More

    ಅರುಣಾಚಲ ತಾಣ; ಮರುನಾಮಕರಣ ಏನು ಕಾರಣ?

    ಭಾರತವು ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ನಡೆಸಿದ ಒಂದು ವಾರದ ನಂತರ ಅಲ್ಲಿನ 11 ಸ್ಥಳಗಳನ್ನು ಚೀನಾ ಮರುನಾಮಕರಣ ಮಾಡಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಚೀನಿ, ಟಿಬೆಟ್ ಮತ್ತು ಪಿನ್ಯಿನ್ ಭಾಷೆಗಳಲ್ಲಿ ಹೆಸರುಗಳನ್ನು ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದೆ. ಇದು ಚೀನಾದ ಸಚಿವ ಸಂಪುಟ ನೀಡಿದ ಭೌಗೋಳಿಕ ಹೆಸರುಗಳ ನಿಯಮಗಳಿಗೆ ಅನುಸಾರವಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

    ಚೀನಾ ಮರುನಾಮಕರಣ ಮಾಡಿರುವ ಪಟ್ಟಿಯಲ್ಲಿ ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಪರ್ವತ ಶಿಖರಗಳು ಮತ್ತು ಎರಡು ನದಿಗಳು ಸೇರಿವೆ. ಸ್ಥಳಗಳು, ಹೆಸರುಗಳು ಮತ್ತು ಅವುಗಳ ಅಧೀನದ ಆಡಳಿತ ಜಿಲ್ಲೆಗಳ ವರ್ಗಗಳನ್ನು ಸಹ ಉಲ್ಲೇಖಿಸಲಾಗಿದೆ. ಇದು ಚೀನಾ ಸಚಿವಾಲಯವು ಹೊರಡಿಸಿದ ಜಂಗ್ನಾನ್ ಪ್ರದೇಶದಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ಮೂರನೇ ಪಟ್ಟಿಯಾಗಿದೆ. ಆರು ಸ್ಥಳಗಳ ಮೊದಲ ಪಟ್ಟಿಯನ್ನು 2017ರಲ್ಲಿ ಹಾಗೂ 15 ಸ್ಥಳಗಳ ಎರಡನೇ ಪಟ್ಟಿಯನ್ನು 2021ರಲ್ಲಿ ಬಿಡುಗಡೆ ಮಾಡಲಾಗಿತ್ತು.

    ಏಕೆ ಮರುನಾಮಕರಣ?: ಅರುಣಾಚಲ ಪ್ರದೇಶದ ಅಂದಾಜು 90,000 ಚದರ ಕಿ.ಮೀ ಪ್ರದೇಶವನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತದೆ. ಚೀನಿ ಭಾಷೆಯಲ್ಲಿ ಈ ಪ್ರದೇಶವನ್ನು ಜಂಗ್ನಾನ್ ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಟಿಬೆಟ್ ಆಗಿದೆ ಎಂದು ಪ್ರತಿಪಾದಿಸಿಕೊಂಡುಬಂದಿದೆ. ಚೀನೀ ನಕ್ಷೆಗಳು ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸುತ್ತವೆ. ಈ ಮೂಲಕ ಭಾರತದ ಭೂಪ್ರದೇಶದ ಮೇಲೆ ಹಕ್ಕು ಸಾಧಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾದ ಹೆಸರುಗಳನ್ನು ನೀಡುವುದು ಇಂತಹ ಪ್ರಯತ್ನದ ಒಂದು ಭಾಗವಾಗಿದೆ.

    ಹಿಂದಿನ ಪಟ್ಟಿಗಳಲ್ಲಿ ಏನಿತ್ತು?

    ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳನ್ನು ಚೀನಾ ಮರುನಾಮಕರಣ ಮಾಡಿದ ಮೊದಲ ಪಟ್ಟಿಯು 2017ರ ಏಪ್ರಿಲ್ 14 ರಂದು ಹೊರಬಂದಿತ್ತು. ಈ ಪಟ್ಟಿಯಲ್ಲಿ ವೋಗ್ಯಾನ್ಲಿಂಗ್, ಮಿಲಾ ರಿ, ಕೊಯಿಡೆಂಗಾಬೋ ರಿ, ಮೈನ್ಕುಕಾ, ಬುಮೊ ಲಾ ಮತ್ತು ನಮ್ಕಪಬ್ ರಿ ಎಂಬ ಹೆಸರುಗಳನ್ನು ಆರು ಸ್ಥಳಗಳಿಗೆ ನೀಡಲಾಗಿತ್ತು. ಅಕ್ಷಾಂಶ ಮತ್ತು ರೇಖಾಂಶಗಳ ಪ್ರಕಾರ ಈ ಸ್ಥಳಗಳು ಕ್ರಮವಾಗಿ ತವಾಂಗ್, ಕ್ರಾ ದಾಡಿ, ಪಶ್ಚಿಮ ಸಿಯಾಂಗ್, ಸಿಯಾಂಗ್, ಅಂಜಾವ್ ಮತ್ತು ಸುಬಾನ್ಸಿರಿ ಆಗಿದ್ದವು. ಚೀನಾ ನಡೆಯನ್ನು ಭಾರತ ಖಂಡಿಸಿತ್ತು. ಇದಾದ ನಾಲ್ಕೂವರೆ ವರ್ಷಗಳ ನಂತರ, ಚೀನಾವು ಮರುನಾಮಕರಣ ಮಾಡಿದ ಸ್ಥಳಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯು ಎಂಟು ವಸತಿ ಪ್ರದೇಶಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಮತ್ತು ಕಣಿವೆ ಮಾರ್ಗವನ್ನು ಒಳಗೊಂಡಿತ್ತು. ‘ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಮತ್ತು ಪ್ರಮಾಣೀಕೃತ ಹೆಸರುಗಳು ಚೀನಾದ ಆವಿಷ್ಕಾರವಾಗಿದೆ’ ಎಂದು ಭಾರತ ಪ್ರತಿಕ್ರಿಯಿಸಿತ್ತು.

    ಗಡಿ ತಕರಾರು

    1914ರ ಶಿಮ್ಲಾ ಒಪ್ಪಂದದ ಪ್ರಕಾರ ಮೆಕ್ ಮಹೊನ್ ರೇಖೆಯು ಭಾರತ ಹಾಗೂ ಚೀನಾ ನಡುವಿನ ಗಡಿಯಾಗಿದೆ. ಆದರೆ, ಚೀನಾ ಇದನ್ನು ಒಪ್ಪಿಕೊಳ್ಳುವುದಿಲ್ಲ. ಬ್ರಿಟಿಷ್ ಭಾರತ, ಟಿಬೆಟ್ ಮತ್ತು ಚೀನಾ ನಡುವೆ ಶಿಮ್ಲಾ ಸಮಾವೇಶ ನಡೆದಿತ್ತು. ಕ್ವಿಂಗ್ ರಾಜವಂಶವನ್ನು ಉರುಳಿಸಿದ ನಂತರ 1912 ರಲ್ಲಿ ಘೊಷಿಸಲ್ಪಟ್ಟ ರಿಪಬ್ಲಿಕ್ ಆಫ್ ಚೀನಾದ ಸ್ವತಂತ್ರ ರಾಯಭಾರಿಯೊಬ್ಬರು ಈ ಸಮಾವೇಶದಲ್ಲಿ ಚೀನಾವನ್ನು ಪ್ರತಿನಿಧಿಸಿದ್ದರು. ಚೀನಾದ ಪ್ರತಿನಿಧಿ ಶಿಮ್ಲಾ ಸಮಾವೇಶದ ನಿರ್ಣಯಕ್ಕೆ ಒಪ್ಪಿಗೆ ನೀಡಲಿಲ್ಲ. ಟಿಬೆಟ್​ಗೆ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲು ಸ್ವತಂತ್ರ ಅಧಿಕಾರವಿಲ್ಲ ಎಂದು ಅವರು ಹೇಳಿದ್ದರು.

    ಶಿಮ್ಲಾದಲ್ಲಿ ಮುಖ್ಯ ಬ್ರಿಟಿಷ್ ಸಮಾಲೋಚಕರಾಗಿದ್ದ ಹೆನ್ರಿ ಮೆಕ್ ಮಹೊನ್ ಅವರ ಹೆಸರಿನಲ್ಲೇ ಭೂತಾನ್​ನ ಪೂರ್ವ ಗಡಿಯಿಂದ ಚೀನಾ-ಮ್ಯಾನ್ಮಾರ್ ಗಡಿಯಲ್ಲಿರುವ ಇಸು ರಾಜಿ ಪಾಸ್​ಗೆ ರೇಖೆಯನ್ನು ಎಳೆಯಲಾಯಿತು. ಅರುಣಾಚಲ ಪ್ರದೇಶದಲ್ಲಿ ಮೆಕ್ ಮಹೊನ್ ರೇಖೆಯ ದಕ್ಷಿಣ ಭಾಗದಲ್ಲಿರುವ ಪ್ರದೇಶವನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತದೆ. ಭಾರತದ ಭೂಪ್ರದೇಶದ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸುವ ತಂತ್ರದ ಭಾಗವಾಗಿ, ಅರುಣಾಚಲ ಪ್ರದೇಶಕ್ಕೆ ಭಾರತೀಯ ಗಣ್ಯರು ಭೇಟಿ ನೀಡಿದಾಗಲೆಲ್ಲ ಚೀನಾ ಉದ್ವಿಗ್ನ ಹೇಳಿಕೆಗಳನ್ನು ನೀಡುವುದು ವಾಡಿಕೆ.

    ಮರುನಾಮಕರಣವು ಚೀನಾದ ಕ್ರಮಗಳ ಬಗೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಹಾಗೂ ಆ ದೇಶಕ್ಕೆ ಕ್ಲೀನ್​ಚಿಟ್ ನೀಡಿರುವುದರ ಪರಿಣಾಮ. ಭಾರತ-ಚೀನಾ ಗಡಿಯಲ್ಲಿ ಚೀನಾದ ಪ್ರಚೋದನೆಗಳು ಮತ್ತು ಉಲ್ಲಂಘನೆಗಳು ಮುಂದುವರಿದಿವೆ. ನಾವು ಹಿಂದೆ ಅಡೆತಡೆಯಿಲ್ಲದ ಪ್ರವೇಶ ಹೊಂದಿದ್ದ ಆಯಕಟ್ಟಿನ ಡೆಪ್ಸಾಂಗ್ ಬಯಲು ಪ್ರದೇಶಕ್ಕೆ ನಮ್ಮ ಗಸ್ತು ಪ್ರವೇಶ ನಿರಾಕರಿಸಲಾಗಿದೆ. ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.

    ಮರುನಾಮಕರಣದ ಪ್ರಯತ್ನ ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗ ಟಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಭಾರತದ ಅವಿಭಾಜ್ಯ ಅಂಗ. ಆವಿಷ್ಕರಿಸಿದ ಹೆಸರುಗಳನ್ನು ನಿಯೋಜಿಸುವ ಪ್ರಯತ್ನಗಳು ಈ ವಾಸ್ತವವನ್ನು ಬದಲಾಯಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

    ಏನಿದು ವಿವಿಪಿ?

    2022-23ರಿಂದ 2025-26 ರ ಅವಧಿಯಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿನ 19 ಗಡಿ ಜಿಲ್ಲೆಗಳಲ್ಲಿನ 2,967 ಹಳ್ಳಿಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಯೋಜನೆ ಇದಾಗಿದೆ. ವಿವಿಪಿಯಲ್ಲಿ ರೂ 2,500 ಕೋಟಿಗಳನ್ನು ರಸ್ತೆ ಸಂಪರ್ಕಕ್ಕೆ ವಿನಿಯೋಗಿಸಲಾಗುತ್ತಿದೆ. ಈ ಅಭಿವೃದ್ಧಿ-ಸಂಪರ್ಕ ಯೊಜನೆಯು ಮೊದಲ ಹಂತದಲ್ಲಿ ಅರುಣಾಚಲದ 455 ಹಳ್ಳಿಗಳು ಸೇರಿದಂತೆ 662 ಗ್ರಾಮಗಳನ್ನು ಒಳಗೊಂಡಿದೆ.

    ಗಡಿ ನಿವಾಸಿಗಳ ಜೀವನದ ಗುಣಮಟ್ಟ ಸುಧಾರಿಸುವ ಗುರಿಯನ್ನು ಹೊಂದಿದ್ದು, ಜನರು ತಮ್ಮಗ್ರಾಮಗಳಲ್ಲಿಯೇ ಜೀವನ ಮುಂದುವರಿಸುವುದನ್ನು ಪೋ›ತ್ಸಾಹಿಸುತ್ತದೆ. ಈ ಮೂಲಕ ಮರುವಲಸೆಯನ್ನು ಪ್ರೋತ್ಸಾಹಿಸಿ ಗಡಿ ಭದ್ರತೆಯನ್ನು ಬಲಪಡಿಸಲು ಯೋಜಿಸಲಾಗಿದೆ. ವಿವಿಪಿ ಯೋಜನೆಯಡಿ ಜಿಲ್ಲಾಡಳಿಗಳು ಬ್ಲಾಕ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಸೂಕ್ತ ಕಾರ್ಯವಿಧಾನಗಳ ನೆರವಿನೊಂದಿಗೆ ಕೇಂದ್ರ ಮತ್ತು ರಾಜ್ಯ ಯೋಜನೆಗಳು ನೂರಕ್ಕೆ ನೂರಷ್ಟು ಜಾರಿಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಗುರುತಿಸಲಾದ ಗ್ರಾಮಕ್ಕೆ ಕ್ರಿಯಾ ಯೋಜನೆಗಳನ್ನು ತಯಾರಿಸಬೇಕಾಗಿದೆ. ಈ ಗ್ರಾಮಗಳಲ್ಲಿ ರಸ್ತೆ ಸಂಪರ್ಕ, ಕುಡಿಯುವ ನೀರು, ಸೌರ ಮತ್ತು ಪವನ ವಿದ್ಯುಚ್ಛಕ್ತಿ, ಮೊಬೈಲ್ ಮತ್ತು ಇಂಟರ್​ನೆಟ್ ಸಂಪರ್ಕ ಮತ್ತು ಆರೋಗ್ಯ ಮೂಲಸೌಕರ್ಯ ಸೌಲಭ್ಯಗಳನ್ನು ಕಲ್ಪಿಸುವುದು ವಿವಿಪಿಯಲ್ಲಿ ಸೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts