ಚಂದಿರನಲ್ಲಿ ಮೊಳಕೆಯೊಡೆದ ಮನುಕುಲದ ಹೆಬ್ಬಯಕೆ

ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಇತ್ತೀಚೆಗೆ ಇಳಿದಿತ್ತು. ಆ ಸಂದರ್ಭದಲ್ಲಿ ಅಲ್ಲಿ ಬಾಹ್ಯಾಕಾಶಯಾನಿಗಳು ಹೂತಿದ್ದ ಮಣ್ಣು, ಸೂಕ್ಷಾ್ಮಣು ಜೀವಿ ಹಾಗೂ ದುಂಬಿಗಳ ಮೊಟ್ಟೆಯ ಮಿಶ್ರಣ ಇರುವ ಹತ್ತಿ ಆಲೂಗಡ್ಡೆ ಬೀಜ ಮೊಳಕೆಯೊಡೆದಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲು ಸ್ಥಾಪಿಸಿದೆ. ಇಂಥದ್ದೊಂದು ಪವಾಡ ಹೇಗೆ ಸಾಧ್ಯವಾಯಿತು? ಇದರ ಹಿನ್ನೆಲೆ ಏನು? ತಿಳಿಯೋಣ ಬನ್ನಿ.

| ಪ್ರಶಾಂತ ಸೊರಟೂರ

ಚಂದ್ರನ ತಿರುಗುವ ಮತ್ತು ಅದು ಭೂಮಿಯನ್ನು ಸುತ್ತುವ ವೇಗ ಒಂದೇ ಆಗಿರುವುದರಿಂದ, ನಮಗೆ ಭೂಮಿಯಿಂದ ಚಂದ್ರನ ಒಂದೇ ಬದಿ ಕಾಣುತ್ತದೆ. ಇನ್ನೊಂದು ಬದಿ ನಮಗೆ ಯಾವಾಗಲೂ ಮರೆಯಾಗಿರುವಂತೆ ತೋರುತ್ತದೆ. ಇಲ್ಲಿಯವರೆಗೆ ಕಳುಹಿಸಿದ ಯಾವುದೇ ಬಾನಬಂಡಿಗಳು (ಸ್ಪೇಸ್​ಕ್ರಾಫ್ಟ್) ಇನ್ನೊಂದು ಬದಿಯಲ್ಲಿ ಇಳಿದಿರಲಿಲ್ಲ, ಮೊಟ್ಟ ಮೊದಲ ಬಾರಿಗೆ ಚೀನಾ ಈ ಕೆಲಸ ಮಾಡಿದೆ. ಚಂದ್ರನ ಇನ್ನೊಂದು ಬದಿಯಲ್ಲಿ ಬಾನಬಂಡಿಯನ್ನು ಇಳಿಸುವಾಗ ಚೀನಾದ ವಿಜ್ಞಾನಿಗಳು ಹರಸಾಹಸ ಪಡಬೇಕಾಯಿತು. ಇನ್ನೊಂದು ಬದಿಯಿಂದ ಸಂಪರ್ಕ ಸಾಧನಗಳು ಭೂಮಿಗೆ ಸಂದೇಶ ಕಳುಹಿಸಲು ತೊಡಕಾಗಿದ್ದರಿಂದ ಈ ಪರಿಸ್ಥಿತಿ ಉಂಟಾಯಿತು. ಕೊನೆಗೆ ಎಲ್ಲ ತೊಡಕುಗಳನ್ನು ಮೀರಿ ಚೀನಾದ ಚಾಂಗ್ ಇ-4 (Chang’e-4) ಬಾನಬಂಡಿ ಚಂದ್ರನ ಹಿಂಬದಿಯ, ದಕ್ಷಿಣ ತುದಿಯಲ್ಲಿ ಏಕಿನ್ (aitken) ಎಂದು ಗುರುತಿಸಲ್ಪಡುವ ಜಾಗದಲ್ಲಿ ಇಳಿಯಿತು.

