ಚಂದ್ರನ ಮೇಲೆ ಮೊಳಕೆಯೊಡೆದ ಚೀನಾ ಗಿಡ

ಬೀಜಿಂಗ್: ಚಂದ್ರನ ಮೇಲೆ ಮೊದಲ ಬಾರಿಗೆ ಚೀನಾದ ಗಿಡವೊಂದು ಮೊಳಕೆಯೊಡೆದಿದೆ!

ಕಳೆದ ಜ.3ರಂದು ಭೂಮಿಗೆ ಗೋಚರಿಸಿದ ಚಂದ್ರನ ಮತ್ತೊಂದು ಭಾಗದ ಮೇಲೆ ಚೀನಾದ ಚ್ಯಾಂಗ್ ಇ-4 ಬಾಹ್ಯಾಕಾಶ ನೌಕೆ ಇಳಿದಿತ್ತು. ಇದೇ ಸಂದರ್ಭದಲ್ಲಿ ಚೀನಾದ ಬಾಹ್ಯಾಕಾಶ ವಿಜ್ಞಾನಿಗಳು ಅಲ್ಲಿ ಬೀಜವನ್ನು ಹೂತಿದ್ದರು. ಈಗ ಅದು ಮೊಳಕೆ ಒಡೆದಿದ್ದು, ಇದರ ಚಿತ್ರವನ್ನು ಚೀನಾ ಬಾಹ್ಯಾಕಾಶ ಸಂಸ್ಥೆ ಪ್ರಕಟಿಸಿದೆ.

ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಗಿಡ ಮೊಳಕೆ ಒಡೆದಿತ್ತು. ಆದರೆ ಇದೇ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿ ಗಿಡ ಬೆಳೆಯುತ್ತಿರುವುದು ಸಾಧನೆಯಾಗಿದೆ. ಇದರೊಂದಿಗೆ ಕಳೆದೊಂದು ವಾರದಲ್ಲಿ ಚೀನಾ ಬಾಹ್ಯಾಕಾಶ ವಿಜ್ಞಾನಿಗಳು ಎರಡು ಯಶಸ್ಸಿನ ಶಿಖರ ಏರಿದಂತಾಗಿದೆ. ಭೂಮಿಯ ವಿರುದ್ಧ ದಿಕ್ಕಿನ ಚಂದ್ರನ ಮೇಲ್ಮೈ ಮೇಲೆ ನೌಕೆ ಇಳಿಸಿದ್ದು ಹಾಗೂ ಈಗ ಗಿಡ ಮೊಳಕೆ ಒಡೆದಿರುವುದು ಬಾಹ್ಯಾಕಾಶ ವಿಜ್ಞಾನದಲ್ಲಿ ಮಹತ್ತರ ಮೈಲಿಗಲ್ಲಾಗಿದೆ.

ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ರೂಪಿಸಿರುವ ಸುಮಾರು 18 ಸೆ.ಮೀ. ಅಗಲವಾದ ಕಂಟೇನರ್​ನಲ್ಲಿ ಈ ಪ್ರಯೋಗ ಮಾಡಲಾಗಿದೆ. ಆದರೆ ಅಲ್ಲಿ ಉಷ್ಣಾಂಶ ನಿಯಂತ್ರಣ ಮಾಡುವುದು ದೊಡ್ಡ ಸಾಹಸವಾಗಲಿದೆ. ಈ ಪ್ರಯೋಗದಿಂದ ಚಂದ್ರನ ವಾತಾವರಣದಲ್ಲಿ ಯಾವುದೇ ಮಾಲಿನ್ಯವಾಗಲಾರದು. ಭವಿಷ್ಯದಲ್ಲಿ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವೇ ಎನ್ನುವ ಸಂಶೋಧನೆಗೆ ಇದು ಸಹಕಾರಿಯಾಗಲಿದೆ ಎಂದು ಚೀನಾ ವಿಜ್ಞಾನಿಗಳು ಹೇಳಿದ್ದಾರೆ.

ಯಾವ್ಯಾವ ಬೀಜ ಬಿತ್ತನೆ?

ಮಣ್ಣು, ಸೂಕ್ಷಾ್ಮಣು ಜೀವಿ ಹಾಗೂ ದುಂಬಿಗಳ ಮೊಟ್ಟೆಯ ಮಿಶ್ರಣ ಇರುವ ಹತ್ತಿ, ಆಲೂಗಡ್ಡೆ.

ಪ್ರಯೋಜನ ಏನು?

# ಬಾಹ್ಯಾಕಾಶ ಸಂಶೋಧನೆಗೆ ನೌಕೆ ಜತೆಗೆ ತೆರಳುವ ವಿಜ್ಞಾನಿಗಳು ಆಹಾರ ಕೊಂಡೊಯ್ಯುವ ಅಗತ್ಯವಿಲ್ಲ.

# ಚಂದ್ರನ ಪರಿಸರದಲ್ಲೇ ವಿಜ್ಞಾನಿಗಳು ತಮಗೆ ಅಗತ್ಯವಿರುವ ಆಹಾರ ಬೆಳೆದುಕೊಳ್ಳಬಹುದಾಗಿದೆ.

# ಆಹಾರ ಲಭ್ಯತೆ ಕಾರಣದಿಂದ ಸಂಶೋಧನಾ ಅವಧಿ ದೀರ್ಘವಾಗಲು ಅವಕಾಶ.

# ಮಾನವ ಸಹಿತ ಚಂದ್ರಯಾನ ಹಾಗೂ ಖಾಸಗಿ ಚಂದ್ರಯಾನಕ್ಕೆ ಇನ್ನಷ್ಟು ಸವಲತ್ತು.