ಕೆರೂರ: ಬಾದಾಮಿ ಕಾಂಗ್ರೆಸ್ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಮದಿಗೆ ಮತ ಚಲಾಯಿಸಿದರೆ, ಇತ್ತ ಬಿಜೆಪಿ ಸಂಸದ ಪಿ.ಸಿ ಗದ್ದಿಗೌಡರ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಮಲ್ಲಪ್ಪ ಹಡಪದಗೆ ಮತ ಚಲಾಯಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗೆ ನಾಂದಿ ಹಾಡಿದ ವಿಲಕ್ಷಣ ಘಟನೆಗೆ ಬುಧವಾರ ಕೆರೂರ ಪಟ್ಟಣ ಪಂಚಾಯಿತಿ ಸಾಕ್ಷಿಯಾಯಿತು.
ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಲ ಅಚ್ಚರಿ ಘಟನೆಗಳು ನಡೆದವು. ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ಶಾಸಕರ ತಂತ್ರಕ್ಕೆ ಲ ಸಿಕ್ಕಿದ್ದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತು. ಬಿಜೆಪಿಗೆ ಬಹುಮತವಿದ್ದರೂ ಸಂಸದ ಗದ್ದಿಗೌಡರ ತಂತ್ರ ಯಶಸ್ವಿಯಾಗಲಿಲ್ಲ.
20 ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ 9, ಕಮಲ ಬೆಂಬಲಿತ 3, ಕಾಂಗ್ರೆಸ್ 6, ಕೈ ಬೆಂಬಲಿತ ಇಬ್ಬರು ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ನಿರ್ಮಲಾ ಸದಾನಂದ ಮದಿ 12 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಮೋದಿನಸಾಬ ಚಿಕ್ಕೂರ 12 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಸಂಸದ ಪಿ.ಸಿ. ಗದ್ದಿಗೌಡರ ಪಕ್ಷದ ಅರ್ಭ್ಯರ್ಥಿಗಳ ಬದಲಾಗಿ ಬೇರೆ ಅಭ್ಯರ್ಥಿಗಳಿಗೆ ವೋಟ್ ಮಾಡಿದ್ದು ಅಚ್ಚರಿಗೆ ಕಾರಣವಾಯಿತು.
ತಹಸೀಲ್ದಾರ್ ಜೆ.ಬಿ ಮಜ್ಜಗಿ, ಮುಖ್ಯಾಧಿಕಾರಿ ರಮೇಶ ಮಾಡಬಾಳ, ಐ.ಎಂ.ಹೊಸಮನಿ, ಆನಂದ ಭಾವಿಮಠ, ಬಸವರಾಜ ಕಟ್ಟಿಮನಿ ಅವರು ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದರು.
ನೂತನ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ ಅವರ ವಿಜಯೋೀತ್ಸವದಲ್ಲಿ ಮಹಾಂತೇಶ ಮೇಣಸಗಿ, ಡಾ.ಎಂ.ಜಿ ಕಿತ್ತಲಿ, ರಾಚ್ಚಪ್ಪ ಹುಂಡೇಕಾರ, ಬಿ.ಎಂ.ಬಂತಿ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ನೂತನ ಅಧ್ಯಕ್ಷೆ ಸೇರಿ 5 ಬಿಜೆಪಿ ಸದಸ್ಯರ ಉಚ್ಚಾಟನೆ
ಪಕ್ಷಕ್ಕೆ ದ್ರೋಹ ಎಸಗಿದ ಪಟ್ಟಣ ಪಂಚಾಯಿತಿ ಐವರು ಬಿಜೆಪಿ ಸದಸ್ಯರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕು ಅಧ್ಯಕ್ಷ ನಾಗರಾಜ ಕಾಚೆಟ್ಟಿ ಜಂಟಿ ಹೇಳಿಕೆ ನೀಡಿದ್ದಾರೆ.
ನೂತನ ಅಧ್ಯಕ್ಷೆ ನಿರ್ಮಲಾ ಸದಾನಂದ ಮದಿ, ಸದಸ್ಯರಾದ ಗೋಪಾಲ ಪೂಜಾರ, ಪರಶುರಾಮ ಮಲ್ಲಾಡದ, ಶಂಕರ ಕೆಂಧೂಳಿ, ಭಾರತಿ ಪರದೇಶಿ ಅವರನ್ನು ತಕ್ಷಣದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.
ಭಾರಿ ಪ್ರಮಾಣದ ಹಣದ ಆಮಿಷ, ರೀಯಲ್ ಎಸ್ಟೇಟ್ ದಂಧೆಯ ಕರಾಳ ಛಾಯೆ ಹಾಗೂ ಶಾಸಕರ ಅಭಯ, ನಾನಾ ರೀತಿಯ ಕಾರಣದಿಂದ ನಮ್ಮ ಪಕ್ಷಕ್ಕೆ ಬಹುಮತವಿದ್ದರೂ ಅಧಿಕಾರ ಪಡೆಯುವಲ್ಲಿ ವಿಲರಾಗಿದ್ದೇವೆ ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು.
ಸದಸ್ಯರಾದ ಕುಮಾರ ಐಹೊಳಿ, ಸಿದ್ದಣ್ಣ ಕೊಣ್ಣೂರ, ಪ್ರಮೋದ ಪೂಜಾರ, ರಾಚ್ಚಪ್ಪ ಶೆಟ್ಟರ, ನಾಗೇಶ ಛತ್ರಭಾನು, ಎನ್.ಬಿ ಬನ್ನೂರ, ಹಣಮಂತ ಪ್ರಭಾಕರ, ಸಚೀನ ದಂಡಿನ ಇದ್ದರು.
ಸಂಸದ ಗದ್ದಿಗೌಡರನ್ನು ಉಚ್ಚಾಟಿಸಿ
ಪಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಲ್ಲಪ್ಪ ಹಡಪದ ಅವರಿಗೆ ಮತ ಚಲಾವಣೆ ಮಾಡಿ ಪಕ್ಷದ ಸಿದ್ಧಾಂತ ಗಾಳಿಗೆ ತೂರಿದ ಸಂಸದ ಪಿ.ಸಿ. ಗದ್ದಿಗೌಡರ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಬೇಕು ಎಂದು ಪಪಂ ಅಧ್ಯಕ್ಷೆ ನಿರ್ಮಲಾ ಪತಿ ಸದಾನಂದ ಮದಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಸಾಕಷ್ಟು ದುಡಿದರೂ ನಮಗೆ ಅಧ್ಯಕ್ಷ ಪದವಿ ನೀಡುವಲ್ಲಿ ಮೀನಮೇಷ ಎಣಿಸಿದರು. ಸದಸ್ಯರನ್ನು ಮಾರಾಟ ವಸ್ತುಗಳನ್ನಾಗಿ ನೋಡುತ್ತಿದ್ದರು. ಸಭೆಗಳಲ್ಲಿ ಒಬ್ಬೊಬ್ಬರಿಗೆ ಇಂತಿಷ್ಟು ಹಣ ನೀಡುತ್ತೇವೆ ಎಂದು ಸದಸ್ಯರನ್ನು ಹರಾಜು ಮಾಡುತ್ತಿದ್ದರು ಎಂದು ಆರೋಪಿಸಿದ ಸದಾನಂದ, ಪಕ್ಷದ ಮುಖಂಡರ ವರ್ತನೆಗೆ ಬೇಸತ್ತು ಬಂಡಾಯವೆದ್ದು ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ಅಧಿಕಾರ ಹಿಡಿಯಬೇಕಾಯಿತು ಎಂದರು.
ಅಭಿವೃದ್ಧಿ ದೃಷ್ಟಿಯಿಂದ ಬಂಡಾಯ ಅಭ್ಯರ್ಥಿಗೆ ಬೆಂಬಲ
ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬಂಡಾಯ ಸದಸ್ಯರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಓರ್ವ ಸದಸ್ಯನ ವಿರುದ್ಧ ಶಿಸ್ತು ಸಮಿತಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.
ಭಾರಿ ಬಂದೋಬಸ್ತ್
ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಿಮಿತ್ತ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ ನೇತತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.