ಬೀಜಿಂಗ್: ಇದುವರೆಗೆ 17 ಜನರನ್ನು ಬಲಿ ಪಡೆದು 600ಕ್ಕೂ ಹೆಚ್ಚು ಜನರನ್ನು ಬಾಧಿಸಿರುವ ಮಾರಕ ಕೊರೊನಾವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯುವ ಉದ್ದೇಶದಿಂದ ಸೋಂಕು ತಟ್ಟಿರುವ ವುಹಾನ್ ನಗರದಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. 1.1 ಕೋಟಿ ಜನಸಂಖ್ಯೆ ಹೊಂದಿರುವ ವುಹಾನ್ ನಗರ ಚಟುವಟಿಕೆಗಳಿಲ್ಲದೆ ನಿಸ್ತೇಜವಾಗಿದೆ. ಈ ಹೊಸ ವೈರಸ್ ಹರಡುವುದನ್ನು ತಡೆಯಲು ಭಾರತ ಸಹಿತ ಜಗತ್ತಿನ ಹಲವು ದೇಶಗಳು ಮುಂಜಾಗ್ರತೆ ಕೈಗೊಂಡಿವೆ.
ಶನಿವಾರ ಆರಂಭವಾಗುವ ಚಾಂದ್ರಮಾನ ಹೊಸ ವರ್ಷದ ಪ್ರಯುಕ್ತ ಕೋಟ್ಯಂತರ ಚೀನಿಯರು ಒಂದು ವಾರ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಿಂದ ವೈರಸ್ ಸೋಂಕಿನ ವೇಗ ಹೆಚ್ಚಲಿದೆ ಎಂದು ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೊರೊನಾವೈರಸ್ ಕಳೆದ ವರ್ಷಾಂತ್ಯದ ವೇಳೆಗೆ ಮೊದಲು ಪತ್ತೆಯಾಗಿತ್ತು. ಮಧ್ಯ ಚೀನಾದ ನಗರ ವುಹಾನ್ನ ಪ್ರಾಣಿ ಮಾರಾಟ ಕೇಂದ್ರದಲ್ಲಿ ಇದು ಕಂಡುಬಂದಿತ್ತು. ಅಲ್ಲಿ ಕಾಡು ಪ್ರಾಣಿಗಳ ಅಕ್ರಮ ಮಾರಾಟ ದಂಧೆಯ ಸಮಯದಲ್ಲಿ ಅದು ಗೊತ್ತಾಗಿತ್ತು. ಎಲ್ಲ ನಗರ ಸಾರಿಗೆ ವ್ಯವಸ್ಥೆ ಮತ್ತು ಹೊರ ಹೋಗುವ ವಿಮಾನ ಸಂಚಾರವನ್ನು ಗುರುವಾರದಿಂದ ರದ್ದು ಪಡಿಸುವುದಾಗಿ ವುಹಾನ್ ಸರ್ಕಾರ ಪ್ರಕಟಿಸಿದೆ. ಆದರೆ ಕೆಲವು ವಿಮಾನಗಳು ಇನ್ನೂ ಹಾರಾಟ ನಡೆಸುತ್ತಿವೆಯೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂಚಾರ ದಟ್ಟಣೆ ಇಲ್ಲದೆ ಹಂಕು ರೈಲ್ವೆ ನಿಲ್ದಾಣ ಬಿಕೋ ಎನ್ನುತ್ತಿರುವ ದೃಶ್ಯಾವಳಿಗಳನ್ನು ಸರ್ಕಾರಿ ಮಾಧ್ಯಮ ಬಿತ್ತರಿಸಿದೆ. ವಿಶೇಷ ಹಾಗೂ ತುರ್ತು ಸಂದರ್ಭ ಹೊರತುಪಡಿಸಿ ಜನರು ನಗರದಿಂದ ಹೊರಹೋಗದಂತೆ ಸರ್ಕಾರ ಸೂಚಿಸಿದೆ. ಪ್ರಮುಖ ಹೆದ್ದಾರಿಗಳಲ್ಲಿ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
ವಿವಿಧ ದೇಶಗಳಲ್ಲಿ 8 ಪ್ರಕರಣ: ಆತಂಕ ಹುಟ್ಟಿಸಿರುವ ಹೊಸ ವೈರಸ್ ಸೋಂಕಿನ ಎಂಟು ಪ್ರಕರಣಗಳನ್ನು ನಾಲ್ಕು ದೇಶಗಳು ದೃಢಪಡಿಸಿವೆ. ಥಾಯ್ಲೆಂಡ್ 4, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಅಮೆರಿಕ ತಲಾ ಒಂದು ಪ್ರಕರಣ ವರದಿ ಮಾಡಿವೆ. ವಾಷಿಂಗ್ಟನ್ನಲ್ಲಿ ಸೋಂಕು ತಗಲಿರುವ ವ್ಯಕ್ತಿಯ ನಿಕಟ ಸಂಪರ್ಕದಲ್ಲಿರುವ 16 ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
2003ರ ಸಾರ್ಸ್ ಸೋಂಕು
2002-2003ರಲ್ಲಿ ಬಾಧಿಸಿದ್ದ ಉಸಿರಾಟ ಸಂಬಂಧಿತ ರೋಗದ (ಸಾರ್ಸ್- ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಬಗ್ಗೆ ಚೀನಾ ಸರ್ಕಾರ ಭಾರಿ ರಹಸ್ಯ ಕಾಯ್ದುಕೊಂಡಿತ್ತು. ಆದರೆ ಈ ಬಾರಿ ಹಾಗೆ ಮಾಡದೆ ಹೊಸ ವೈರಸ್ ಬಗ್ಗೆ ಪ್ರತಿಕ್ಷಣದ ಮಾಹಿತಿ ಹಂಚಿಕೊಳ್ಳುತ್ತಿದೆ. ರಜಾ ಅವಧಿಯಲ್ಲಿ ಉಂಟಾಗುವ ಆತಂಕ ದೂರ ಮಾಡುವುದು ಇದರ ಹಿಂದಿರುವ ಉದ್ದೇಶ. ಸಾರ್ಸ್ ಸೋಂಕಿನಿಂದ ಸುಮಾರು 800 ಜನರು ಮೃತಪಟ್ಟಿದ್ದರು.
ವುಹಾನ್ ಮಧ್ಯ ಚೀನಾದ ಪ್ರಮುಖ ಸಾರಿಗೆ ಕೇಂದ್ರ. ದೇಶದ ಮುಖ್ಯ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರವೂ ಆಗಿದೆ. ಬಾವಲಿಗಳು ಅಥವಾ ಹಾವುಗಳಿಂದ ಈ ಸೋಂಕಿನ ವೈರಸ್ ಹರಡುತ್ತಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ವುಹಾನ್ಗೆ ಪ್ರಯಾಣ ಮಾಡದಂತೆ ಬ್ರಿಟನ್ ಮತ್ತು ಆಸ್ಟ್ರೇಲಿಯಾ ತಮ್ಮ ನಾಗರಿಕರಿಗೆ ಸೂಚಿಸಿವೆ. ಭಾರತದ ಏಳು ವಿಮಾನ ನಿಲ್ದಾಣಗಳಿಗೆ ಚೀನಾ ಮತ್ತಿತರ ದೇಶಗಳಿಂದ ಬರುವ ಪ್ರಯಾಣಿಕರು ಥರ್ಮಲ್ ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೊರಿಯನ್ ಏರ್ಲೈನ್ಸ್, ಸಿಂಗಾಪುರ ಏರ್ಲೈನ್ಸ್, ತೈವಾನ್ನ ಚೀನಾ ಏರ್ಲೈನ್ಸ್ ಮತ್ತು ಜಪಾನ್ನ ಎಎನ್ಎ, ವುಹಾನ್ಗೆ ವಿಮಾನ ಸಂಚಾರ ರದ್ದುಪಡಿಸಿವೆ. ವುಹಾನ್ನಿಂದಲೂ ಈ ದೇಶಗಳಿಗೆ ವಿಮಾನ ಸಂಚಾರ ಇರುವುದಿಲ್ಲ.
ಅಮೆರಿಕಕ್ಕೂ ವ್ಯಾಪಿಸಿದ ವೈರಸ್
ಅಮೆರಿಕದಲ್ಲಿ ಕೂಡ ಈ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ವೈರಸ್ ವಿಶ್ವ ವ್ಯಾಪಿಯಾಗಿ ಹರಡುತ್ತಿದೆ ಎಂಬುದರ ಸೂಚನೆಯಾಗಿದೆ. ಅಮೆರಿಕ ಸರ್ಕಾರ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಂಡಿದೆ.