ಅರುಣಾಚಲ ಪ್ರದೇಶ, ತೈವಾನ್​ನನ್ನು ತನ್ನ ಸೀಮೆಗೆ ಸೇರಿಸದ 30 ಸಾವಿರ ವಿಶ್ವನಕ್ಷೆಯನ್ನು ನಾಶಮಾಡಿದ ಚೀನಾ

ಬೀಜಿಂಗ್​: ಅರುಣಾಚಲ ಪ್ರದೇಶ ಹಾಗೂ ತೈವಾನ್​ ಪ್ರದೇಶಗಳನ್ನು ತನ್ನ ಸೀಮೆಯಲ್ಲಿ ಉಲ್ಲೇಖಿಸದ 30,000 ವಿಶ್ವನಕ್ಷೆಯನ್ನು ಚೀನಾದ ಕಸ್ಟಮ್ಸ್ ಅಧಿಕಾರಿಗಳು ನಾಶಪಡಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈಶಾನ್ಯ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್​ ಭಾಗವಾಗಿದೆ ಎಂದು ಚೀನಾ ತನ್ನ ವಾದ ಮಂಡಿಸಿದೆ. ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಭಾರತದ ನಾಯಕರನ್ನು ಪದೇ ಪದೇ ವಿರೋಧಿಸುವ ಮೂಲಕ ಈಗಾಗಲೇ ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಆದರೆ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಹಾಗೂ ಪರಭಾರೆ ಮಾಡಲಾಗದ ಪ್ರದೇಶವಾಗಿದ್ದು, ನಮ್ಮ ನಾಯಕರು ದೇಶದ ಇತರೆ ಭಾಗಗಳಿಗೆ ಭೇಟಿ ನೀಡುವಂತೆಯೇ ಕಾಲ ಕಾಲಕ್ಕೆ ಆ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ಎಂದು ಚೀನಾಕ್ಕೆ ಪ್ರತಿಯಾಗಿ ಭಾರತ ಹೇಳಿಕೊಂಡು ಬರುತ್ತಿದೆ.

ಇದುವರೆಗೂ ಉಭಯ ರಾಷ್ಟ್ರಗಳು 3,488 ಕಿ.ಮೀ. ಸುತ್ತುವರಿದಿರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ವ್ಯಾಪ್ತಿಯಲ್ಲಿ ಬರುವ ಗಡಿ ವಿವಾದವನ್ನು ಪರಿಹರಿಸಲು 21 ಸುತ್ತುಗಳ ಮಾತುಕತೆಗಳನ್ನು ನಡೆಸಿದ್ದರೂ ಮಾತುಕತೆ ಮಾತ್ರ ಫಲಪ್ರದವಾಗಿಲ್ಲ

ಅರುಣಾಚಲ ಪ್ರದೇಶ ಮಾತ್ರವಲ್ಲದೆ, ದ್ವೀಪ ಪ್ರದೇಶವಾಗಿರುವ ತೈವಾನ್​ ಕೂಡ ನಮ್ಮದೇ ಎಂದು ಚೀನಾ ಹೇಳುತ್ತಿದೆ. ಹೀಗಾಗಿ ಅಂದಾಜು 30,000 ವಿಶ್ವನಕ್ಷೆಗಳು ತೈವಾನ್​ ಅನ್ನು ಪ್ರತ್ಯೇಕ ರಾಷ್ಟ್ರ ಎಂದು ತೋರಿಸುತ್ತಿದೆ. ಅಲ್ಲದೆ, ಸಿನೋ-ಭಾರತ ಗಡಿಯನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಚೀನಾದ ಕಿಂಗ್ಡಾವೊದಲ್ಲಿನ ಕಸ್ಟಮ್ಸ್​ ಅಧಿಕಾರಿಗಳು ನಾಶ ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಭೂಪಟ ಮಾರುಕಟ್ಟೆಯಲ್ಲಿ ಚೀನಾ ಏನು ಮಾಡಿದೆ ಅದು ಸಂಪೂರ್ಣವಾಗಿ ನ್ಯಾಯಸಮ್ಮತ ಮತ್ತು ಅಗತ್ಯವಾಗಿದೆ. ಏಕೆಂದರೆ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಒಂದು ದೇಶಕ್ಕೆ ಪ್ರಮುಖವಾದ ವಿಷಯಗಳಾಗಿವೆ. ತೈವಾನ್ ಮತ್ತು ದಕ್ಷಿಣ ಟಿಬೆಟ್ ಎರಡೂ ಕೂಡ ಚೀನಾದ ಭಾಗಗಳಾಗಿದ್ದು, ಅಂತಾರಾಷ್ಟ್ರೀಯ ಕಾನೂನಿನ ಆಧಾರದಂತೆ ಪವಿತ್ರ ಮತ್ತು ಪರಮಪಾವನವಾಗಿದೆ ಎಂದು ಚೀನಾ ವಿದೇಶಾಂಗ ವ್ಯವಹಾರ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಕಾನೂನು ವಿಭಾಗದ ಪ್ರಾಧ್ಯಾಪಕ ಲಿಯು ವೆನ್ಜಾಂಗ್ ಹೇಳಿದ್ದಾರೆ. (ಏಜೆನ್ಸೀಸ್​)