ಚಿಂಚೋಳಿ: ತಾಲೂಕಿನಾದ್ಯAತ ಸೆ.7ರಂದು ಗಣೇಶ ಚೌತಿ, ಸೆ.16ರಂದು ಈದ್ ಮಿಲಾದ್ ಹಬ್ಬವನ್ನು ಸರ್ಕಾರದ ಮಾರ್ಗಸೂಚಿಯಂತೆ ಆಚರಣೆ ಮಾಡಬೇಕು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಸೂಚನೆ ನೀಡಿದರು.
ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಣೇಶ ಉತ್ಸವ ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡಬೇಕು. ಪರಿಸರ ಗಣಪನನ್ನು ಪ್ರತಿಷ್ಠಾಪಿಸಬೇಕು. ಅನುಮತಿ ನೆಪದಲ್ಲಿ ಗಣೇಶ ಮಂಡಳಿಗಳ ಪ್ರಮುಖರನ್ನು ಅಲೆದಾಡಿಸುವಂತಿಲ್ಲ. ಪುರಸಭೆ ಕಚೇರಿಯಲ್ಲೇ ಪೊಲೀಸ್, ಅಗ್ನಿಶಾಮಕ, ಜೆಸ್ಕಾಂ ಹಾಗೂ ಪುರಸಭೆ ಅಧಿಕಾರಿಗಳ ಕೌಂಟರ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಗಣೇಶ ವಿಸರ್ಜನೆಯನ್ನು ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ನಿಗದಿ ಪಡಿಸಿದ ಸ್ಥಳದಲ್ಲಿಯೇ ರಾತ್ರಿ 9ಕ್ಕೆ ಪೂರ್ಣಗೊಳಿಸಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಕೆರೆ, ಜಲಾಶಯಗಳಲ್ಲಿ ಗಣೇಶ ವಿಸರ್ಜನೆ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ತಾಪಂ ಇಒ ಶಂಕರ ರಾಠೋಡ್, ಸಿಪಿಐ ಎಚ್.ಎಲ್.ಗೌಂಡಿ, ಪಿಎಸ್‌ಐ ಗಂಗಮ್ಮ, ಟಿಎಚ್‌ಒ ಡಾ.ಮಹ್ಮದ್ ಗಫಾರ್, ಪುರಸಭೆ ಅಧಿಕಾರಿ ಆನಂದ, ಪ್ರಮುಖರಾದ ಬಸವರಾಜ ಬೇಳಕೇರಿ, ಬಸವರಾಜ ಚನ್ನೂರ, ರಾಜಶೇಖರ ಹಿತ್ತಲ್ ಇತರರಿದ್ದರು.