ಕಾಡು ಕಡಿಮೆಯಾದರೆ ಮಳೆ ಕ್ಷೀಣ

ಚಿತ್ರದುರ್ಗ: ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ವೈ.ವಟವಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವಾಯುಮಾಲಿನ್ಯ ಹಿಮ್ಮೆಟ್ಟಿಸಿ’ ವಿಷಯದ ಅಂತರ್‌ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಸಕ್ತ ಸನ್ನಿವೇಶದಲ್ಲಿ ಕಾಡು ಕಡಿಮೆಯಾಗಿ ಮಳೆ ದಿನಗಳು ಕ್ಷೀಣಿಸುತ್ತಿವೆ. ಈ ಕ್ಷಣಕ್ಕೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಗಂಭೀರವಾಗಲಿದೆ ಎಂದರು.

ಪರಿಸರದಿಂದ ಮಾತ್ರ ವಾಯು ಮಾಲಿನ್ಯ ತಡೆಯಲು ಸಾಧ್ಯ. ಈ ದಿಸೆಯಲ್ಲಿ ಮಕ್ಕಳಿಗೆ ಕಾಡಿನ ಮಹತ್ವ ತಿಳಿಸಬೇಕು. ಆಗ ಮಾತ್ರ ಹವಾಮಾನ ಸರಿದೂಗಿ ಉತ್ತಮ ಮಳೆಯಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಹೇಳಿದ್ದನ್ನು ಮಕ್ಕಳು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ಲಾಸ್ಟಿಕ್ ಬಳಕೆ ತ್ಯಜಿಸಿದಲ್ಲಿ ಪರಿಸರ ಉಳಿಸುವ ಕಾರ್ಯಕ್ಕೆ ಹೆಚ್ಚಿನ ಸಹಕಾರ ದೊರೆಯಲಿದೆ ಎಂದು ಹೇಳಿದರು.

ನಗರದ 27 ಶಾಲೆಗಳಿಂದ 250 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಿರಿಯ ಪರಿಸರ ಅಧಿಕಾರಿ ಸಿ.ಡಿ.ಕುಮಾರ್, ಪರಿಸರ ತಜ್ಞ ಡಾ.ಎಚ್.ಕೆ.ಎಸ್.ಸ್ವಾಮಿ, ಉಪನ್ಯಾಸಕ ಕೆ.ಕೆ.ಕಮಾನಿ, ಪರಿಸರ ಅಧಿಕಾರಿ ಮುರುಳೀಧರ್ ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತರು ( ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಸಮಾಧಾನಕರ): ಪ್ರಾಥಮಿಕ ಶಾಲಾ ವಿಭಾಗ: ಎಚ್.ಎ.ಕಿಶನ್ (ಡಾನ್ ಬಾಸ್ಕೋ), ಆರ್.ಆಕಾಶ್ (ಶ್ರೀವಾಸವಿ ವಿದ್ಯಾಸಂಸ್ಥೆ), ಶ್ರಾವಣಿ ( ಎಸ್‌ಜೆಎಂ ಶಾಲೆ), ಹೇಮಂತ್ ನಾಯಕ್ (ಬಾಪೂಜಿ ಪಬ್ಲಿಕ್ ಶಾಲೆ), ಪಿ.ಆರ್.ರಂಗೇಗೌಡ (ಜ್ಞಾನಪೂರ್ಣ ಶಾಲೆ), ಟಿ.ಶ್ವೇತಾ (ಗುರುಕುಲ ಶಾಲೆ), ಶಾಫಿಯಾ ಫಿರ್ದೋಸ್ (ಕುವೆಂಪು ಶಾಲೆ), ಸಯ್ಯದ್ ಸಾದಿಕ್ (ರೋಟರಿ ಶಾಲೆ).

ಪ್ರೌಢಶಾಲಾ ವಿಭಾಗ: ಆರ್.ಕುಶಾಲ್ (ಪಾರ್ಶ್ವನಾಥ ಶಾಲೆ), ಜಿ.ವಿ.ನಾಗಅಮೃತಾ (ವಿದ್ಯಾವಿಕಾಸ್), ಎಸ್.ಮೇಘಾಶ್ರೀ(ಜ್ಞಾನಪೂರ್ಣ ಶಾಲೆ), ಎನ್.ಎನ್.ಸುಕೃತ್ (ಕೆ.ಕೆ.ನ್ಯಾಷನಲ್ ಶಾಲೆ), ಸ್ನೇಹಾ (ಜ್ಞಾನಭಾರತಿ), ಎಚ್.ಎಸ್.ಪ್ರೇರಣಾ (ಸೇಂಟ್ ಜೋಸೆಫ್ ಕಾನ್ವೆಂಟ್), ಎನ್.ಕಾರ್ತಿಕ್ (ನ್ಯಾಷನಲ್ ಪಬ್ಲಿಕ್ ಶಾಲೆ), ಎಚ್.ಎಸ್.ನಿತೀಶ್‌ಕುಮಾರ್ (ಸರ್ಕಾರಿ ಕೋಟೆ ಪ್ರೌಢಶಾಲೆ).

Leave a Reply

Your email address will not be published. Required fields are marked *