ಗಡಿಯಲ್ಲಿ ಉಂಟಾಗಿರೋ ಉದ್ವಿಘ್ನ ಪರಿಸ್ಥಿತಿ ನಿವಾರಣೆಗೆ ಭಾರತ-ಪಾಕ್​ಗೆ ಚೀನಾ ನೀಡಿದ ಸಲಹೆ ಏನು?

ನವದೆಹಲಿ: ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉಂಟಾಗಿರುವ ಉಗ್ವಿಘ್ನ ಪರಿಸ್ಥಿತಿಯನ್ನು ಪಾಕ್​ ಅತ್ಯಂತ ಸಂಯಮದಿಂದ ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಚೀನಾ ಪ್ರಶಂಸೆ ವ್ಯಕ್ತಪಡಿಸಿದೆ.

ಚೀನಾದ ಉಪ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಪಾಕ್​ನ ಇಸ್ಲಮಾಬಾದ್​ಗೆ ಭೇಟಿ ನೀಡಿದ ಬೆನ್ನಲ್ಲೇ​ ಚೀನಾ ವಿದೇಶಾಂಗ ಸಚಿವಾಲಯ ಗುರುವಾರ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಭಾರತ ಮತ್ತು ಪಾಕ್​ ನಡುವಿನ ಪರಿಸ್ಥಿತಿಯನ್ನು ಚೀನಾ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಾರಂಭದಿಂದಲೂ ಪಾಕಿಸ್ತಾನ ಸಂಯಮದಿಂದ ಶಾಂತಿ ಕಾಯ್ದುಕೊಂಡು ಬರುತ್ತಿದೆ. ಮಾತುಕತೆ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಾಗಾಗಿಸಲು ಹವಣಿಸುತ್ತಿದೆ ಎಂದು ಚೀನಾ ತಿಳಿಸಿದೆ.

ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಹಾಗೂ ಪಾಕ್​ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಒಳಗೊಂಡ ಪಾಕ್​ ನಾಯಕರ ಜತೆ ಕಾಂಗ್ ಕ್ಸುವಾನ್ಯು ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.

ಫೆ.14 ರಂದು ಸಿಆರ್​ಪಿಎಫ್​ ಯೋಧರ ಮೇಲೆ ಜೈಷ್​ ಎ ಮಹಮ್ಮದ್​ ಸಂಘಟನೆಯ ಉಗ್ರರು ದಾಳಿ ನಡೆಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಪಾಕ್​ ಮೇಲೆ ಉಗ್ರರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಡ ಬರುತ್ತಿರುವ ಬೆನ್ನಲ್ಲೇ ಚೀನಾ ಉಪ ವಿದೇಶಾಂಗ ಸಚಿವ ಕಾಂಗ್ ಕ್ಸುವಾನ್ಯು ಇಸ್ಲಮಾಬಾದ್​ಗೆ ಭೇಟಿ ನೀಡಿರುವುದು ವಿಶೇಷವಾಗಿದೆ.

ಎಲ್ಲ ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ಗೌರವಿಸಬೇಕು. ಅಂತಾರಾಷ್ಟ್ರೀಯ ಸಂಬಂಧಗಳಿಗೆ ವಿರುದ್ಧವಾದ ಬೆಳವಣಿಗೆಗಳನ್ನು ಚೀನಾ ಇಷ್ಟಪಡುವುದಿಲ್ಲ ಎಂದು ಕಾಂಗ್​, ಪಾಕ್​ ನಾಯಕರಿಗೆ ತಿಳಿಸಿದ್ದಾರೆ.

ಗಡಿಯಲ್ಲಿ ಉಂಟಾಗಿರುವ ಉದ್ವಿಘ್ನ ಪರಿಸ್ಥಿತಿಯನ್ನು ಉಭಯ ರಾಷ್ಟ್ರಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗಾಗಿ ಉಭಯ ರಾಷ್ಟ್ರಗಳು ಒಟ್ಟಿಗೆ ಕೆಲಸ ಮಾಡುವ ಮೂಲಕ ಸೌಹಾರ್ದತೆ ಹಾಗೂ ನಮ್ರತೆಯನ್ನು ಪ್ರದರ್ಶಿಸಬೇಕು ಎಂದು ಕಾಂಗ್​ ಪಾಕ್​ ಭೇಟಿ ವೇಳೆ ತಿಳಿಸಿದ್ದಾರೆ.

ಚೀನಾ ಹೇಳಿಕೆಗೆ ಪ್ರತಿಯಾಗಿ ಪರಿಸ್ಥಿತಿಯನ್ನು ತಣ್ಣಗಾಗಿಸಲು ಉದ್ದೇಶಪೂರಿತವಾಗಿ ಹಾಗೂ ನ್ಯಾಯೋಚಿತ ಸ್ಥಾನದಲ್ಲಿ ನಿಂತು ಬೆಂಬಲ ನೀಡುತ್ತಿರುವ ಚೀನಾಗೆ ಧನ್ಯವಾದಗಳು ಪಾಕ್​ ಪ್ರತಿಕ್ರಿಯೆ ನೀಡಿದೆ. (ಏಜೆನ್ಸೀಸ್​)