ಕೋಲ್ಕತ ಪೊಲೀಸ್​ ಕಮಿಷನರ್​ ನಿವಾಸದ ಬಳಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಪೊಲೀಸರು

ಕೋಲ್ಕತ: ಬಹುಕೋಟಿ ಚಿಟ್​ಫಂಡ್​ ಹಗರಣದ ಸಂಬಂಧ ಕೋಲ್ಕತ ಪೊಲೀಸ್​ ಕಮಿಷನರ್​ ರಾಜೀವ್​ ಕುಮಾರ್​ ಅವರ ವಿಚಾರಣೆ ನಡೆಸಲು ಆಗಮಿಸಿದ್ದ ಐವರು ಸಿಬಿಐ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

ಕೋಲ್ಕತದ ಪಾರ್ಕ್​ ಸ್ಟ್ರೀಟ್​ನಲ್ಲಿರುವ ರಾಜೀವ್​ ಕುಮಾರ್​ ಅವರ ನಿವಾಸದ ಬಳಿ ಬಂದ ಸಿಬಿಐ ಅಧಿಕಾರಿಗಳ ತಂಡವನ್ನು ಮೊದಲಿಗೆ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ಸೆಂಟ್ರಿ ಮತ್ತು ಸಿಬಿಐ ಅಧಿಕಾರಿಗಳ ನಡುವೆ ಸಣ್ಣ ಪ್ರಮಾಣದ ಜಟಾಪಟಿ ನಡೆದಿದೆ. ಆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಜೀವ್​ ಕುಮಾರ್​ ಅವರು ರೋಸ್​ ವ್ಯಾಲಿ ಮತ್ತು ಶಾರದಾ ಚಿಟ್​ ಫಂಡ್​ ಹಗರಣದ ತನಿಖೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವೊಂದು ದಾಖಲೆಗಳು ನಾಪತ್ತೆಯಾಗಿತ್ತು. ಈ ಸಂಬಂಧ ಸಿಬಿಐ ರಾಜೀವ್​ ಕುಮಾರ್​ ವಿಚಾರಣೆ ನಡೆಸಲು ಸಮನ್ಸ್​ ನೀಡಿತ್ತು. ಆದರೆ ಸಿಬಿಐ ನೀಡಿದ ಸಮನ್ಸ್​ಗಳಿಗೆ ರಾಜೀವ್​ ಕುಮಾರ್​ ಉತ್ತರಿಸಿರಲಿಲ್ಲ.

ಕಮಿಷನರ್​ ನಿವಾಸಕ್ಕೆ ಮಮತಾ ಭೇಟಿ

ಸಿಬಿಐ ಅಧಿಕಾರಿಗಳು ಕೋಲ್ಕತ ಕಮಿಷನರ್​ ನಿವಾಸದ ಬಳಿ ತೆರಳಿರುವ ಸುದ್ದಿ ತಿಳಿದ ತಕ್ಷಣ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ರಾಜೀವ್​ ಕುಮಾರ್​ ಅವರನ್ನು ಬೆಂಬಲಿಸಿ ಟ್ವೀಟ್​ ಮಾಡಿದ್ದು, ಬಿಜೆಪಿ ರಾಜಕೀಯ ದ್ವೇಷದಿಂದ ಹೀಗೆ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ. (ಏಜೆನ್ಸೀಸ್​)