ಜುಗಾರಿ ಕ್ರಾಸ್​ನಲ್ಲಿ ಚಿರು ಪಯಣ

ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಬರೆದ ‘ಜುಗಾರಿ ಕ್ರಾಸ್’ ಕೃತಿಯನ್ನು ಸಿನಿಮಾ ಮಾಡಬೇಕು ಎಂಬ ಪ್ರಯತ್ನ ಹಲವು ವರ್ಷಗಳ ಹಿಂದೆಯೇ ನಡೆದಿತ್ತು. ಹಲವರು ಪ್ರಯತ್ನಿಸಿದ್ದಾಗಿಯೂ ಅದು ಸಾಧ್ಯವಾಗಿರಲಿಲ್ಲ. ಈಗ ನಿರ್ವಪಕ ‘ಕಡ್ಡಿಪುಡಿ’ ಚಂದ್ರು ಅದರ ಹಕ್ಕುಗಳನ್ನು ಪಡೆದುಕೊಂಡಿದ್ದು, ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ‘ಜುಗಾರಿ ಕ್ರಾಸ್’ ಸಿದ್ಧವಾಗುತ್ತಿದೆ. ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸಲಿರುವ ಈ ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಲಾಯಿತು. ನಟರಾದ ಪುನೀತ್ ರಾಜ್​ಕುಮಾರ್ ಮತ್ತು ಯಶ್ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.

ತೇಜಸ್ವಿಯವರು ‘ಜುಗಾರಿ ಕ್ರಾಸ್’ ಬರೆದಿದ್ದು 1994ರಲ್ಲಿ. ಅದಾಗಿ ಎರಡು ದಶಕ ಕಳೆದಿದೆ. ಈಗ ಆ ಕಥೆ ಎಷ್ಟು ಪ್ರಸ್ತುತ ಆಗಲಿದೆ? ‘ಇಂದಿನ ಕಾಲಘಟ್ಟಕ್ಕೆ ಅನ್ವಯ ಆಗುವ ರೀತಿಯಲ್ಲಿ ಈ ಚಿತ್ರವನ್ನು ಮಾಡಲಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ನಾಗಾಭರಣ. ಎಷ್ಟೋ ಜನರ ಪ್ರಯತ್ನದ ಬಳಿಕ ತಮಗೆ ಈ ಕೃತಿಯಾಧಾರಿತ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ ಚಿರಂಜೀವಿ. ‘ನನ್ನ ಮೇಲೆ ನಂಬಿಕೆ ಇಟ್ಟು ನಿರ್ದೇಶಕರು ಈ ಅವಕಾಶ ನೀಡಿದ್ದಾರೆ. ಈ ಸಿನಿಮಾ ಮೇಲೆ ಸಿನಿಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಸಾಕಷ್ಟು ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಚಿತ್ರವನ್ನು ಕಟ್ಟಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಪಾತ್ರಕ್ಕಾಗಿ ತುಂಬ ತಯಾರಿ ಮಾಡಿಕೊಳ್ಳಬೇಕಿದೆ’ ಎಂಬುದು ಚಿರು ಮಾತು. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮವಾಗಿಲ್ಲ. ರಂಗಾಯಣ ರಘು, ಕರಿಸುಬ್ಬು ಮುಂತಾದವರು ನಟಿಸಲಿದ್ದಾರೆ. ಆದರೆ ಯಾರಿಗೆ ಯಾವ ಪಾತ್ರ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ‘ಜುಗಾರಿ ಕ್ರಾಸ್’ಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಆದರೆ ಚಿತ್ರದಲ್ಲಿ ಯಾವುದೇ ಹಾಡುಗಳು ಇರುವುದಿಲ್ಲವಂತೆ! ಹಾಡುಗಳ ಬದಲಿಗೆ ತ್ರಿಪದಿಗಳನ್ನು ಬಳಸಲು ನಾಗಾಭರಣ ಯೋಜನೆ ರೂಪಿಸಿದ್ದಾರೆ. ಸದ್ಯಕ್ಕೆ ಲೊಕೇಷನ್ ಹುಡುಕಾಟದಲ್ಲಿ ತಂಡ ತೊಡಗಿಸಿಕೊಂಡಿದೆ.