ಪ್ರಾಬಲ್ಯ ಮೆರೆಯುವಲ್ಲಿ ಎಡವಿದ ಮೈತ್ರಿ

ಚಿತ್ರದುರ್ಗ: ನಿರೀಕ್ಷೆ ನಿಜವಾಗಿದೆ! ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭೆ ಕ್ಷೇತ್ರ ಬಿಜೆಪಿಗೆ ಬರೋಬ್ಬರಿ 32,008 ಮತಗಳ ಲೀಡ್ ಕೊಟ್ಟಿದೆ.

ಬಿಜೆಪಿಯ ಆನೇಕಲ್ ನಾರಾಯಣ ಸ್ವಾಮಿ ಗೆಲುವಿನಲ್ಲಿ ಹಾಗೂ ಮೈತ್ರಿ ಅಭ್ಯರ್ಥಿ ಚಂದ್ರಪ್ಪ ಸೋಲಿನಲ್ಲಿ ಚಿತ್ರದುರ್ಗದ್ದೂ ಸಿಂಹಪಾಲಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಅಬ್ಬರಿಸಿದ್ದ ಬಿಜೆಪಿ ಲೋಕಸಭೆ ಕಣದಲ್ಲೂ ವಿಜೃಂಭಿಸುವ ಮೂಲಕ ಪಕ್ಷ ಬೇರೂರಿದ್ದನ್ನು ಸಾಬೀತುಪಡಿಸಿದೆ.

ವಿಧಾನಸಭೆ ಕದನದಲ್ಲಿ ಜಿ.ಎಚ್.ತಿಪ್ಪಾರೆಡ್ಡಿ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಕೆ.ಸಿ.ವೀರೇಂದ್ರ ವಿರುದ್ಧ 32,226 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದರು.

ತಿಪ್ಪಾರೆಡ್ಡಿ 81,632, ವಿರೇಂದ್ರ 49406 ಹಾಗೂ ಕಾಂಗ್ರೆಸಿನ ಹನುಮಲಿ ಷಣ್ಮುಖಪ್ಪ 48638 ಮತ ಪಡೆದಿದ್ದರು. ಕ್ಷೇತ್ರದಲ್ಲಿ ಒಟ್ಟು 1,87,192 ಮತಗಳು ಚಲಾವಣೆಯಾಗಿದ್ದವು.

ಲೋಕ ಕಣದಲ್ಲಿ ಲೀಡ್ ಸಂಖ್ಯೆ 32 ಸಾವಿರದ ಗಡಿ ದಾಟಿದೆ. ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಮತಗಳಿಕೆ ಪ್ರಮಾಣ ಇಲ್ಲಿ ಏರಿಕೆ ಆಗಿದೆ.

ಈ ಪ್ರಮಾಣ ಇನ್ನಷ್ಟು ಸುಧಾರಿಸುವ ಅವಕಾಶಗಳಿದ್ದರೂ ಇದಕ್ಕೆ ಅಡ್ಡಿಯಾಗಿದ್ದು ಪಕ್ಷದ ಅಭ್ಯರ್ಥಿ ಹೆಸರು ಘೋಷಣೆ ತಡವಾಗಿದ್ದೆಂಬುದೀಗ ಸ್ಪಷ್ಟವಾಗಿದೆ.

ಮೈತ್ರಿಗೆ ಡಬಲ್ ಆಗಬೇಕಿತ್ತು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಡೆದ ಮತಗಳ ಲೆಕ್ಕಾಚಾರ ಹಾಕಿದರೆ ಮೈತ್ರಿ ಅಭ್ಯ ರ್ಥಿಗೆ 98044 ಕ್ಕೂ ಅಧಿಕ ಮತಗಳು ಬರಬೇಕಿತ್ತು. ಆದರಿಲ್ಲಿ ಬಿ.ಎನ್.ಚಂದ್ರಪ್ಪ 66,735 ಹಾಗೂ ನಾರಾಯ ಣ ಸ್ವಾಮಿ 98,743 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.

ಎರಡೂ ಪಕ್ಷಗಳ ಮೈತ್ರಿ ನಾಯಕರ ಮಟ್ಟದಲ್ಲಿ ಆಯಿತೇ ಹೊರತು, ಕಾರ್ಯಕರ್ತರವರೆಗೆ ವಿಸ್ತರಿಸಲೇ ಇಲ್ಲ ಎಂಬ ಮಾತಿಗೆ ಇದರಿಂದ ಪುಷ್ಟಿ ಸಿಕ್ಕಂತಾಗಿದೆ. ಫಲಿತಾಂಶ ಪ್ರಕಟದ ಬಳಿಕ ಮೈತ್ರಿಯಿಂದಲೇ ಪಕ್ಷಕ್ಕೆ ನಷ್ಟ ಆಯಿತು ಎಂದು ಕಾಂಗ್ರೆಸ್ ನಾಯಕರು ಬಹಿರಂಗವಾಯೇ ತಗಾದೆ ತೆಗೆದಿದ್ದಾರೆ.

ಈ ಮೂಲಕ ಪಕ್ಷ ಸಂಘಟನೆಯ ವೈಫಲ್ಯ ಮುಚ್ಚಿಟ್ಟು ಮೈತ್ರಿ ಮೇಲೆ ಸೋಲಿನ ಹೊಣೆ ಹೊರಿಸುತ್ತಿದ್ದಾರೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೂ ಜಯ ಧಕ್ಕಲಿಲ್ಲ ಎಂದು ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಸೋಲಿನ ವಿಶ್ಲೇಷಣೆ ಮಾಡಿದ್ದರೂ ಕೆಳಹಂತದಲ್ಲಿ ಕಾರ್ಯಕರ್ತರ ಮನಸ್ಸುಗಳು ಒಗ್ಗೂಡಲಿಲ್ಲ ಎಂಬುದು ಸ್ಪಷ್ಟ. ಚುನಾವಣೆ ಪೂರ್ವದಲ್ಲೇ ಹೊಂದಾಣಿಕೆ ಕೊರತೆ ನಿಚ್ಚಳವಾಗಿತ್ತು. ಈ ಅಂಶ ಕೂಡ ಚಂದ್ರಪ್ಪ ಸೋಲಿಗೆ ಕಾರಣವಾಗಿದೆ.
ಕಳೆದ ಬಾರಿ ಕಾಂಗ್ರೆಸ್-ಬಿಜೆಪಿ- ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದಾಗ ಇದರ ಲಾಭ ಪಡೆದು ಕಾಂಗ್ರೆಸ್ ಗೆದ್ದು ಬೀಗಿತ್ತು. ತ್ರಿಕೋನ ಸ್ಫರ್ಧೆ ಇದ್ದರೆ ಗೆಲುವಿನ ಸಾಧ್ಯತೆ ಹೆಚ್ಚಿತ್ತು ಎಂದು ಹೇಳಲು ಮಾಜಿ ಸಚಿವ ಆಂಜನೇಯ ಹಿಂದೇಟು ಹಾಕಿಲ್ಲ ಎಂಬುದು ವಿಶೇಷ.

ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಗಿಂದ ಲೋಕಾ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಿದೆ. ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ 17 ಸಾವಿರ ಮತಗಳು ಹೆಚ್ಚುವರಿ ಬಂದಿವೆ. ಇದು ಪಕ್ಷದ ಬಲವರ್ಧನೆಯಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *