ಭಕ್ತ ಸಂರಕ್ಷಕ ಚೋಳೇಶ್ವರ

ಚಿತ್ರದುರ್ಗ: ಚಿತ್ರದುರ್ಗದ ಹೊರವಲಯದ ಚಿಕ್ಕ ಗ್ರಾಮ ಗಾರೇಹಟ್ಟಿ. ಇಲ್ಲಿ ಪಂಚಲಿಂಗಗಳ ಸ್ವರೂಪದಲ್ಲಿ ಶಿವ ಪೂಜೆ ಸ್ವೀಕರಿಸುತ್ತಿದ್ದಾನೆ. ಇಡೀ ಗ್ರಾಮವನ್ನು ಒಂದು ಸುತ್ತು ಹಾಕಿ ಬಂದರೆ ಮನಸ್ಸು ಶಿವಮಯ ಆಗುವುದರಲ್ಲಿ ಆಶ್ಚರ್ಯವಿಲ್ಲ.

ಚೋಳರ ಕಾಲದಲ್ಲೇ ಈ ಎಲ್ಲ ದೇವಾಲಯಗಳು ತಲೆ ಎತ್ತಿರುವುದು ವಿಶೇಷ. ಚೋಳೇಶ್ವರ, ಶ್ರೀ ಉಮಾ ಮಹೇಶ್ವರ, ಕಣ್ಣೇಶ್ವರ, ಮಹಾಬಲೇಶ್ವರ ಹಾಗೂ ಗಂಗಾಧರೇಶ್ವರ ದೇಗುಲಗಳಲ್ಲಿ ಭಕ್ತರು ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಚೋಳೇಶ್ವರ ಸ್ವಾಮಿ ದೇಗುಲ ಬೇಲೂರು ದೇವಸ್ಥಾನದ ಮಾದರಿಯಲ್ಲಿ ನಿರ್ಮಾಣವಾಗಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಬೃಹತ್ ನಂದಿ ಹಾಗೂ ಕಂಬಗಳ ಮೇಲೆ ದೇವರ ಕೆತ್ತನೆಗಳಿವೆ.

ಹೊರಗೆ ಸುಡು ಬಿಸಿಲಿದ್ದರೂ ದೇವಸ್ಥಾನ ಮಾತ್ರ ತಣ್ಣನೆಯ ವಾತಾವರಣ ಹೊಂದಿರುತ್ತದೆ. ಆವರಣದಲ್ಲಿ ಸೂರ್ಯದೇವ, ಕಾಲಭೈರವ, ಆದಿಶೇಷ ಮೂರ್ತಿಗಳಿವೆ. ಮೈಸೂರಿನಿಂದ ಬಂದ ಮಹಿಷಾಸುರ ಮರ್ದಿನಿಗೆ ಪ್ರತ್ಯೇಕ ದೇವಸ್ಥಾನ ನಿರ್ಮಿಸಲಾಗಿದೆ.

ದೇವಸ್ಥಾನ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದಾಗ ಭಕ್ತರು ಚರ್ಚೆ ನಡೆಸಿ 2011-12 ರಲ್ಲಿ ಶ್ರೀ ಚೋಳೇಶ್ವರ ಸ್ವಾಮಿ ಹಾಗೂ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡರು. ಬಳಿಕ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಮೂಲಸ್ಥಿತಿಯಲ್ಲೇ ಅಭಿವೃದ್ಧಿಗೊಳಿಸಿದ್ದಾರೆ.

ಜೀರ್ಣೋದ್ಧಾರಗೊಂಡ ದೇಗುಲ, ಧ್ಯಾನ ಸ್ಥಿತಿಯಲ್ಲಿನ ಶಿವನ ಪ್ರತಿಮೆಯ ಮಹಾದ್ವಾರ ಹಾಗೂ ಮಹಿಷಾಸುರ ಮರ್ದಿನಿ ದೇವಸ್ಥಾನವನ್ನು 2014ರಲ್ಲಿ ಧಾರ್ಮಿಕ ಕಾರ್ಯ ನಡೆಸಿ ಲೋಕಾರ್ಪಣೆಗೊಳಿಸಲಾಯಿತು. ಅಂದಿನಿಂದ ಎರಡು ದೇವರಿಗೆ ನಿತ್ಯ ಪೂಜೆ ನಡೆಯುತ್ತಿದೆ.

ಪ್ರತಿ ವರ್ಷ ಶರವನ್ನರಾತ್ರಿ, ಶಿವರಾತ್ರಿಯಲ್ಲಿ ಚೋಳೇಶ್ವರ ಸ್ವಾಮಿ, ಮಹಿಷಾಸುರ ಮರ್ದಿನಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ದಸರಾದ ಕೊನೆ ದಿನ ಗ್ರಾಮದ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದ ವರೆಗೂ ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ಅಲ್ಲಿಂದ ಹಿಂತಿರುಗಿ ಬನ್ನಿ ಮುಡಿಯಲಾಗುತ್ತದೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಿತ್ಯ ರುದ್ರಾಭಿಷೇಕ ನಡೆಸಲಾಗುತ್ತಿದೆ.

ಗಣಪತಿ ಹಬ್ಬದಲ್ಲಿ ದೇವಸ್ಥಾನದ ಆವರಣದಲ್ಲಿ ಭವ್ಯ ಮಂಟಪ ನಿರ್ಮಿಸಿ ಗಣಪತಿ ಪ್ರತಿಷ್ಠಾಪಿಸುವುದು ಸಂಪ್ರದಾಯವಾಗಿದೆ. ಆಷಾಢದಲ್ಲಿ ಹೋಳಿಗೆಮ್ಮ, ಯುಗಾದಿಯಲ್ಲಿ ಚಂದ್ರದರ್ಶನ ಹೀಗೆ ಗ್ರಾಮದ ಸಕಲ ಹಬ್ಬ ಹರಿದಿನಕ್ಕೆ ದೇಗುಲ ಸಾಕ್ಷಿಯಾಗಿದೆ.

ಚೋಳೇಶ್ವರ ಸ್ವಾಮಿ, ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ವರ್ಷ ಪೂರ್ತಿ ಧಾರ್ಮಿಕ ಕಾರ್ಯಗಳು ಬಿಡುವಿಲ್ಲದೆ ನಡೆಯುತ್ತಿವೆ. ಶಿವರಾತ್ರಿ, ದಸರಾ ಹಬ್ಬದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತವೆ. ಜತೆಗೆ ಸಮಿತಿಯಿಂದ ದೇವಸ್ಥಾದ ಅಭಿವೃದ್ಧಿ ನಡೆಯುತ್ತಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎನ್.ಬಸವರಾಜು ತಿಳಿಸಿದ್ದಾರೆ.

ಪುರಾತನ ಇತಿಹಾಸದ ದೇವಸ್ಥಾನ ಶಿಥಿಲಾವಸ್ಥೆಗೆ ತಲುಪಿದಾಗ ಗಾರೆಹಟ್ಟಿ ಭಕ್ತರ ಸಹಕಾರದಿಂದ ಎರಡು ವರ್ಷದಲ್ಲಿ ಅಭಿವೃದ್ಧಿ ಮಾಡಲಾಯಿತು. ಇದರಿಂದ ಆವರಣ ಶಿವ ಧ್ಯಾನ ಕೇಂದ್ರವಾಗಿದೆ. ಪ್ರತಿ ಸೋಮವಾರ, ಮಂಗಳವಾರ, ಶುಕ್ರವಾರ ಹೆಚ್ಚಿನ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ನಿರ್ದೇಶಕ ಬಿ.ಎಂ.ಕರಿಬಸವಯ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *