More

    ಮುನ್ನೋಟ: ಘೋಷಿತ ಯೋಜನೆಗಳಿಗೆ ಬೇಕು ಮುಕ್ತಿ

    ಚಿತ್ರದುರ್ಗ; ಹೊಸ ವರ್ಷದ ಸಂಭ್ರಮದಲ್ಲಿ ಜಿಲ್ಲೆಯ ನಿರೀಕ್ಷೆಗಳು ಗರಿಗೆದರಿವೆ. ಘೋಷಿತ ಹೊಸ ಯೋಜನೆಗಳ ಜತೆಗೆ ಒಂದಿಷ್ಟು ಹಳೇ ಯೋಜನೆಗಳು ವೇಗ ಪಡೆದು 2020 ರ ವರ್ಷಾಂತ್ಯಕ್ಕೆ ಮುಗಿಯಬೇಕು ಎಂಬುದು ಜನರ ಅಪೇಕ್ಷೆ.

    ಭದ್ರಾ ಮೇಲ್ದಂಡೆ ಯೋಜನೆ, ಸರ್ಕಾರಿ ಮೆಡಿಕಲ್ ಕಾಲೇಜು, ದಾವಣಗೆರೆ – ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗ, ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ, ಕೋಟೆ ಅಭಿವೃದ್ಧಿಯ ಕನಸು ನನಸಾಗಬೇಕಿದೆ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು ವೇಗ ಪಡೆದು ಮುಕ್ತಾಯ ಆಗಬೇಕಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ.

    ಜಿಲ್ಲಾಧಿಕಾರಿ ಕಚೇರಿಗೆ ಸ್ಥಳ ನಿಗದಿ: ಶತಮಾನದ ಹಿಂದಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಇಂದಿನ ಆಡಳಿತಾತ್ಮಕ ಅಗತ್ಯಗಳಿಗೆ ಸಾಲುತ್ತಿಲ್ಲ. ಹೊಸ ಕಟ್ಟಡ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ 25 ಕೋಟಿ ರೂ. ಬಿಡುಗಡೆ ಮಾಡಿದ್ದರೂ ನಿರ್ಮಾಣ ಸ್ಥಳ ನಿಗದಿಯಾಗಿಲ್ಲ.

    ಮೆಡಿಕಲ್ ಕಾಲೇಜು ಯಾವಾಗ: ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆಯಾಗಿ ಮೂರು ವರ್ಷವಾಗಿದ್ದರೂ ಕಾಮಗಾರಿ ಆರಂಭಕ್ಕೆ ಚಾಲನೆ ಸಿಕ್ಕಿಲ್ಲ. ಒಂದು ರೂಪಾಯಿ ಕೂಡ ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಈ ವರ್ಷದಲ್ಲಿ ಈ ಕುರಿತು ಸ್ಪಷ್ಟ ನಿಲುವು ಕೈಗೊಳ್ಳಬೇಕಿದೆ.

    ಶಾಖಾ ಕಾಲುವೆ ನಿರ್ಮಾಣ: ಹೊಸ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಿಸಬೇಕು ಎನ್ನುವ ಪ್ರಸ್ತಾವನೆ ಇದೆ. ಭದ್ರಾ ಮೇಲ್ದಂಡೆಯಿಂದ ವಿವಿ ಸಾಗರಕ್ಕೆ ನೀರು ಹರಿಸಿದ್ದರೂ, ಶಾಖಾ ಕಾಲುವೆಗಳ ನಿರ್ಮಾಣವಾಗದ ಹೊರತು ಬರದಿಂದ ಮುಕ್ತಿ ಸಿಗುವುದಿಲ್ಲ. ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಬೇಗ ಪೂರ್ಣಗೊಳ್ಳಬೇಕಿದೆ.

    ಜವಳಿಪಾರ್ಕ್: ಮೊಳಕಾಲ್ಮೂರು: ಬರವನ್ನೇ ಹೊದ್ದು ಮಲಗಿದ ಮೊಳಕಾಲ್ಮೂರಿನ ಜನರಿಗೆ ಶುದ್ಧ ಕುಡಿವ ನೀರು, ಎಲ್ಲ ಗ್ರಾಮಗಳಿಗೆ ಸಾರಿಗೆ ಸೇವೆ, ದುಡಿವ ಕೈಗಳಿಗೆ ಕೆಲಸ, ಶೈಕ್ಷಣಿಕ ಸುಧಾರಣೆಯ ಯೋಜನೆಗಳು ರೂಪುಗೊಳ್ಳಬೇಕು. ರೇಷ್ಮೆ ಸೀರೆ ನೇಯ್ಗೆಗೆ ಹೆಸರಾದ ಊರಲ್ಲಿ ಬಹು ನಿರೀಕ್ಷಿತ ಜವಳಿ ಪಾರ್ಕ್ ನಿರ್ಮಾಣ ಆಗಬೇಕಿದೆ.

