More

    ನಿಯಂತ್ರಣಕ್ಕೆ ಬರುತ್ತಿಲ್ಲ ಕೊರೊನಾ ವೈರಸ್​; ಚೀನಾದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆ

    ಬೀಜಿಂಗ್: ವುಹಾನ್​ನಲ್ಲಿ ಕಂಡುಬಂದಿರುವ ಮಾರಕ ಕೊರೊನಾ ವೈರಸ್​ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು ಚೀನಾದಲ್ಲೇ 41 ಜನರು ಮೃತಪಟ್ಟಿದ್ದಾರೆ. 1,280 ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕು ಹರಡುವುದನ್ನು ತಡೆಯಲು ಒಟ್ಟು 18 ನಗರಗಳಲ್ಲಿ ಸಾರಿಗೆ ವ್ಯವಸ್ಥೆ ಮೇಲೆ ನಿರ್ಬಂಧ ವಿಧಿಸಲಾಗಿದೆ. 5.6 ಕೋಟಿಗೂ ಹೆಚ್ಚು ಜನರು ಸಂಕಟಕ್ಕೆ ಒಳಗಾಗಿದ್ದಾರೆ. ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ವೈದ್ಯ ಕೂಡ ಮೃತಪಟ್ಟಿದ್ದಾನೆ.

    ಮೃತರಲ್ಲಿ ಹುಬೇ ಪ್ರಾಂತ್ಯದ 39 ಜನ, ಇನ್ನಿಬ್ಬರು ಇತರ ಎರಡು ಊರಿನವರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕು ತಗುಲಿದ ಪ್ರಕರಣಗಳು ಒಂದೊಂದೇ ದೇಶದಿಂದ ವರದಿಯಾಗುತ್ತಿವೆ. ಕಳೆದ ವಾರ ಚೀನಾದಿಂದ ಮರಳಿದ 50 ವರ್ಷದ ಒಬ್ಬ ವ್ಯಕ್ತಿ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ಆಸ್ಟ್ರಿಯಾ ಶನಿವಾರ ಪ್ರಕಟಿಸಿದೆ. ಯುರೋಪ್​ನಲ್ಲಿ ಈ ಮಾರಕ ರೋಗದ ಮೊದಲ ಪ್ರಕರಣ ಇದಾಗಿದೆ. ಅಮೆರಿಕದಲ್ಲಿ 60 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗಲಿ ಅವರನ್ನು ಪ್ರತ್ಯೇಕ ನಿಗಾ (ಐಸೊಲೇಷನ್) ವಿಭಾಗಕ್ಕೆ ಸೇರಿಸಲಾಗಿದೆ. ಅಮೆರಿಕದ ಎರಡನೇ ಪ್ರಕರಣ ಇದಾಗಿದೆ. ಷಿಕಾಗೋದ ಈ ಮಹಿಳೆ ಚೀನಾದಿಂದ ಮರಳಿದ್ದರು. ತಮ್ಮ ದೇಶದಲ್ಲಿ ಮೂವರು ಈ ಸೋಂಕಿನಿಂದ ಬಳಲುತ್ತಿದ್ದಾರೆಂದು ಫ್ರಾನ್ಸ್ ತಿಳಿಸಿದೆ.

    ಹಾಂಕಾಂಗ್ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಸೋಂಕು ಹರಡುವುದನ್ನು ತಡೆಯಲು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಂದು ಹಾಂಕಾಂಗ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರಿ ಲ್ಯಾಮ್ ತಿಳಿಸಿದ್ದಾರೆ. ವುಹಾನ್​ನಿಂದ ಮರಳಿದ ನೇಪಾಳಿ ವಿದ್ಯಾರ್ಥಿಯೊಬ್ಬನಲ್ಲಿ ಸೋಂಕು ಕಂಡುಬಂದಿದೆ ಎಂದು ನೇಪಾಳಿ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.

    ಈ ನಡುವೆ, ವುಹಾನ್​ನಲ್ಲಿರುವ ಸುಮಾರು 250 ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಮರಳಲು ಅನುಮತಿ ನೀಡಬೇಕೆಂದು ಚೀನಾಕ್ಕೆ ಭಾರತ ಶನಿವಾರ ಮನವಿ ಮಾಡಿದೆ.

