ಕೈ ಕೋಟೆ ಭೇದಿಸಲು ಕೇಸರಿಪಡೆ ತಂತ್ರ: ಡಾ.ಅವಿನಾಶ, ಸುಭಾಷ ಮಧ್ಯೆ ಬಿಗ್ ಫೈಟ್

|ಜಯತೀರ್ಥ ಪಾಟೀಲ ಕಲಬುರಗಿ

ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ ಚಿಂಚೋಳಿ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ ಬಿದ್ದಿದೆ. ಉಭಯ ಪಕ್ಷಗಳು ಒಂದೇ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಿರುವುದು ಬಿಗ್​ಫೈಟ್​ಗೆ ಎಡೆಮಾಡಿಕೊಟ್ಟಿದೆ. ಈ ಕ್ಷೇತ್ರ ಬಹುತೇಕ ಕಾಂಗ್ರೆಸ್​ನ ಭದ್ರಕೋಟೆ. ಇದನ್ನು ಭೇದಿಸಲು ಕಮಲ ಪಡೆ ಟೊಂಕಕಟ್ಟಿ ನಿಂತಿದೆ.

ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಪುತ್ರ ಡಾ.ಅವಿನಾಶ ಜಾಧವ್ ಕೇಸರಿಪಡೆ ಅಭ್ಯರ್ಥಿಯಾಗಿದ್ದರೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸುಭಾಷ ರಾಠೋಡ್ ಕಾಂಗ್ರೆಸ್ ಹುರಿಯಾಳು. ವೈದ್ಯರಾಗಿರುವ ಡಾ.ಅವಿನಾಶ ಜಾಧವ್ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ್ದಾರೆ. ಆದರೆ, ರಾಠೋಡ್ ಈ ಮೊದಲು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು. ಅಲ್ಲದೆ, ಬೆಂಗಳೂರು ವಿವಿ ಯಿಂದ ಎಲ್​ಎಲ್​ಎಂ ಮೊದಲ ರ್ಯಾಂಕ್​ನಲ್ಲಿ ತೇರ್ಗಡೆಯಾಗಿ ಐಎಎಸ್ ಪ್ರಿಲಿಮನರಿ ಪಾಸಾದವರು. ಹೀಗಾಗಿ ಕ್ವಾಲಿಫಾಯ್್ಡಳ ಮಧ್ಯೆ ಕಾಳಗ ಏರ್ಪಟ್ಟಿದೆ.

ಕ್ಷೇತ್ರದಲ್ಲಿ ಜಾಧವ್ ಹಿಡಿತ: ಡಾ.ಉಮೇಶ ಜಾಧವ್ 2 ಅವಧಿ ಚಿಂಚೋಳಿ ಶಾಸಕರಾಗಿದ್ದವರು. ಸರಳ, ಸಜ್ಜನಿಕೆಗೆ ಹೆಸರಾಗಿರುವ ಇವರು ವಿಶೇಷವಾಗಿ ಲಂಬಾಣಿ ಸಮುದಾಯಕ್ಕಾಗಿ ಅಪಾರ ಕೆಲಸ ಮಾಡಿದ್ದು, ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕ್ಷೇತ್ರವನ್ನು ಕಮಲ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ರೂಪಿಸಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮತ್ತು ವಿ.ಸೋಮಣ್ಣ ಅವರಿಗೆ ಉಸ್ತುವಾರಿ ನೀಡಿದ್ದಾರೆ. ಈ ಇಬ್ಬರೂ ಇಲ್ಲೇ ಠಿಕಾಣಿ ಹೂಡಿದ್ದಾರೆ. ಬಿಎಸ್​ವೈ ಆದಿಯಾಗಿ ಹಿರಿಯ ಮುಖಂಡರು ಕ್ಷೇತ್ರದಲ್ಲಿ ಸುತ್ತು ಹಾಕಿದ್ದಾರೆ.

2 ಮತಯಂತ್ರ

ಚುನಾವಣಾ ಕಣದಲ್ಲಿ ನೋಟಾ ಸೇರಿ 18 ಜನ ಕಣದಲ್ಲಿ ಇದ್ದುದರಿಂದ ಪ್ರತಿ ಬೂತ್​ಗೆ 2 ಇವಿಎಂ ನೀಡಲಾಗುತ್ತಿದೆ. 1 ಯಂತ್ರದಲ್ಲಿ 16 ಅಭ್ಯರ್ಥಿಗಳು, ಇನ್ನೊಂದ ರಲ್ಲಿ ಒಬ್ಬ ಅಭ್ಯರ್ಥಿ, ನೋಟಾ ಮತ ಸೇರಿದೆ.

ಮಲ್ಲಿಕಾರ್ಜುನ ಖರ್ಗೆಗೆ ಪ್ರತಿಷ್ಠೆ

ಡಾ.ಉಮೇಶ ಜಾಧವ್ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶಕ್ಕೆ ಕಾರಣ. ಪಕ್ಷದಿಂದ ಎಲ್ಲವನ್ನೂ ಪಡೆದಿದ್ದರೂ ಬಿಜೆಪಿ ಸೇರಿ ದ್ರೋಹ ಮಾಡಿದ್ದಾರೆ ಎಂದು ಆಪಾದಿಸಿದ್ದಾರೆ. ಹೀಗಾಗಿ ರಾಠೋಡ್ ಅವರನ್ನು ಗೆಲ್ಲಿಸುವ ಮೂಲಕ ಭದ್ರಕೋಟೆ ರಕ್ಷಣೆಗೆ ರಣತಂತ್ರ ರೂಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಇಡೀ ಸಚಿವ ಸಂಪುಟ ಕ್ಷೇತ್ರ ಪರ್ಯಟನ ಮಾಡುತ್ತಿದೆ. ಕ್ಷೇತ್ರದಲ್ಲಿ ಒಂಬತ್ತು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಜೆಡಿಎಸ್ ಎರಡು, ಬಿಜೆಪಿ ಒಮ್ಮೆ ಮಾತ್ರ ಗೆದ್ದಿದೆ. ದಿ.ವೀರೇಂದ್ರ ಪಾಟೀಲ್ ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಲ್ಲದೆ, ಮುಖ್ಯಮಂತ್ರಿ, ಕೇಂದ್ರದಲ್ಲಿ ಸಚಿವರಾಗಿದ್ದರು.

ಎರಡೂ ಪಕ್ಷಗಳ ನಾಯಕರ ಅಬ್ಬರದ ಪ್ರಚಾರ

ಉಭಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ಮುಖಂಡ ವಿ.ಸೋಮಣ್ಣ ಉಸ್ತುವಾರಿಗಳಾಗಿದ್ದು, ತಂತ್ರ ಹೂಡುತ್ತಿದ್ದಾರೆ. ಇವರಿಗೆ ಜಿಲ್ಲಾ ಘಟಕ ಸಾಥ್ ನೀಡಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದಿಯಾಗಿ ಅನೇಕ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೋಲಿ ಸಮಾಜದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸ್ಟಾರ್ ಪ್ರಚಾರಕರಂತೆ ಮಿಂಚುತ್ತಿದ್ದಾರೆ. ಚಿಂಚನಸೂರ ಭಾಷಣ ಕೇಳಲು ಜನ ಮುಗಿಬೀಳುತ್ತಿದ್ದಾರೆ. ಖರ್ಗೆ ಸೋಲಿಸಲು ಡಾ.ಜಾಧವ್ ಎಂಬ ಹುಲಿ ರೆಡಿಯಾಗಿದೆ ಎಂದು ತೊಡೆತಟ್ಟುವ ಮೂಲಕ ಸಭಿಕರನ್ನು ರಂಜಿಸಿದ್ದಾರೆ. ಇನ್ನು ಕಾಂಗ್ರೆಸ್​ನಲ್ಲಿ ಸಚಿವ ಸಂಪುಟವೇ ಚಿಂಚೋಳಿಯಲ್ಲಿ ಕಾಣಿಸಿಕೊಂಡಿದೆ. ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ರಾಜಶೇಖರ ಪಾಟೀಲ್, ಬಂಡೆಪ್ಪ ಖಾಶೆಂಪುರ, ಪರಮೇಶ್ವರ ನಾಯಕ, ಪ್ರಿಯಾಂಕ್ ಖರ್ಗೆ, ಸಂಸದ ಮಲ್ಲಿಕಾರ್ಜುನ ಖರ್ಗೆ, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಾಯಕರ ದಂಡು ಮಿಂಚಿನ ಸಂಚಾರ ನಡೆಸುತ್ತ ಡಾ.ಜಾಧವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತದಾನ 19 ಎಣಿಕೆ 23ಕ್ಕೆ

ಉಪ ಚುನಾವಣೆಗೆ 19ರಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದರೆ, ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮೊದಲ ಮಹಡಿಯಲ್ಲಿ 23ರಂದು ಮತ ಎಣಿಕೆ ಜರುಗಲಿದೆ.

14 ಕೌಂಟಿಂಗ್ ಸೂಪರ್​ವೈಸರ್ಸ್, 14 ಕೌಂಟಿಂಗ್ ಅಸಿಸ್ಟಂಟ್ಸ್, 11 ಮೈಕ್ರೋ ಅಬ್ಸರ್ವರ್​ಗಳನ್ನು ನೇಮಕ ಮಾಡಲಾಗಿದೆ. ಸೋಮಶೇಖರ ಎಸ್.ಜೆ. ಆರ್​ಒ ಮತ್ತು ಪಂಡಿತ ಬಿರಾದಾರ್ ಎಆರ್​ಓ ಆಗಿ ನೇಮಕಗೊಂಡಿದ್ದಾರೆ.

ಕ್ಷೇತ್ರ ಇತಿಹಾಸ

ತೆಲಂಗಾಣ ಗಡಿಯಲ್ಲಿರುವ ಚಿಂಚೋಳಿ ಮಕ್ಕಳ ಮಾರಾಟ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕುಂಚಾವರಂ ವನ್ಯಧಾಮ ಕಣ್ಮನ ಸೆಳೆಯುತ್ತದೆ. ಮುಲ್ಲಾಮಾರಿ ಏತ ನೀರಾವರಿ ಯೋಜನೆ ಈ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಜತೆಗೆ ಚಂದ್ರಂಪಳ್ಳಿ ಡ್ಯಾಂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಎತ್ತಪೋತ ಜಲಪಾತ ಮಳೆಗಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಿಂಚೋಳಿ, ಐನಾಪುರ, ಕಾಳಗಿ, ಕೋಡ್ಲಿ ಹೀಗೆ ನಾಲ್ಕು ಸರ್ಕಲ್​ಗಳಲ್ಲಿ 108 ತಾಂಡಾ ಸೇರಿ 224 ಹಳ್ಳಿಗಳನ್ನು ಹೊಂದಿದೆ. 2011ರ ಜನಗಣತಿ ಪ್ರಕಾರ 254287 ಜನಸಂಖ್ಯೆ ಹೊಂದಿದೆ.

Leave a Reply

Your email address will not be published. Required fields are marked *