ಗಂಗಮ್ಮ ದೇಗುಲ ಪ್ರಸಾದ ದುರಂತ: ಪ್ರಕರಣದಲ್ಲಿ ಮೂವರ ಭಾಗಿ ದೃಢ ಎಂದ ಐಜಿಪಿ

ಚಿಕ್ಕಬಳ್ಳಾಪುರ: ಚಿಂತಾಮಣಿಯ ಗಂಗಾಭವಾನಿ ದೇಗುಲದ ಪ್ರಸಾದ ದುರಂತ ಪ್ರಕರಣ‌ವನ್ನು ಬೇಧಿಸಿರುವ ಚಿಕ್ಕಬಳ್ಳಾಪುರ ಪೊಲೀಸರಿಗೆ 50 ಸಾವಿರ ರೂ. ಬಹುಮಾನವನ್ನು ಘೋಷಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್, ಪ್ರಕರಣದಲ್ಲಿ ಮೂವರು ಭಾಗಿಯಾಗಿರುವುದು ದೃಢಪಟ್ಟಿದೆ. ಲಕ್ಷ್ಮೀ, ಅಮರಾವತಿ, ಪಾರ್ವತಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಲಕ್ಷ್ಮೀ ಪ್ರಿಯಕರ ಲೋಕೇಶ್ ಹಸ್ತಕ್ಷೇಪ ಇನ್ನೂ ದೃಢಪಟ್ಟಿಲ್ಲ. ಚಿನ್ನಾಭರಣಕ್ಕೆ ಬಳಸುವ ನವಸಾಗರ ಬಳಸಿ ಆರೋಪಿ ಲಕ್ಷ್ಮೀ ಕೃತ್ಯ ಎಸಗಿದ್ದರು. ಮೃತ ಸರಸ್ವತಮ್ಮ ಹಾಗೂ ಮಗಳನ್ನು ಕೊಲ್ಲುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಕಲಬೆರಕೆ ಮಾಡಿದ್ದರು ಎಂದು ತಿಳಿಸಿದರು.

ಎರಡು ಡಬ್ಬಿಗಳಲ್ಲಿ ಪ್ರಸಾದ ತಯಾರಿಸಿದ್ದ ಲಕ್ಷ್ಮೀ, ನವಸಾಗರ ಬೆರೆಸಿದ ಚಿಕ್ಕ ಬಾಕ್ಸ್‌ ಅನ್ನು ಗೌರಿ ಮನೆಯವರಿಗೆ ಹಂಚುವಂತೆ ಅಮರಾವತಿ ಎಂಬಾಕೆಗೆ ಹೇಳಿದ್ದಳು. ಈ ಬಗ್ಗೆ ಅಮರಾವತಿ ಪ್ರಶ್ನಿಸಿದಾಗ, ನಮಗೂ ಲೋಕೇಶ್ ಕುಟುಂಬಕ್ಕೆ ವೈರತ್ವ ಇದೆ ಎಂದಿದ್ದಳು. ಇದೇ ರೀತಿ ಈ ಹಿಂದೆ ಮೂರು ಭಾರಿ ಪ್ರಸಾದ ಹಂಚಲಾಗಿತ್ತು. ಈ ರೀತಿಯ ಪ್ರಸಾದ ಸೇವಿಸಿದ್ದ ಗೌರಿ ವಾಂತಿ ಭೇದಿಯಿಂದ ನರಳಿದ್ದರು ಎಂದು ಆರೋಪಿಗಳು ಪೊಲೀಸರ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಲಕ್ಷ್ಮಿ, ಅಮರಾವತಿ, ಪಾರ್ವತಮ್ಮ ಮೇಲೆ 307, 120B, 328, 302 ಕಲಂ ನಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಬೇಧಿಸಿದ ಪೊಲಿಸರಿಗೆ 50,000 ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜ. 26ರಂದು ಚಿಂತಾಮಣಿ ನಗರದ ನಾರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಕವಿತಾ(28) ಎಂಬಾಕೆ ಮೃತಪಟ್ಟಿದ್ದರು. ಅದಾದ ಬಳಿಕ ಅಂದೇ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ನಿವಾಸಿ ಸರಸ್ವತಮ್ಮ (56) ಎಂಬವರು ಕೋಲಾರ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಒಟ್ಟು 30 ಮಂದಿ ಪ್ರಸಾದ ಸೇವಿಸಿದ್ದರು ಎನ್ನಲಾದವರಲ್ಲಿ 9 ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. (ದಿಗ್ವಿಜಯ ನ್ಯೂಸ್)