ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮೇಲೆ ವ್ಯಕ್ತಿಯಿಂದ ಖಾರದ ಪುಡಿಯ ದಾಳಿ

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ ಮಂಗಳವಾರ ಖಾರದ ಪುಡಿ ದಾಳಿ ನಡೆಸಿದ್ದಾನೆ.

ದೆಹಲಿ ಸಚಿವಾಲಯದ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನದ ಭೋಜನಕ್ಕೆಂದು ತಮ್ಮ ಕಚೇರಿಯಿಂದ ನಿರ್ಗಮಿಸಿದ ಕೇಜ್ರಿವಾಲ್​ ಮೇಲೆ ದೆಹಲಿಯ ನಾರಾಯಣ ಎಂಬಲ್ಲಿನ ಸರಿಸುಮಾರು 40 ವರ್ಷ ವಯಸ್ಸಿನ ಅನಿಲ್​ ಕುಮಾರ್​ ಶರ್ಮಾ ಎಂಬಾತ ದಾಳಿ ನಡೆಸಿದ್ದಾನೆ. ಆತನನ್ನು ಐಪಿ ಎಸ್ಟೇಟ್​ ಪೊಲೀಸರು ಬಂಧಿಸಿದ್ದಾರೆ.

ಅನಿಲ್ ಕುಮಾರ್​​ ಶರ್ಮಾ ಸಿಗರೇಟ್​ ಪ್ಯಾಕೆಟ್​ನಲ್ಲಿ ಖಾರದ ಪುಡಿಯನ್ನು ತುಂಬಿಕೊಂಡು ತಂದಿದ್ದ. ಪತ್ರವೊಂದನ್ನು ನೀಡಲು ಕಾದು ಕುಳಿತಿದ್ದ. ಕೇಜ್ರಿವಾಲ್​ ಅವರು ಕಚೇರಿಯಿಂದ ಬರುತ್ತಲೇ ಅವರ ಕಾಲಿಗೆರಗಿದ ಅನಿಲ್​ನನ್ನು ಕೇಜ್ರಿವಾಲ್​ ಬಗ್ಗಿ ಮೇಲೆತ್ತಲು ಪ್ರಯತ್ನಿಸಿದರು. ಆಗ ಅನಿಲ್​ ಕೇಜ್ರಿವಾಲ್​ ಮೇಲೆ ಖಾರದ ಪುಡಿ ಎರಚಿದ್ದಾನೆ. ಆದರೆ, ಕೇಜ್ರಿವಾಲ್​ ಕಣ್ಣಿಗೆ ಖಾರದ ಪುಡಿ ಬಿದ್ದಿಲ್ಲ. ಕಣ್ಣಿಗೆ ಕನ್ನಡಕ ಹಾಕಿದ್ದರಿಂದ ಅವರು ಪಾರಾಗಿದ್ದಾರೆ. ಆದರೆ, ತಮ್ಮ ಕಣ್ಣನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಕನ್ನಡಕ ನೆಲದ ಮೇಲೆ ಬಿದ್ದು ಒಡೆದಿದೆ. ಅನಿಲ್​ನ ಈ ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.

ಈ ನಡುವೆ ಘಟನೆಯನ್ನು ಎಎಪಿ ಖಂಡಿಸಿದೆ. ಇದೊಂದು ಅಪಾಯಕಾರಿ ದಾಳಿ ಎಂದು ಪಕ್ಷ ಕರೆದಿದೆ. ಅಲ್ಲದೆ, ದೆಹಲಿ ಪೊಲೀಸರಿಂದ ಭದ್ರತಾ ವೈಫಲ್ಯವಾಗಿದೆ ಎಂದು ಎಎಪಿ ಆರೋಪಿಸಿದೆ. ಭದ್ರತಾ ವೈಫಲ್ಯದಲ್ಲಿ ಕೇಂದ್ರದ ಪಾತ್ರವೂ ಇದೆ ಎಂದು ಪಕ್ಷ ಕಿಡಿಕಾರಿದೆ.

ಎಎಪಿ ಆರೋಪಕ್ಕೆ ತೀಕ್ಷ್ಣ ತಿರುಗೇಟು ನೀಡಿರುವ ಬಿಜೆಪಿ, ” ಇದು ಎಎಪಿ ಆಯೋಜಿಸಿದ ರಾಜಕೀಯ ಉದ್ದೇಶದ ಘಟನೆ,” ಎಂದು ಹೇಳಿದೆ.
ಇದಕ್ಕೂ ಹಿಂದೆ ತಮ್ಮ ಪಕ್ಷದವನೇ ಆದ ಅಸಮಾಧಾನಿತ ಕಾರ್ಯಕರ್ತನೊಬ್ಬ ದೆಹಲಿ ಸಿಎಂ ಅರವಿಂದ ಕೇಜ್ರಿವಾಲರ ಕೆನ್ನೆಗೆ ಹೊಡೆದಿದ್ದ.

Breaking News

Comments are closed.