ಎಲ್ಲೆಡೆ ಗಿಡ ನೆಟ್ಟ ಸಂಭ್ರಮಿಸಿದ ಜನ

ಚಿತ್ರದುರ್ಗ: ಜಿಲ್ಲಾದ್ಯಂತ ಬುಧವಾರ ವಿಶ್ವ ಪರಿಸರ ದಿನವನ್ನು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸತತ ಬರದಿಂದ ಕಂಗೆಟ್ಟಿರುವ ಜನರ ಮನದಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿತ್ತು. ಮುಂಜಾನೆಯಿಂದಲೇ ವಿವಿಧ ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ರಸ್ತೆ ಬದು, ಸಂಸ್ಥೆ ಆವರಣ, ಗುಡ್ಡಗಾಡು ಪ್ರದೇಶಗಳಲ್ಲಿ ಗುಂಡಿ ತೆಗೆದು ಸಸಿ ನೆಟ್ಟು ನೀರುಣಿಸಿದರು. ಕೆಲವೆಡೆ ಮರಗಳನ್ನು ಕಡಿಯದಂತೆ ಅರಿವು ಮೂಡಿಸಲಾಯಿತು.

ತಾಲೂಕಿನ ಹಂಪಯ್ಯನಮಾಳಿಗೆಯಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠದಿಂದ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಬಳಿಕ ಗ್ರಾಮದಲ್ಲಿ ಯೋಗಪಟುಗಳು ಸಂಚರಿಸಿ ಜಾಗೃತಿ ಮೂಡಿಸಿದರು.

ಯೋಗ ಮಾತಾ ಲಲಿತಾ ಬೇದ್ರೆ, ಯೋಗ ಪ್ರಚಾರಕ ರವಿ ಕೆ.ಅಂಬೇಕರ್, ಮುಖಂಡರಾದ ಮಹಾಲಿಂಗಪ್ಪ, ಶ್ರವಿಕಾ, ಅಂಜಿನಪ್ಪ, ವಿನಾಯಕ ಇತರರಿದ್ದರು.

ನಗರದ ಜೋಗಿಮಟ್ಟಿ ರಸ್ತೆಯ ಬಿಸಿಎಂ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು. ಪರಿಸರ ದಿನಾಚರಣೆ ಜೂನ್ 5ಕ್ಕೆ ಸಿಮೀತವಾದರೆ ಯಾವುದೇ ಪ್ರಯೋಜನವಿಲ್ಲ. ಪ್ರತಿ ದಿನ ಪರಿಸರ ದಿನವಾಗಬೇಕು. ನಮ್ಮ ಸುತ್ತಮುತ್ತಲಿನ ಗಿಡಮರಗಳನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ನಿಲಯ ಮೇಲ್ವಿಚಾರಕಿ ದೀಪಾರಾಣಿ ತಿಳಿಸಿದರು.

ಚಂದ್ರವಳ್ಳಿ ಆವರಣದಲ್ಲಿ ಸಾಹಿತಿ ಬಸವರಾಜ್ ಟಿ.ಬೆಳಗಟ್ಟ ಬಳಗದವರು ಬುಧವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು.

ಲೇಖಕ ಆನಂದ್ ಕುಮಾರ್ ಮಾತನಾಡಿ, ಪ್ರಕೃತಿ ಮನುಷ್ಯನಿಗೆ ಮೂಲ ಆಧಾರ. ಪರ್ವತ, ಬೆಟ್ಟ, ಗುಡ್ಡ, ಗಿಡ-ಮರಗಳು ಮಾನವನ ದುರಾಸೆಗೆ ನಾಶವಾಗುತ್ತಿವೆ. ಮಳೆ-ಬೆಳೆಯಿಲ್ಲದೆ ರೈತನ ಬದುಕು ಬರಡಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಪರಿಸರ ರಕ್ಷಿಸಬೇಕಾಗಿದೆ ಎಂದರು.

ಪ್ರಾಧ್ಯಾಪಕ ಮೂರ್ತಿ ಮಾತನಾಡಿ, ಪ್ರಕೃತಿ ಎಲ್ಲರ ಜೀವನಾಡಿ. ಆದ್ದರಿಂದ ಯಾರು ಪರಿಸರ ಬಿಟ್ಟು ಬದುಕಲು ಆಗುವುದಿಲ್ಲ. ಈ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿ ಬಸವರಾಜ್ ಟಿ.ಬೆಳಗಟ್ಟ, ಲಕ್ಷ್ಮಣ್, ಶಿವರುದ್ರಪ್ಪ ಪಂಡರಹಳ್ಳಿ, ಗಂಗಾಧರ್, ಉಮಾಶಂಕರ್ ಇದ್ದರು.

Leave a Reply

Your email address will not be published. Required fields are marked *