ನವದೆಹಲಿ: ಕರೊನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಪಡೆಯ ವೈದ್ಯರು, ದಾದಿಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಚೀನಾದಿಂದ ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್ಮೆಂಟ್ (ಪಿಪಿಇ) ಹಾಗೂ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಗಳು ಬರಲಿವೆ.
ಮಾಸ್ಕ್, ಗೌನ್, ಸನ್ಗ್ಲಾಸ್, ಕೈಗವಸು ಮೊದಲಾದವುಗಳನ್ನೊಳಗೊಂಡ 1.5 ಕೋಟಿ ಪಿಪಿಇ ಹಾಗೂ 15 ಲಕ್ಷ ಟೆಸ್ಟಿಂಗ್ ಕಿಟ್ಗಳಿಗಾಗಿ ಕೇಂದ್ರ ಸರ್ಕಾರ ಹಾಗೂ ವಿವಿಧ ಕಂಪನಿಗಳು ಈಗಾಗಲೇ ಬೇಡಿಕೆ ಸಲ್ಲಿಸಿವೆ. ಈ ಸಾಮಗ್ರಿಗಳ ಪೈಕಿ ಕೆಲವು ಉತ್ಪಾದನಾ ಹಂತದಲ್ಲಿವೆ, ಕೆಲವನ್ನು ಉತ್ಪಾದಿಸಲಾಗಿದೆ. ಕೆಲವನ್ನು ಈಗಾಗಲೇ ಭಾರತಕ್ಕೆ ಕಳುಹಿಸಲಾಗಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ.
ಈ ಬೇಡಿಕೆ ಹೊರತಾಗಿ ಚೀನಾ 1.7 ಲಕ್ಷ ಪಿಪಿಇಗಳನ್ನು ಚೀನಾ ಭಾರತಕ್ಕೆ ಸಹಾಯವಾಗಿ ನೀಡಿದೆ. ಸದ್ಯಕ್ಕೆ ಭಾರತದ ಪಿಪಿಇ ಹಾಗೂ ಟೆಸ್ಟಿಂಗ್ ಕಿಟ್ಗಳ ಬೇಡಿಕೆ ಚೀನಾದಿಂದಲೇ ಪೂರೈಕೆಯಾಗುತ್ತಿದೆ. ಈ ಸಾಧನಗಳ ಗುಣಮಟ್ಟದ ಬಗ್ಗೆ ಹಲವು ಯುರೋಪಿಯನ್ ದೇಶಗಳಿಂದ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಏಪ್ರಿಲ್ 10ರ ನಂತರ ಚೀನಾ ಇವುಗಳ ರಫ್ತಿನ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರಿಸಿದೆ.
ಭಾರತದಲ್ಲೀಗ 3.87 ಲಕ್ಷ ಪಿಪಿಇಗಳು ದಾಸ್ತಾನು ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ, ಮುಂದಿನ ಆರು ವಾರಗಳಿಗೆ ಬೇಕಾಗುವಷ್ಟು ಟೆಸ್ಟಿಂಗ್ ಕಿಟ್ಗಳನ್ನು ಹೊಂದಿರುವುದಾಗಿ ಐಸಿಎಂಆರ್ ತಿಳಿಸಿದ್ದು, 5 ಲಕ್ಷಕ್ಕೂ ಅಧಿಕ ಕಿಟ್ಗಳನ್ನು ಚೀನಾ ಭಾರತದ ವಿವಿಧ ಸಂಸ್ಥೆಗಳಿಗೆ ಈಗಾಗಲೇ ರವಾನೆ ಮಾಡಿದೆ.
ಭಾರತದ ಬೇಡಿಕೆ ಪೂರೈಕೆಯಾಗುವಂತೆ ನೋಡಿಕೊಳ್ಳಲು ಎಲ್ಲ ಸರಬರಾಜು ಜಾಲಗಳನ್ನ ಮುಕ್ತವಾಗಿರುವಂತೆ ಕ್ರಮ ಕೈಗೊಳ್ಳಲು ಚೀನಾ ಅಧಿಕಾರಿಗಳೊಂದಿಗೆ ವಿಕ್ರಮ್ ಮಾತನಾಡಿದ್ದಾರೆ. ಜತೆಗೆ ಗುಣಮಟ್ಟದ ವಸ್ತುಗಳು ರಫ್ತು ಆಗುವಂತೆ ನೋಡಿಕೊಳ್ಳುವುದಾಗಿ ಚೀನಾ ಭರವಸೆ ನೀಡಿದೆ. ಈ ತಿಂಗಳ ಅಂತ್ಯದೊಳಗಾಗಿ ಎಲ್ಲ ಪಿಪಿಇ ಹಾಗೂ ಟೆಸ್ಟಿಂಗ್ ಕಿಟ್ಗಳು ಭಾರತಕ್ಕೆ ರವಾನೆಯಾಗುವ ವಿಶ್ವಾಸ ಹೊಂದಲಾಗಿದೆ.
ಒಬ್ಬರೂ ಸೋಂಕಿತರಿಲ್ಲದ ರಾಜ್ಯಗಳು ಯಾವುವು ಗೊತ್ತೆ? ಇಲ್ಲಿದೆ ರಾಜ್ಯವಾರು ಕೋವಿಡ್-19 ಪೀಡಿತರ ವಿವರ