ಹೆಚ್ಚು ಒಪ್ಪಿತವಾಗಿರುವ ಸಿದ್ಧಾಂತದ ಪ್ರಕಾರ ಸುಮಾರು 4.51 ಶತಕೋಟಿ ವರುಷಗಳ ಹಿಂದೆ ಭೂಮಿಗೆ ಥೀಯಾ (Theia) ಎಂಬ ಮಂಗಳ ಗ್ರಹದಷ್ಟು ದೊಡ್ಡದಾಗಿರುವ ಕಾಯ ಡಿಕ್ಕಿ ಹೊಡೆದಾಗ, ಎರಡೂ ಕಾಯಗಳಿಂದ ಸಿಡಿದುಳಿದ ಪಳಿಯುಳಿಕೆಗಳಿಂದ ಚಂದ್ರ ಉಂಟಾಯಿತಂತೆ. ಹೀಗೆ ಭೂಮಿಯಿಂದ ಹೊಮ್ಮಿ ಬಂದ ಚಂದ್ರನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಂಡರೆ, ಅದು ಮನುಷ್ಯರಿಗೆ ಇನ್ನೊಂದು ನೆಲೆಯಾಗಬಲ್ಲದೇ ಅನ್ನುವ ಕುತೂಹಲ ಯಾವತ್ತೂ ಇದ್ದೇ ಇದೆ. ಚಂದ್ರನ ಹಿಂಬದಿಯಲ್ಲಿ ಬಾನಬಂಡಿಯನ್ನು ಇಳಿಸುವುದರ ಜತೆಗೆ ಇನ್ನೊಂದು ಮುಖ್ಯವಾದ ಗೆಲುವನ್ನು ಚೀನಾ ಸಾಧಿಸಿತು.

ಅದೆಂದರೆ ಈ ಬಾನಬಂಡಿ ಕೊಂಡೊಯ್ದಿದ್ದ ಹತ್ತಿಯ ಬೀಜಗಳು ಚಂದ್ರನಲ್ಲಿ ಮೊಳಕೆಯೊಡೆದವು. ಚಾಂಗ್ ಇ-4 ಬಾನಬಂಡಿ ಭೂಮಿಯಿಂದ ಮಣ್ಣು, ನೀರಿನ ಜತೆಗೆ ಗಾಳಿ ಮತ್ತು ಕಾವು ಕಾಯ್ದುಕೊಂಡ ಡಬ್ಬಿಯೊಂದರಲ್ಲಿ ಹತ್ತಿಯ ಬೀಜಗಳನ್ನು ತೆಗೆದುಕೊಂಡು ಹೋಗಿತ್ತು. ಭೂಮಿಯಿಂದ ವಿಜ್ಞಾನಿಗಳು ಆದೇಶ ಕೊಟ್ಟೊಡೊನೆ ಬೀಜಗಳ ಮೇಲೆ ನೀರು ಸುರಿಯುವಂತಾಗಿ, ಚಂದ್ರನ ಮೇಲಿರುವ ಬೆಳಕಿಗೆ ಅವುಗಳನ್ನು ಒಡ್ಡಲಾಯಿತು. ಕೆಲ ಹೊತ್ತಿನ ಬಳಿಕ ಬೀಜಗಳು ಮೊಳಕೆಯೊಡೆದವು. ನೀರು, ಮಣ್ಣು ಮತ್ತು ಬೆಳಕು ದೊರೆತರೆ ಬೀಜಗಳು ಸುಲಭವಾಗಿ ಮೊಳಕೆಯೊಡೆಯಬಲ್ಲವು, ಇದರಲ್ಲಿ ಅಂತದ್ದೇನಿದೆ ವಿಶೇಷ ಅಂತೀರಾ? ಅದರಲ್ಲೇ ಇದೆ ವಿಶೇಷ.

ಚೀನಾ ಕೈಗೊಂಡ ಪ್ರಯೋಗದ ಒಟ್ಟು ಚೌಕಟ್ಟನ್ನು ಮೊದಲು ತಿಳಿದುಕೊಳ್ಳೋಣ. ಈ ಪ್ರಯೋಗದ ಮುಖ್ಯ ಉದ್ದೇಶವೆಂದರೆ ಚಂದ್ರನಲ್ಲಿ ತಂತಾನೇ ತಾಳಬಲ್ಲ ಕಿರು ಜೀವಚಕ್ರವನ್ನು (ಮಿನಿ ಬಯೋಸ್ಪಿಯರ್) ಉಂಟುಮಾಡುವುದು. ಇಲ್ಲಿ ಜೀವಚಕ್ರವೆಂದರೆ ಒಂದು ಜೀವಿ ಹೊರಹಾಕಿದ ಕಸವನ್ನು ಇನ್ನೊಂದು ಜೀವಿ ಬಳಸಿ, ಆ ಜೀವಿ ಕೊಡಮಾಡುವ ವಸ್ತುಗಳಿಂದ ಮೊದಲ ಜೀವಿ ಬದುಕುವುದು. ಅಂದರೆ ಒಟ್ಟಾರೆಯಾಗಿ ಜೀವಿಗಳ ನಡುವೆಯೇ ಕೊಡುಕೊಳ್ಳುವಿಕೆಯಾಗಿ, ಹೊರಗಡೆಯಿಂದ ಏನೂ ದೊರೆಯದಿದ್ದರೂ ಅವು ಬೆಳೆದು, ಬದುಕಬಲ್ಲಂತಹ ವಾತಾವರಣ. ಚೀನಾದ ಈ ಪ್ರಯೋಗವನ್ನೇ ನೋಡಿದರೆ, ಚಾಂಗ್ ಇ-4 ಬಾನಬಂಡಿಯಲ್ಲಿ ಸಸ್ಯಗಳು (ಹತ್ತಿಯ ಬೀಜ, ಆಲೂಗಡ್ಡೆ, ಎಣ್ಣೆ ಬೀಜ), ಗುಂಗರು ಹುಳುವಿನ (ಫ್ರೂಟ್ ಫ್ಲೈ) ಮೊಟ್ಟೆಗಳು ಮತ್ತು ಈಸ್ಟ್ ಇರಿಸಲಾಗಿತ್ತು. ಸಸ್ಯಗಳು ಹುಳುವಿಗೆ ಆಹಾರ ಮತ್ತು ಆಮ್ಲಜನಕವನ್ನು ಒದಗಿಸಿದರೆ, ಹುಳು ಹೊರಹಾಕುವ ಇಂಗಾಲದ ಡೈ-ಆಕ್ಸೈಡ್ ಸಸ್ಯಗಳ ಪೋಷಕಾಂಶ ತಯಾರಿಕೆಗೆ ಬೇಕು. ಹಾಗೆನೇ ಹುಳು ಹೊರಹಾಕುವ ಕೊಳೆ ಮತ್ತು ಸತ್ತ ಸಸ್ಯಗಳನ್ನು ಈಸ್ಟ್​ಗಳು ಪೋಷಕಾಂಶಗಳನ್ನಾಗಿ ಮಾಡಬಲ್ಲವು. ಹೀಗೆ ಒಂದಕ್ಕೊಂದು ಕೊಡುಕೊಳ್ಳುವಿಕೆಯಾಗಿ ಜೀವಚಕ್ರ ಸುತ್ತಬಲ್ಲದು. ಚಂದ್ರನಲ್ಲಿ ಜೀವಚಕ್ರವನ್ನು ಉಂಟುಮಾಡುವುದರ ಜತೆಗೆ ಅಲ್ಲಿನ ಇನ್ನೂ ಕೆಲವು ತೊಡಕುಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಪ್ರಮುಖ ತೊಡಕುಗಳೆಂದರೆ 1) ಭೂಮಿಗೆ ಹೋಲಿಸಿದಾಗ ಚಂದ್ರನಲ್ಲಿ ಕಡಿಮೆ ಗುರುತ್ವವಿರುವುದು, 2) ಕಡುಕಿರಣಗಳಿಂದ ಕಾಪಾಡುವ ಓಜೋನನಂತಹ ಪದರ ಚಂದ್ರನ ವಾತಾವರಣದಲ್ಲಿ ಇಲ್ಲದಿರುವುದರಿಂದ ಸೂರ್ಯನಿಂದ ಹೊಮ್ಮುವ ಕೆಡು ಸೂಸುವಿಕೆಯ ಪರಿಣಾಮ, 3) ತುಂಬಾ ಕಡಿಮೆಯಿರುವ ಉಷ್ಣತೆ ಚಾಂಗ್ ಇ-4 ರ ಪ್ರಯೋಗ ಮುಖ್ಯವಾಗಿ ಜೀವಚಕ್ರವನ್ನು ಉಂಟುಮಾಡುವುದು, ಕಡುಕಿರಣಗಳ ಮತ್ತು ಕಡಿಮೆ ಗುರುತ್ವದ ಪರಿಣಾಮವನ್ನು ಅರಿಯುವ ಕುರಿತಾಗಿತ್ತು. ಇಲ್ಲಿ ಗುರುತ್ವಕ್ಕೂ ಸಸ್ಯಗಳಿಗೂ ಏನು ನಂಟು ಅನ್ನುವ ಪ್ರಶ್ನೆ ಏಳುತ್ತದೆ ಅಲ್ಲವೇ? ಸಸ್ಯಗಳು ಭೂಮಿಯ ಗುರುತ್ವಕ್ಕೆ ಹೊಂದಿಕೊಳ್ಳಲು ತಮ್ಮಲ್ಲಿ ಹಲವಾರು ಮಾರ್ಪಾಡುಗಳನ್ನು ಹಲವು ಲಕ್ಷ ವರ್ಷಗಳಿಂದ ಮಾಡಿಕೊಂಡು ಬಂದಿವೆ. ಈ ಬಗೆಯ ಬದಲಾವಣೆಗಳನ್ನು ಗುರುತ್ವ -ಮಾರ್ಪಾಡುಗಳ-ಹುಟ್ಟುವಿಕೆ (Gravimorphogenesis) ಎನ್ನುತ್ತಾರೆ. ಸಸ್ಯಗಳಲ್ಲಿ ಆದ ಇಂತಹ ಮಾರ್ಪಾಡುಗಳೆಂದರೆ ಬೇರುಗಳು ಭೂಮಿಯೆಡೆಗೆ ಮತ್ತು ಕಾಂಡ ಮೇಲಕ್ಕೆ ಬೆಳೆಯುವುದು. ಹಾಗೆನೇ ಬೇರು ಮತ್ತು ಕಾಂಡಗಳಲ್ಲಿ ಕಂಡುಬರುವ ಸುರುಳಿಯಂತಹ ರಚನೆಗಳು ಗುರುತ್ವಕ್ಕೆ ಹೊಂದಿಕೊಂಡು ಬೆಳೆಯಲು ಆದ ಬದಲಾವಣೆಗಳೆಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗೆ ಭೂಮಿಯ ಗುರುತ್ವಕ್ಕೆ ಒಗ್ಗಿಕೊಂಡ ಸಸ್ಯಗಳು ಚಂದ್ರನ ಗುರುತ್ವದಲ್ಲಿ ಬೆಳೆಯಬಲ್ಲವೇ ಅನ್ನುವುದನ್ನು ಅರಿಯುವುದೂ ಈ ಪ್ರಯೋಗದ ಭಾಗವಾಗಿತ್ತು. ಚಾಂಗ್ ಇ-4 ಬಾನಬಂಡಿಯಲ್ಲಿ ಹತ್ತಿಯ ಬೀಜಗಳು ಮೊಳಕೆಯೊಡೆಯುವಲ್ಲಿ ಗೆಲುವು ಕಂಡಿದ್ದರಿಂದ, ಭೂಮಿಯ ಸುಮಾರು ಶೇ.16 ಅಷ್ಟೇ ಗುರುತ್ವವಿರುವ (ಇದರಿಂದಾಗಿ ಭೂಮಿಯ ಮೇಲೆ 100 ಕೆ.ಜಿ ತೂಗುವ ವಸ್ತು ಚಂದ್ರನಲ್ಲಿ ಬರೀ 16 ಕೆಜಿ ತೂಗುತ್ತದೆ) ಚಂದ್ರನಲ್ಲೂ ಸಸ್ಯಗಳು ಬೆಳೆಯಬಲ್ಲವು ಅನ್ನುವುದನ್ನು ಕಂಡುಕೊಂಡಂತಾಯಿತು.

ಈ ಪ್ರಯೋಗದಲ್ಲಿ ಹತ್ತಿಯ ಬೀಜಗಳು ಮೊಳಕೆ ಒಡೆದಿವೆಯಾದರೂ ಆಲೂಗಡ್ಡೆ, ಎಣ್ಣೆ ಬೀಜಗಳು ಮೊಳಕೆಯೊಡೆಯಲಿಲ್ಲ ಜತೆಗೆ ಗುಂಗರು ಹುಳುವಿನ ಮೊಟ್ಟೆಗಳೂ ಒಡೆಯಲಿಲ್ಲ. ಅಲ್ಲಿಗೆ ಈ ಪ್ರಯೋಗದ ಕೆಲವು ಭಾಗ ಗೆಲುವು ಕಂಡಿತು. ಉಳಿದದ್ದು ಮತ್ತಷ್ಟು ಅರಹುವಿಕೆಗೆ ಎಡೆಮಾಡಿಕೊಟ್ಟಿತು. ಅದೇನೇ ಇರಲಿ, ಚಾಂಗ್ ಇ-4 ಕಳುಹಿಸಿದ ಮೊಳಕೆಯೊಡೆದ ಹತ್ತಿ ಬೀಜದ ಚಿತ್ರವನ್ನು ಮತ್ತು ಈ ಪ್ರಯೋಗದ ಹಿಂದಿನ ವಿವರಗಳನ್ನು ಸುದ್ದಿ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಾ ಚೀನಾ ವಿಜ್ಞಾನಿಗಳು, ಚಂದ್ರನ ಮೇಲೆ ಮನುಕುಲ ನಡೆಸಿದ ಮೊದಲ ಜೀವವಿಜ್ಞಾನದ ಪ್ರಯೋಗವಿದು. ಮನುಕುಲಕ್ಕೆ ಇದೊಂದು ಮೈಲುಗಲ್ಲು ಅಂದಿದ್ದಾರೆ. ನಿಜ, ಭೂಮಿಯಾಚೆಗೆ ಪಯಣ ಬೆಳೆಸಿ ಮತ್ತೊಂದು ನೆಲೆ ಕಂಡುಕೊಳ್ಳುವಂತಾಗಲೂ ಮನುಷ್ಯರಿಗೆ ಅಂತಹ ಹೊಸ ನೆಲೆಯಲ್ಲಿ ಬೇಕಾಗುವ ಆಹಾರ, ಅವರಿಗೆ ಒಗ್ಗುವ ವಾತಾವರಣವನ್ನು ಉಂಟುಮಾಡುವ ಬಗೆಯನ್ನು ಅರಸಬೇಕಾಗುತ್ತದೆ. ಚಂದ್ರನಲ್ಲಿ ಚೀನಾ ಕೈಗೊಂಡ ಪ್ರಯೋಗ ಮುಂದೆ ಮಂಗಳಗ್ರಹದಲ್ಲಿ ಪ್ರಯೋಗ ನಡೆಸಲು ಅಡಿಪಾಯವಾಗಬಲ್ಲದು. ನಾಸಾ ಇತ್ತೀಚೆಗೆ ಮಂಗಳದಲ್ಲಿ ಇಳಿಸಿದ ಬಾನಬಂಡಿಯಿರಬಹುದು, ಚೀನಾ ಕೈಗೊಂಡ ಈ ಪ್ರಯೋಗ ಇರಬಹುದು ಇಲ್ಲವೇ ಎಲೊನ್ ಮಸ್ಕ್ ಅವರ ಸ್ಪೇಸ್-ಎಕ್ಸ್ ಯೋಜನೆಗಳೇ ಇರಬಹುದು ಇನ್ನೂ ಕೆಲವು ದಶಕಗಳಲ್ಲಿ ಭೂಮಿಯಿಂದಾಚೆಗೂ ನೆಲೆಸಲು ಮನುಷ್ಯರ ತಯಾರಿ ಜೋರಾಗಿಯೇ ನಡೆದಿದೆ.

