ಮಸೂದ್​ಗೆ ಪರ್ಯಾಯ ಕ್ರಮ

ನ್ಯೂಯಾರ್ಕ್: ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಾಲ್ಕನೇ ಬಾರಿ ಅಡ್ಡಗಾಲು ಹಾಕಿರುವ ಚೀನಾ ನಡೆಗೆ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅಜರ್ ವಿರುದ್ಧ ಪರ್ಯಾಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಭದ್ರತಾ ಮಂಡಳಿಯ ನಾಲ್ಕು ಕಾಯಂ ರಾಷ್ಟ್ರಗಳು ಚೀನಾ ನಡೆಗೆ ವಿರೋಧ ವ್ಯಕ್ತಪಡಿಸಿವೆ.

ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರಿದ್ದ ವಾಹನದ ಮೇಲೆ ಜೈಷ್ ಉಗ್ರರು ದಾಳಿ ನಡೆಸಿದ ನಂತರ ಮಸೂದ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಒತ್ತಾಯಿಸಿ ಫೆ. 27ರಂದು ಅಮೆರಿಕ, ಬ್ರಿಟನ್, ಫ್ರಾನ್ಸ್ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದ್ದವು. ಇದಕ್ಕೆ ಹತ್ತಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲ ನೀಡಿದ್ದವು. ಆದರೆ ಚೀನಾ ವಿಟೋ ಅಧಿಕಾರ ಚಲಾಯಿಸಿ, ಪ್ರಸ್ತಾವನೆಗೆ ತಡೆ ನೀಡಿದೆ.

ಚೀನಾ ವಿರುದ್ಧ ಕಿಡಿ: ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಮತ್ತು ಶಾಂತಿ ಬಯಸುವುದಾಗಿ ಚೀನಾ ಹೇಳುತ್ತದೆ. ಆದರೆ, ಭದ್ರತಾ ಮಂಡಳಿಯಲ್ಲಿ ಅಡ್ಡಪಡಿಸುತ್ತದೆ. ಇಂಥ ದ್ವಂದ್ವ ಏಕೆ ಎಂದು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಪ್ರತಿನಿಧಿ ಪ್ರಶ್ನಿಸಿದ್ದಾರೆ. ಪಾಕಿಸ್ತಾನ ತನ್ನ ರಾಷ್ಟ್ರದ ಉಗ್ರರನ್ನು ರಕ್ಷಿಸಲು ಚೀನಾದ ಸೆರಗು ಹಿಡಿದಿದೆ ಎಂದು ಮತ್ತೊಂದು ರಾಷ್ಟ್ರದ ಉಪಪ್ರತಿನಿಧಿಯೊಬ್ಬರು ದೂರಿದ್ದಾರೆ.

ನಿಲುವು ಸಮರ್ಥಿಸಿಕೊಂಡ ಚೀನಾ

ಚೀನಾ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಪ್ರಸ್ತಾವನೆಯಲ್ಲಿ ತಾಂತ್ರಿಕ ದೋಷ ಇದ್ದ ಕಾರಣ ಅದನ್ನು ಪರಿಶೀಲಿಸಬೇಕಿದೆ. ಹೀಗಾಗಿ ತಡೆಹಿಡಿಯಬೇಕು ಎಂದು ಹೇಳಿದ್ದೇವೆ. ಇದ್ದರಿಂದ ಇನ್ನಷ್ಟು ಕೂಲಂಕಷ ಚರ್ಚೆಗೂ ಅವಕಾಶವಾಗಿ ಸರ್ವಸಮ್ಮತದ ನಿರ್ಣಯಕ್ಕೆ ಸಹಾಯವಾಗುತ್ತದೆ ಎಂದು ಚೀನಾ ಹೇಳಿಕೊಂಡಿದೆ.

ಅಮೆರಿಕ ತೀವ್ರ ಆಕ್ರೋಶ

ಉಗ್ರ ಮಸೂದ್ ಪರ ನಿಂತಿರುವ ಚೀನಾದ ನೀತಿಯನ್ನು ಕಟುವಾಗಿ ಟೀಕಿಸಿರುವ ಅಮೆರಿಕ, ಜವಾಬ್ದಾರಿಯುತ ರಾಷ್ಟ್ರವಾದ ಚೀನಾ ತನ್ನ ನಿಲುವು ಬದಲಿಸದಿದ್ದರೆ ಭದ್ರತಾ ಮಂಡಳಿ ಬೇರೆ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ. ಇಂಥದಕ್ಕೆ ಅವಕಾಶ ನೀಡಬಾರದು ಎಂದಿದೆ. ಚೀನಾ ನಿಜವಾಗಿ ಭಯೋತ್ಪಾದನೆ ವಿರುದ್ಧ ಇದ್ದರೆ ಪಾಕ್ ಅಥವಾ ಇನ್ಯಾವುದೇ ರಾಷ್ಟ್ರದ ಉಗ್ರರ ರಕ್ಷಣೆಗೆ ನಿಲ್ಲಬಾರದು ಎಂದು ಅಮೆರಿಕದ ಪ್ರತಿನಿಧಿ ಹೇಳಿದ್ದಾರೆ.

ಘೋಷಣೆಯಿಂದ ಏನು ಲಾಭ?

ವಿಶ್ವಸಂಸ್ಥೆ ಯಾವುದೇ ಉಗ್ರ ಅಥವಾ ಸಂಘಟನೆಯನ್ನು ಕಪು್ಪಪಟ್ಟಿಗೆ ಸೇರಿಸಿ ಜಾಗತಿಕ ಉಗ್ರನೆಂದು ಘೋಷಿಸಿದರೆ ಅಂಥವನು/ಸಂಘಟನೆ ವಿಶ್ವದ ಯಾವುದೇ ಭಾಗದಲ್ಲಿ ಆಸ್ತಿ ಹೊಂದಿದ್ದರೂ ಅದನ್ನು ಆಯಾ ದೇಶಗಳು ಮುಟ್ಟುಗೋಲು ಹಾಕಿಕೊಳ್ಳಬಹುದು. ಇಂಥ ಉಗ್ರರ ವಿದೇಶ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ ಮತ್ತು ಯಾವುದೇ ಮಾರ್ಗದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುವಂತಿಲ್ಲ.

ರಾಹುಲ್ ಟೀಕೆಗೆ ಬಿಜೆಪಿ ತಿರುಗೇಟು

ಮಸೂದ್ ಅಜರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ಗೆ ಹೆದರುವ ಪ್ರಧಾನಿ ಮೋದಿ ದುರ್ಬಲರು. ವಿಶ್ವಸಂಸ್ಥೆಯಲ್ಲಿ ಭಾರತದ ಮನವಿಗೆ ಹಿನ್ನಡೆಯಾದರೂ ಅವರು ಒಂದು ಮಾತನ್ನೂ ಆಡಿಲ್ಲ ಎಂದು ದೂರಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಭಾರತಕ್ಕೆ ಹಿನ್ನಡೆ ಉಂಟಾದರೆ ರಾಹುಲ್ ಗಾಂಧಿ ಸಂಭ್ರಮಪಡುತ್ತಾರೆ ಎಂದಿದ್ದಾರೆ.

ಚೀನಾ ವಸ್ತು ಬಹಿಷ್ಕಾರ ಅಭಿಯಾನ

ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಣೆ ಮಾಡುವುದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಅಡ್ಡಿಪಡಿಸಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯರು ತೀವ್ರವಾಗಿ ಖಂಡಿಸಿದ್ದಾರೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನ ಆರಂಭಿಸಿದ್ದಾರೆ. ‘ಬಾಯ್ಕಾಟ್​ಚೀನಾ’. ‘ಬಾಯ್ಕಾಟ್​ಚೈನೀಸ್​ಪ್ರಾಡಕ್ಟ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಚೀನಾ ವಿರುದ್ಧ ಟ್ವಿಟ್ಟರ್, ಫೇಸ್​ಬುಕ್, ವಾಟ್ಸ್​ಆಪ್, ಇಸ್ಟಾಗ್ರಾಮ್ಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಚೀನಾ ವಿರುದ್ಧ ಭಾರತೀಯರು ಎಚ್ಚೆತ್ತುಕೊಳ್ಳಬೇಕು. ಆ ದೇಶದ ವಸ್ತುಗಳನ್ನು ಬಹಿಷ್ಕರಿಸಬೇಕು. ಚೀನಿ ವಸ್ತುಗಳು ಭಾರತದ ಮಾರುಕಟ್ಟೆಗೆ ಬಾರದಂತೆ ಸರ್ಕಾರ ಕಡಿವಾಣ ಹಾಕಬೇಕು. ಚೀನಾದ ಪೆನ್​ನಿಂದ ಹಿಡಿದು ಸ್ಮಾರ್ಟ್​ಪೋನ್​ಗಳನ್ನು ಖರೀದಿಸುವುದು ಬೇಡ ಎಂದು ಜನರು ಕರೆ ನೀಡುತ್ತಿದ್ದಾರೆ. ಕೆಲವರು ಚೀನಾ ಆಪ್​ಗಳ ಪಟ್ಟಿಯನ್ನೂ ನೀಡಿ, ಸ್ಮಾರ್ಟ್ ಫೋನ್​ನಲ್ಲಿ ಈ ಆಪ್ ಇದ್ದರೆ ಡಿಲೀಟ್ ಮಾಡಿ ಎಂದಿದ್ದಾರೆ. ಚೀನಾದಿಂದ -ಠಿ; 5.55 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಇದು ನಿಂತರೆ ಚೀನಾಕ್ಕೆ ಬುದ್ಧಿ ಬರುತ್ತದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.