ಬೋಧನೆ ಬಹಿಷ್ಕಾರಕ್ಕೆ ನಿರ್ಧಾರ


ಚಿತ್ರದುರ್ಗ: ಬೋಧನೆ ಬಹಿಷ್ಕರಿಸುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾರಕವಾಗಿರುವ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಾ.ಶಾ.ಪದವೀಧರ ಶಿಕ್ಷಕರ ಸಂಘದ ರಾಜ್ಯ ಸಂ.ಕಾರ್ಯದರ್ಶಿ ಬಿ.ನಟರಾಜ್ ಹೇಳಿದರು.

ನಗರದ ಬಾರ್‌ಲೈನ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಜುಲೈ 1ರಿಂದ 6ರಿಂದ 8ನೇ ತರಗತಿವರೆಗೆ ಬೋಧನೆ ಬಹಿಷ್ಕರಿಸಲಿದ್ದಾರೆ. ಈಗಾಗಲೇ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಸರ್ಕಾರ ಎಲ್ಲ ಇಲಾಖೆಗಳಲ್ಲಿ ಸೇವಾ ಹಾಗೂ ವಿದ್ಯಾರ್ಹತೆ ಮೇಲೆ ಬಡ್ತಿ ನೀಡುತ್ತಿದೆ. ಆದರೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾತ್ರ ಹಿಂಬಡ್ತಿ ನೀಡಿದೆ. ಇದರಿಂದ ರಾಜ್ಯದ ಸಾವಿರಾರು ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ಈ ವಿಚಾರವಾಗಿ ನಿರಂತರ ಹೋರಾಟ ಮಾಡಿದರು ಸರ್ಕಾರ ಸ್ಪಂದಿಸುತ್ತಿಲ್ಲ. ಈ ಕಾರಣಕ್ಕೆ ಸರ್ಕಾರವೇ ನಿರ್ಧರಿಸಿದಂತೆ ನಾವು 1ರಿಂದ 5ನೇ ತರಗತಿಗೆ ಮಾತ್ರ ಬೋಧನೆ ಮಾಡುತ್ತೇವೆ ಎಂದು ಹೇಳಿದರು.

ಹೊಳಲ್ಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಖಾಟ್ರೋತ್, ಜಿಲ್ಲಾ ಸಂಘದ ಉಪಾಧ್ಯಕ್ಷ ಈರಣ್ಣ, ನಟೇಶ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *