ಪೂರ್ಣ ತಗ್ಗಿತು ತುಂಗಭದ್ರೆ ಪ್ರವಾಹ

>>

>>

ಹರಪನಹಳ್ಳಿ: ನೆರೆಹಾವಳಿಗೆ ನಲುಗಿದ್ದ ತುಂಗಭದ್ರಾ ನದಿ ಪಾತ್ರದ ಜನತೆ ಶನಿವಾರ ಸಹಜ ಸ್ಥಿತಿಗೆ ಹಿಂದಿರುಗುತ್ತಿದ್ದರೂ ಗರ್ಭಗುಡಿ-ಹಲುವಾಗಲು ಸಂಪರ್ಕ ರಸ್ತೆ ಮಾತ್ರ ಜಲಾವೃತವಾಗಿಯೇ ಇವೆ.

ನದಿ ಪ್ರವಾಹ ಇಳಿಮುಖದಿಂದ ನಿಟ್ಟೂರು, ತಾವರಗುಂದಿ, ನಿಟ್ಟೂರು ಬಸಾಪುರ, ಕಡತಿ, ನಂದ್ಯಾಲ, ಹಲುವಾಗಲು ಹಾಗೂ ಗರ್ಭಗುಡಿ ಗ್ರಾಮಸ್ಥರು ನಿರಾಳರಾಗಿದ್ದಾರೆ.

ಹಲುವಾಗಲು ಸಮೀಪದ ಶಿವನಹಳ್ಳ ಮತ್ತು ಗರ್ಭಗುಡಿ ಬಳಿಯ ಹಳ್ಳಗಳೆರಡೂ ತುಂಬಿ ಹರಿಯುತ್ತಿರುವ ಕಾರಣ ವಾಹನ ಸಂಚಾರ ಇನ್ನೂ ಸುಗಮವಾಗಿಲ್ಲ. ಜಲಾವೃತಗೊಂಡಿದ್ದ ಕಣವಿ, ಹಲುವಾಗಲು, ನಿಟ್ಟೂರು ಬಸಾಪುರ, ಕಡತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಸರಿದಿದ್ದು ಎಂದಿನಂತೆ ಸಂಚಾರ ಆರಂಭವಾಗಿದೆ.

ಗರ್ಭಗುಡಿಯಲ್ಲಿ ಮಲ್ಲಜ್ಜನಕಟ್ಟೆವರೆಗೆ ಜಮಾಯಿಸಿದ್ದ ನೀರು ಕಡಿಮೆ ಆಗಿದೆ. ಜಾಕ್‌ವೆಲ್ ಸಮೀಪವೂ ಒಂದೆರಡು ಅಡಿ ಇಳಿಮುಖವಾಗಿದೆ. ನಿಟ್ಟೂರು ಗ್ರಾಮದಲ್ಲಿ ನದಿವರೆಗಿನ ರಸ್ತೆ ತೀವ್ರ ಹದಗೆಟ್ಟಿದೆ. ನಿಟ್ಟೂರು ಬಸಾಪುರದಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗೆ ನುಗ್ಗಿದ್ದ ನೀರು ಇಳಿಮುಖವಾಗುತ್ತಿದೆ.

ಹೂವಿನ ಹಡಗಲಿ ತಾಲೂಕಿನ ರಾಜವಾಳ ಬಳಿ ಡ್ಯಾಂನ ಎಲ್ಲ ಗೇಟ್ ತೆರೆದು ನೀರು ಹೊರ ಬಿಡುತ್ತಿರುವ ಕಾರಣ ನದಿಪಾತ್ರದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಪ್ರವಾಹದಲ್ಲಿ ಬೋಟ್‌ಗಳು, ಮೀನಿನ ಬಲೆಗಳು, ಭತ್ತ, ಮೆಕ್ಕೆಜೋಳದ ಬೆಳೆಗಳು ಕೊಚ್ಚಿ ಹೋಗಿವೆ. ಪ್ರಾಥಮಿಕ ಸಮೀಕ್ಷೆ ಪ್ರಕಾರ 1400 ಎಕರೆ ಭತ್ತದ ಬೆಳೆ ನಾಶವಾಗಿದೆ.

ಶಾಸಕರಿಂದ ಹಾನಿ ಸಮೀಕ್ಷೆ ವಿವರಣೆ: ತಾಲೂಕಿನ ನದಿಪಾತ್ರದಲ್ಲಿ ನೆರೆಹಾವಳಿಯಿಂದ ಉಂಟಾಗಿರುವ ಹಾನಿಯನ್ನು ಸಮೀಕ್ಷೆ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ತಾಲೂಕಿನ ನಿಟ್ಟೂರು ಬಸಾಪುರ ಸಮೀಪ ಶನಿವಾರ ಬೆಳೆಹಾನಿ ವೀಕ್ಷಣೆ ಬಳಿಕ ಮಾತನಾಡಿ, ಹಲುವಾಗಲು-ಗರ್ಭಗುಡಿ ಸಮೀಪ 5 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ದೋಣಿ, ಬಲೆ ಕಳೆದುಕೊಂಡಿರುವ ಮೀನುಗಾರರಿಗೂ ಪರಿಹಾರ ಕಲ್ಪಿಸಲು ಕ್ರಮ ಜರುಗಿಸಲಾಗುವುದು. ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು ಹಾನಿಯ ಬಗ್ಗೆ ವರದಿ ಸಲ್ಲಿಸಲು ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಸೂಚಿಸಲಾಗಿದೆ ಎಂದರು.

ಪ್ರಾಥಮಿಕ ಸರ್ವೆ ಪ್ರಕಾರ 1400 ಎಕರೆ ಬೆಳೆ ಹಾನಿಯಾಗಿದೆ. 3-4 ದಿನದಲ್ಲಿ ಸಮೀಕ್ಷೆ ಮುಕ್ತಾಯಗೊಳ್ಳಲಿದ್ದು, ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿ, ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಪ್ರವಾಹ ಸಂದರ್ಭದಲ್ಲಿ ಜಲಾವೃತಗೊಳ್ಳುವ ಗರ್ಭಗುಡಿ- ಹಲುವಾಗಲು, ಕಡತಿ-ನಿಟ್ಟೂರು, ಕಣವಿ-ಹಲುವಾಗಲು, ನಂದ್ಯಾಲ, ನಿಟ್ಟೂರು ಬಸಾಪುರ, ಮತ್ತೂರು, ಯರಬಾಳು ರಸ್ತೆಗಳಲ್ಲಿರುವ ಹಳ್ಳಗಳ ಮೇಲೆ ಮೇಲು ಸೇತುವೆ ನಿರ್ಮಾಣಕ್ಕೆ ಬೃಹತ್ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಗರ್ಭಗುಡಿ ಸಮೀಪ ಜಾಕ್‌ವೆಲ್ ತೆರಳಲು ರೈತರ ಜಮೀನಿನಲ್ಲಿ 70 ಸೆಂಟ್ಸ್ ರಸ್ತೆಯನ್ನು ಪುರಸಭೆ ಅಕ್ರಮಿಸಿದೆ. ಜಿಲ್ಲಾಧಿಕಾರಿಗಳು ರೈತರಿಗೆ 3 ಲಕ್ಷ ರೂ. ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಆದರೆ, ರೈತರು ಪರಿಹಾರದ ಬದಲು ಜಮೀನು ಕೊಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ತಹಸೀಲ್ದಾರ್‌ಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಮ್ಯಾಂಗ್‌ನೀಸ್ ನಿಕ್ಷೇಪ ಘಟಕ ಆರಂಭಕ್ಕೆ ವಟ್ಲಹಳ್ಳಿ, ಕಡತಿ ಸೇರಿ ವಿವಿಧ ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು.

ಜಿಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಬಿಜೆಪಿ ಅಧ್ಯಕ್ಷ ಲಕ್ಷ್ಮಣ, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಉಪಾಧ್ಯಕ್ಷ ಸತ್ಯನಾರಾಯಣ, ತಾಪಂ ಉಪಾಧ್ಯಕ್ಷ ಮಂಜನಾಯ್ಕ, ಲೋಕೇಶ್, ಸಣ್ಣಹಾಲಪ್ಪ, ಬಾಗಳಿ ಕೊಟ್ರೇಶ್, ಎಂ.ಪಿ.ನಾಯ್ಕ, ಹನುಮಂತಪ್ಪ, ಲಕ್ಕಪ್ಪ, ಮೆಹಬೂಬ್‌ಸಾಬ್, ಸತ್ತೂರು ಹಾಲೇಶ್, ಯು.ಪಿ.ನಾಗರಾಜ್, ಸಂತೋಷ, ಕೃಷ್ಣ, ಕರೇಗೌಡ್ರು, ತಿರುಪತಿ ಇತರರಿದ್ದರು.

 

ದಾವಣಗೆರೆಯ ದೇವರಬೆಳಕೆರೆ ಪಿಕಪ್ ಜಲಾಶಯದಿಂದ ಧುಮ್ಮಿಕ್ಕಿ ಹರಿಯುತ್ತಿರುವ ನೀರು ನೋಡುಗರ ಕಣ್ಮನ ಸೆಳೆಯುತ್ತಿದೆ.

 

ನಿಟ್ಟೂರು, ಕಡತಿ, ನಿಟ್ಟೂರು ಬಸಾಪುರ ರಸ್ತೆಯ ಪಕ್ಕದ ಗದ್ದೆಗಳಿಗೆ ನೀರು ನುಗ್ಗಿ ಉಂಟಾಗಿರುವ ಹಾನಿಯನ್ನು ಶಾಸಕ ಜಿ. ಕರುಣಾಕರ ರೆಡ್ಡಿ ಪರಿಶೀಲಿಸಿದರು.