16 ರಂದು ಹನುಮಾನ ಮೂರ್ತಿ ಪುರ ಪ್ರವೇಶ

ಚಿಮ್ಮಡ: ಗ್ರಾಮದ ಜೈ ಹನುಮಾನ ದೇವಸ್ಥಾನದ ನೂತನ ಕಟ್ಟಡದ ವಾಸ್ತು ಶಾಂತಿ, ಉದ್ಘಾಟನೆ, ನೂತನ ಮೂರ್ತಿ ಪ್ರತಿಷ್ಠಾಪನೆ, ಬೆಳ್ಳಿ ಕವಚ ಅನಾವರಣ ಹಾಗೂ ಕಲಶಾರೋಹಣ ಮಹೋತ್ಸವ ಫೆ.13 ರಿಂದ 17ರ ವರೆಗೆ ನಡೆಯಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾದೇವಪ್ಪ ಹಟ್ಟಿ, ದೇವಸ್ಥಾನ ಸ್ವಾಗತ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪಾಟೀಲ ತಿಳಿಸಿದರು.

ಅಂದಾಜು 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ದೇವಸ್ಥಾನಕ್ಕೆ ಮುಸ್ಲಿಂ, ಎಸ್‌ಸಿ, ದೇವಾಂಗ ಸಮಾಜ, ಹಾಲುಮತ ಸಮಾಜ ಸೇರಿ ಗ್ರಾಮದ ಎಲ್ಲ ಸಮುದಾಯಗಳ ಪ್ರಮುಖರು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಜೀರ್ಣೋದ್ಧಾರಕ್ಕೆ ಉದಾರ ದೇಣಿಗೆ ನೀಡಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾದಾಮಿ ಬನಶಂಕರಿದೇವಿ ದೇವಸ್ಥಾನದ ಚಿದಂಬರ ಶಾಸಿಗಳಿಂದ ’ವಾಸ್ತುಶಾಂತಿ’ ಹೋಮ-ಹವನ, ನವಗ್ರಹ ಪೂಜೆ, ನೂತನ ಮೂರ್ತಿ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕಲಶಾರೋಹಣ ಮಹೋತ್ಸವ ನಡೆಯಲಿವೆ ಎಂದರು.
ಫೆ. 16 ರಂದು ಸ್ಥಳೀಯ ವಿರಕ್ತಮಠದ ಪ್ರಭು ಸ್ವಾಮಿಗಳು, ಜನಾರ್ದನ ಮಹಾರಾಜರು, ಚಿದಂಬರ ಶಾಸಿಗಳು ಹಾಗೂ ಗ್ರಾಮದ ಎಲ್ಲ ಸಮುದಾಯಗಳ ಪ್ರಮುಖರ ನೇತೃತ್ವದಲ್ಲಿ ಕುಂಭಮೇಳ, ವಿವಿಧ ವಾದ್ಯ ವೃಂದಗಳೊಂದಿಗೆ ನೂತನ ಹನುಮಾನ ಮೂರ್ತಿಯ ಪುರ ಪ್ರವೇಶ ಮಾಡಿಕೊಳ್ಳಲಾಗುವುದು ಎಂದರು.

17ರಂದು ನಡೆಯುವ ಕಲಶಾರೋಹಣ ಕಾರ್ಯಕ್ರಮದ ಸಾನ್ನಿಧ್ಯವನ್ನು ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮಿಗಳು ವಹಿಸುವರು. ವಿವಿಧ ಮಠಾಧೀಶರು ಸಮ್ಮುಖ ವಹಿಸುವರು. ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಗಣ್ಯರು ಆಗಮಿಸುವರು. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಪ್ರಮುಖರಾದ ರಾಮಣ್ಣ ಮುಗಳಖೋಡ, ಆರ್.ಎಂ. ಬಗನಾಳ, ಗುರಲಿಂಗಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಗುರಪ್ಪ ಬಳಗಾರ, ಈಶ್ವರ ಬಡಿಗೇರ, ಬೀರಪ್ಪ ಹಳೆಮನಿ, ಶಂಕರ ಬಟಕುರ್ಕಿ, ರಾಚಯ್ಯ ಮಠಪತಿ, ಬಸವರಾಜ ಕುಂಚನೂರ, ಖುದಾಸಾಬ ಗೊಳಸಂಗಿ, ಪೀರಸಾಬ ನದಾಫ್ ಉಪಸ್ಥಿತರಿದ್ದರು. ವಿಜಯಕುಮಾರ ಪೂಜಾರಿ ಸ್ವಾಗತಿಸಿದರು. ಪಿಕೆಪಿಎಸ್ ಮಾಜಿ ಅಧ್ಯಕ್ಷ ಪರಪ್ಪ ಪಾಲಭಾವಿ ವಂದಿಸಿದರು.