More

    ಧಾರಾವಾಹಿ ವೀಕ್ಷಣೆ ಗೀಳು ಕೈಬಿಡಿ

    ಚಿತ್ರದುರ್ಗ: ತಾಯಂದಿರು ಟಿ.ವಿ. ನೋಡುವುದನ್ನು ಕಡಿಮೆ ಮಾಡಿ ಮಕ್ಕಳ ಕಲಿಕೆಯತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ತಾಂಬ್ರ ವಿದ್ಯಾಲಯದ ಕಾರ್ಯದರ್ಶಿ ರಾಮಲಿಂಗಶೆಟ್ಟಿ ತಿಳಿಸಿದರು.

    ತಾಂಬ್ರ ವಿದ್ಯಾಲಯ, ಗುರುಕುಲ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ತರಾಸು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇತ್ತೀಚೆಗೆ ಮಕ್ಕಳಾದಿಯಾಗಿ ಇಡೀ ಕುಟುಂಬವೇ ಧಾರಾವಾಹಿ ವೀಕ್ಷಣೆ ಗೀಳಿಗಿಳಿಗಿದೆ. ಅದರಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಇದರಿಂದ ಮಕ್ಕಳ ಕಲಿಕಾ ಮಟ್ಟ ಕ್ಷೀಣಿಸುತ್ತದೆ. ಈ ಬಗ್ಗೆ ಪಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

    ವಾಸವಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಪಿ.ಎಲ್.ಸುರೇಶ್‌ರಾಜ್ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರ ಕಾರ್ಯ. ಗುರುಗಳು ಇದರ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮಕ್ಕಳ ಯಶಸ್ಸು ತಮ್ಮಿಂದಲೇ ಎಂಬುದನ್ನು ಮರೆಯಬಾರದು. ಪಾಲಕರೂ ಸಹ ಸಂಸ್ಕಾರ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

    ಇತ್ತೀಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಈ ಬಾರಿ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 10 ಅಭ್ಯರ್ಥಿಗಳು ಉತ್ತೀರ್ಣರಾಗಿರುವುದೇ ಇದಕ್ಕೆ ಸಾಕ್ಷಿ. ಬರದ ನಾಡಿನಲ್ಲಿ ಯಾವುದೇ ದುಡಿಮೆಯ ಮೂಲ ಇಲ್ಲ. ಹಾಗಾಗಿ ಶಿಕ್ಷಣವೊಂದೇ ಇಲ್ಲಿನ ಮಕ್ಕಳ ಜೀವಾಳ. ಶಿಕ್ಷಕರು ಈ ವಿಚಾರ ಅರಿತು ಮಕ್ಕಳನ್ನು ಸ್ಪರ್ಧಾ ಜಗತ್ತಿಗೆ ಅಣಿಗೊಳಿಸಬೇಕು ಎಂದರು.

    ಬಿಇಒ ಬಿ.ಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತಾಂಬ್ರ ವಿದ್ಯಾಲಯದ ಅಧ್ಯಕ್ಷ ಎಂ.ರತ್ನಾಕರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ವೆಂಕಟೇಶ್ ಕುಮಾರ್, ರಾಜ್‌ಕುಮಾರ್, ಮುಖ್ಯಶಿಕ್ಷಕಿ ಟಿ.ಚೂಡಾಮಣಿ, ಶಿಕ್ಷಕಿಯರಾದ ಕವಿತಾ, ರೇಣುಕಾ ಮತ್ತಿತರರಿದ್ದರು.

    ಶಿಕ್ಷಕಿಯರಾದ ವಿಜಯಲಕ್ಷ್ಮಿ ಸ್ವಾಗತಿಸಿದರು. ರಾಧ ವಂದಿಸಿದರು. ತನುಜಾ ಹಾಗೂ ಮನುಜಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts