23 ಮಕ್ಕಳಿಗೆ ವಿಷಾಹಾರ ಉಣಿಸಿದ್ದ ಕಿಂಡರ್​ ಗಾರ್ಡನ್​ ಶಿಕ್ಷಕಿಯ ಬಂಧನ, ಸೋಡಿಯಂ ನೈಟ್ರೇಟ್​ ಬೆರೆಸಿದ್ದ ಪಾತಕಿ

ಬೀಜಿಂಗ್​: ಚೀನಾದ ಹೆನನ್​ ಪ್ರಾಂತ್ಯದ ಕಿಂಡರ್​ ಗಾರ್ಡನ್​ನಲ್ಲಿ 23 ಮಕ್ಕಳಿಗೆ ವಿಷವುಣಿಸಿದ್ದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಆಹಾರದಲ್ಲಿ ಸೋಡಿಯಂ ನೈಟ್ರೇಟ್​ ರಾಸಾಯನಿಕ ಬೆರೆಸಿದ ಆರೋಪದಲ್ಲಿ ಈಕೆಯನ್ನು ಬಂಧಿಸಲಾಗಿದೆ.

ಈಕೆ ನೀಡಿದ್ದ ವಿಷದ ಆಹಾರವನ್ನು ಸೇವಿಸಿದ್ದ 23 ಮಕ್ಕಳು ಅಸ್ವಸ್ಥಗೊಂಡಿದ್ದವು. ಅವುಗಳ ಪೈಕಿ 15 ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ 7 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಿಯಾಝೌ ನಗರದ ಮೆಂಗ್​ಮೆಂಗ್​ ಕಿಂಡರ್​ ಗಾರ್ಡನ್​ನಲ್ಲಿ ಮಾ.27ರಂದು ಮಕ್ಕಳೆಲ್ಲರೂ ಸಾಮೂಹಿಕವಾಗಿ ಅಸ್ವಸ್ಥಗೊಂಡಿದ್ದರು. ಮಕ್ಕಳ ಕಕ್ಕಿದ್ದನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಡಿಯಂ ನೈಟ್ರೇಟ್​ ಅಂಶ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಾಂಗ್​ ಎಂಬ ಶಿಕ್ಷಕಿಯನ್ನು ಬಂಧಿಸಲಾಗಿದೆ. ಮಕ್ಕಳು ಸೇವಿಸಿದ್ದ ಅಂಬಲಿಯಂಥ ಪದಾರ್ಥದಲ್ಲಿ ಈಕೆ ಸೋಡಿಯಂ ನೈಟ್ರೇಟ್​ ಅನ್ನು ಬೆರೆಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾನ್ಯವಾಗಿ ಸಂಸ್ಕರಿತ ಮಾಂಸ ಹಾಗೂ ಮೀನುಗಳನ್ನು ಸುದೀರ್ಘಕಾಲ ತಾಜವಾಗಿರಿಸಲು ಅಲ್ಪಪ್ರಮಾಣದ ಸೋಡಿಯಂ ನೈಟ್ರೇಟ್​ ಬಳಸಲಾಗುತ್ತದೆ. ಆದರೆ, ಬಳಕೆಯ ಪ್ರಮಾಣ ಸ್ವಲ್ಪ ಹೆಚ್ಚಾದರೂ ಆಹಾರ ವಿಷವಾಗುತ್ತದೆ. (ಏಜೆನ್ಸೀಸ್​)