ಚೀನಾದಿಂದ ದಿಟ್ಟ ಹೆಜ್ಜೆ

ಇಲ್ಲಿಯವರೆಗೆ ಭೂಮಿಯಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ಅಂತಾರಾಷ್ಟ್ರೀಯ ಬಾನ ನೆಲೆಯಲ್ಲಿ (ಇಂಟರ್​ನ್ಯಾಷನಲ್ ಏರ್ ಸ್ಟೇಷನ್) ಸಸ್ಯಗಳನ್ನು ಬೆಳೆಯುವಲ್ಲಿ ವಿಜ್ಞಾನಿಗಳು ಗೆಲುವು ಕಂಡಿದ್ದರು. ಆದರೀಗ ಭೂಮಿಯಿಂದ ಸುಮಾರು 3,80,000 ಕಿ.ಮೀ. ದೂರದಲ್ಲಿರುವ ಚಂದ್ರನಲ್ಲೂ ಮುಂದೊಮ್ಮೆ ಬೆಳೆ ತೆಗೆಯಬಹುದು ಅನ್ನುವತ್ತ ದಿಟ್ಟವಾದ ಹೆಜ್ಜೆಯನ್ನು ಇಟ್ಟಂತಾಗಿದೆ.

(ಲೇಖಕರು ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ನೀಡುತ್ತಿರುವ Arime.org ತಾಣದ ಸಂಪಾದಕರು)