    ತಾಲೂಕಾಗಲಿ ಪರಶುರಾಮಪುರ: ಚಳ್ಳಕೆರೆ: ಪರಶುರಾಂಪುರ ಹೋಬಳಿ ಈ ವರ್ಷವಾದರೂ ತಾಲೂಕು ಕೇಂದ್ರ ಆಗಬೇಕಿದೆ. ಚಳ್ಳಕೆರೆಗೆ ನೀರೊದಗಿಸುವ 2380 ಕೋಟಿ ರೂ. ವೆಚ್ಚದ ತುಂಗಭದ್ರಾ ಹಿನ್ನೀರು ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಿದೆ. ಬಳ್ಳಾರಿ- ಬೆಂಗಳೂರು ರಸ್ತೆ ವಿಸ್ತರಣೆಯಾಗಬೇಕು.ಮಿನಿ ವಿಧಾನಸೌಧ, ಖಾಸಗಿ ಬಸ್ ನಿಲ್ದಾಣ ಶೀಘ್ರ ಜನಸೇವೆಗೆ ಮುಕ್ತವಾಗಬೇಕೆಂಬ ನಿರೀಕ್ಷೆ ಜನರದು.

    ಹಿರಿಯೂರು: ಭದ್ರಾ ಮೇಲ್ದಂಡೆಯಡಿ ವಿವಿ ಸಾಗರ ಜಲಾಶಯಕ್ಕೆ 3 ಟಿಎಂಸಿ ಬದಲು ಐದು ಟಿಎಂಸಿ ಅಡಿ ನೀರು ಹರಿಸಿದರೆ ಹಿರಿಯೂರು ಹಿರಿಹಿರಿ ಹಿಗ್ಗಲಿದೆ. ಧರ್ಮಪುರ ತಾಲೂಕು ಘೋಷಣೆ, ಧರ್ಮಪುರ ಕೆರೆಗೆ ಫೀಡರ್ ನಾಲೆ, ಬಹು ಗ್ರಾಮ ಕುಡಿವ ನೀರಿನ ಯೋಜನೆಯಡಿ 112 ಹಳ್ಳಿಗಳಿಗೆ ನೀರು, ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ, ವಿವಿ ಸಾಗರ-ಗಾಯತ್ರಿ ಜಲಾಶಯ ಬಳಿ ಪ್ರವಾಸೋಧ್ಯಮ ಅಭಿವೃದ್ಧಿ. ಸಂಗೇನಹಳ್ಳಿ ಬಳಿ ವೇದಾವತಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣದ ಕನಸು ನನಸಾಗಬೇಕಿದೆ.

    ಹೊಸದುರ್ಗ: ಇಂಜಿನಿಯರಿಂಗ್ ಕಾಲೇಜು ನಿರ್ಮಾಣದ ಕನಸು ನನಸಾಗಲಿ ಎಂಬುದು ಹೊಸದುರ್ಗದ ವಿದ್ಯಾರ್ಥಿಗಳ ಅಪೇಕ್ಷೆ. ತಾಲೂಕು ಸರ್ಕಾರಿ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಿದೆ. ರಂಗಭೂಮಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ರಂಗ ಚಟುವಟಿಕೆಗಳಿಗೆ ಸರ್ಕಾರ ಶಾಶ್ವತ ಅನುದಾನ ನೀಡಬೇಕಿದೆ. ಐತಿಹಾಸಿಕ ಪುಣ್ಯ ಕ್ಷೇತ್ರ ಹಾಲು ರಾಮೇಶ್ವರದ ಅಭಿವೃದ್ದಿಗೆ ವೇಗ ನೀಡಬೇಕು. ಒಂದು ಸಾವಿರ ಜನ ಕೂರಬಹುದಾದ ಸುಸಜ್ಜಿತ ಅಡಿಟೋರಿಯಂ ನಿರ್ಮಾಣದ ಕನಸು ನನಸಾಗಬೇಕು.

    ಹೊಳಲ್ಕೆರೆ: ತಾಲೂಕಿನ ಕೆರೆಗಳಿಗೆ ಭದ್ರಾ ನೀರು ಹರಿಸುವ ಯೋಜನೆಗೆ ವೇಗ ನೀಡುವ ಜತೆಗೆ ಆದ್ಯತೆ ಮೇಲೆ ದೊಡ್ಡ ಕೆರೆ ಅಭಿವೃದ್ಧಿಪಡಿಸಬೇಕಿದೆ. ಮಿನಿ ವಿಧಾನಸೌಧ ನಿರ್ಮಾಣ, ಬಸ್ ನಿಲ್ದಾಣ ಆಧುನೀಕರಣ ಆಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts