗೆಲುವು ಸಾಧಿಸಿದರು.

ಚುನಾವಣಾ ಅಧಿಕಾರಿ ವಿಜಯಕುಮಾರ್ ಸಂಜೆ ಫಲಿತಾಂಶ ಘೋಷಿಸಿದರು. ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೂವರ ಮೊದಲ ಪ್ರವೇಶ: 12 ನಿರ್ದೇಶಕರಲ್ಲಿ ಶಾಸಕ ಟಿ.ರಘುಮೂರ್ತಿ, ಸಿ.ವೀರಭದ್ರಬಾಬು ಹಾಗೂ ಕೆ.ಜಗಣ್ಣ ಆಡಳಿತ ಮಂಡಳಿಗೆ ಮೊದಲ ಪ್ರವೇಶ ಪಡೆದಿದ್ದಾರೆ. ಉಳಿದಂತೆ ಡಿ.ಸುಧಾಕರ್, ಎಸ್.ಆರ್.ಗಿರೀಶ್, ಎಚ್.ಬಿ.ಮಂಜುನಾಥ್, ಪಿ.ರಾಜು, ಎಚ್.ಟಿ.ನಾಗಿರೆಡ್ಡಿ, ಟಿ.ಮಹಂತೇಶ್, ಡಿ.ಎಸ್.ಶಶಿಧರ್, ಪಿ.ವಿನೋದಸ್ವಾಮಿ, ಎಂ.ನಿಶಾನಿ ಜಯಣ್ಣ ಈ ಮೊದಲು ನಿರ್ದೇಶಕರಾಗಿದ್ದರು.

30ಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮೇ 30ರಂದು ನಡೆಯಲಿದ್ದು, ಅಂದು ಬೆಳಗ್ಗೆ 9.30ರೊಳಗೆ ಬ್ಯಾಂಕ್ ಕಚೇರಿಯಲ್ಲಿನ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ವಿಜಯ ಕುಮಾರ್ ತಿಳಿಸಿದ್ದಾರೆ.