    ವೈದ್ಯನ ಸಾವು

    ಸೋಂಕು ತೀವ್ರವಾಗಿರುವ ಹುಬೇ ಪ್ರಾಂತ್ಯದ ಹುಬೇ ಕ್ಸಿನ್​ಹುವಾ ಆಸ್ಪತ್ರೆಯ ವೈದ್ಯರೊಬ್ಬರು ಕೊರೊನಾ ರೋಗದಿಂದ ಮೃತಪಟ್ಟಿದ್ದಾರೆ. ವಿಪರೀತ ಸೋಂಕು ಬಾಧಿಸುತ್ತಿರುವ ಪ್ರಾಂತ್ಯದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮುಂಚೂಣಿಯಲ್ಲಿದ್ದ 62 ವರ್ಷದ ಲಿಯಾಂಗ್ ವುಡಂಗ್ ಮೃತಪಟ್ಟರೆಂದು ಚೈನಾ ಗ್ಲೋಬಲ್ ಟೆಲಿವಿಷನ್ ನೆಟ್​ವರ್ಕ್ ಟ್ವೀಟ್ ಮಾಡಿದೆ.

    ನಿಗಾ ಸಮಿತಿ, ಕಾಲ್ ಸೆಂಟರ್ ಸ್ಥಾಪನೆ

    ಕೊರೊನಾ ವೈರಸ್ ಪತ್ತೆ ಹಾಗೂ ಇದು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ, ಥರ್ಮಲ್ ಸ್ಕ್ರೀನಿಂಗ್ ನಡೆಯುವ ದೇಶದ ಎಲ್ಲ ಏಳು ವಿಮಾನ ನಿಲ್ದಾಣಗಳಿಗೆ ಭೇಟಿ ನೀಡುವಂತೆ ವಿವಿಧ ತಜ್ಞರನ್ನೊಳಗೊಂಡ ಏಳು ಸಮಿತಿಗಳಿಗೆ ಸೂಚಿಸಿದೆ. ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಿರ್ದೇಶನದ ಮೇರೆಗೆ ದಿನವಿಡೀ ಕಾರ್ಯ ನಿರ್ವಹಿಸುವ ಕಾಲ್ ಸೆಂಟರ್ (+911123978046) ಸ್ಥಾಪಿಸಲಾಗಿದೆ. ನವದೆಹಲಿ, ಬೆಂಗಳೂರು, ಕೋಲ್ಕತ, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ. ಚೀನಾದಿಂದ ಮರಳಿದ ಇನ್ನೂ ಏಳು ಜನರನ್ನು ತೀವ್ರ ನಿಗಾದಲ್ಲಿರಿಸಲಾಗಿದ್ದು ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

    ವ್ಯಾಪಕ ಶ್ಲಾಘನೆ

    ಸೋಂಕು ತಡೆಗೆ ಹಾಗೂ ರೋಗಿಗಳ ಚಿಕಿತ್ಸೆಗೆ ಚೀನಾ ಕೈಗೊಳ್ಳುತ್ತಿರುವ ಕ್ರಮ ಜಾಗತಿಕ ಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. 10 ದಿನದಲ್ಲಿ 1000 ಹಾಸಿಗೆಗಳ ಆಸ್ಪತ್ರೆಯ ನಿರ್ವಣಕ್ಕೆ ಕ್ರಮವೂ ಸೇರಿದಂತೆ ಅದು ಇಟ್ಟಿರುವ ಹೆಜ್ಜೆಗಳನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ. ಸೆಂಟ್ರಲ್ ಹಬೇ ಪ್ರಾಂತ್ಯದ 18 ನಗರಗಳಲ್ಲಿ ಸಂಚಾರ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಚೀನಾದ ಅತ್ಯಂತ ಪ್ರಮುಖ ಚಾಂದ್ರಮಾನ ಹಬ್ಬಕ್ಕಾಗಿ ಜನರು ಬೇರೆ ಬೇರೆ ಊರುಗಳಿಗೆ ಭೇಟಿ ನೀಡಲಿರುವುದರಿಂದ ಸೋಂಕು ವ್ಯಾಪಿಸುವ ಪ್ರಮಾಣ ಹೆಚ್ಚಬಹುದೆಂಬ ಆತಂಕದ ನಡುವೆಯೇ ರೈಲು, ಬಸ್, ವಿಮಾನಗಳ ಯಾನದ ಮೇಲೆ ಬಿಗಿ ನಿರ್ಬಂಧ ವಿಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts