ಬ್ಯಾಡಗಿಯಲ್ಲಿ ಚಿಲ್ಲಿ ಎಕ್ಸ್​ಪೋ ಇಂದಿನಿಂದ

ಬ್ಯಾಡಗಿ: ಬ್ಯಾಡಗಿಯ ಮೆಣಸಿನಕಾಯಿ ವರ್ತಕರ ಸಂಘದ 40ನೇ ವಾರ್ಷಿಕ ಸಭೆಯ ಅಂಗವಾಗಿ ಸೆ. 8 ಹಾಗೂ 9ರಂದು ಎರಡು ದಿನಗಳ ಕಾಲ ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಚಿಲ್ಲಿ ಎಕ್ಸ್​ಪೋ-2018 ಆಯೋಜಿಸಿದೆ.

40ಕ್ಕೂ ಹೆಚ್ಚು ಮಳಿಗೆ: ಎಕ್ಸ್​ಪೋ-2018 ಕಾರ್ಯಕ್ರಮ ಕೇವಲ ಸಂಭ್ರಮವಾಗಿರದೆ, ರೈತರಿಗೆ ಹಾಗೂ ವರ್ತಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಂಶೋಧನೆ ತಳಿ, ರೋಗಗಳ ನಿಯಂತ್ರಣಕ್ಕೆ ವಿವಿಧ ಔಷಧ, ಮೆಣಸಿನಕಾಯಿ ಉಪಉತ್ಪನ್ನಗಳು, ಖಾರದ ಪುಡಿ ಯಂತ್ರ, ಹೊಸ ತಾಂತ್ರಿಕತೆ ಹಾಗೂ ಕೃಷಿ ಪೂರಕ ಸಾಮಗ್ರಿಗಳ ವಿಶೇಷ ಪ್ರಾತ್ಯಕ್ಷಿಕೆ ಮಾಹಿತಿ, ದೇಶದ ಪ್ರಸಿದ್ಧ ವಿಮೆ ಕಂಪನಿಗಳ ಪ್ರತಿನಿಧಿಗಳು, ಬ್ಯಾಂಕ್ ಅಧಿಕಾರಿಗಳು, ವಿಆರ್​ಎಲ್, ಟಾಟಾ, ಬಜಾಜ್, ಕಂಪನಿ ಸೇರಿ ವಿವಿಧ ಫೈನಾನ್ಸ್ ಸಂಸ್ಥೆಗಳು ಪಾಲ್ಗೊಂಡು ಮಾಹಿತಿ ನೀಡಲಿವೆ.

ಮೇಳ್ಕಕೆ ಗಣ್ಯರ ದಂಡು: ಪ್ರಸಿದ್ಧ ಉದ್ಯಮಿ ಹಾಗೂ ವಿಆರ್​ಎಲ್ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ, ಸಂಸದ ಶಿವಕುಮಾರ ಉದಾಸಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗುಜರಾತ್ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಹಿರೇನ್ ಡಿ. ಗಾಂಧಿ, ಡಾ. ವೆಂಕಟೇಶ ಎಂ.ವಿ., ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಹಾಗೂ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆ, ವಿವಿಧ ಮಾರುಕಟ್ಟೆಗಳ ವರ್ತಕರ ಪದಾಧಿಕಾರಿಗಳು, ಆಂಧ್ರ, ಗುಜರಾತ್ ಚೇಂಬರ್ಸ್ ಆಫ್ ಕಾಮರ್ಸ್ ಪ್ರತಿನಿಧಿಗಳು, ದಿಲ್ಲಿಯ ವಿವಿಧ ಮೆಣಸಿನಕಾಯಿ ಪ್ರೊಡಕ್ಟ್ ಕಂಪನಿಯ ಮುಖ್ಯಸ್ಥರು, ಬೃಹತ್ ಖರೀದಿದಾರರು ಹಾಗೂ ರಾಜ್ಯ, ಹೊರ ರಾಜ್ಯದಿಂದಲೂ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ.

ಬ್ಯಾಡಗಿಯ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಯಲ್ಲಿ ವರ್ತಕರ ಹಾಗೂ ರೈತರ ಪಾತ್ರ ಹಿರಿದಾಗಿದೆ. ನಾಲ್ಕು ದಶಕಗಳ ಕಾಲ ವರ್ತಕರ ಸಂಘವು ಮೆಣಸಿನಕಾಯಿ ಉತ್ಪಾದನೆ ಹಾಗೂ ಮಾರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. 40ನೇ ವಾರ್ಷಿಕ ಸಭೆ ಅಂಗವಾಗಿ ಮೆಣಸಿನಕಾಯಿ ಮೇಳ ಹಮ್ಮಿಕೊಂಡು, ರೈತರ, ವರ್ತಕರಿಗೆ ಹೊಸ ಮಾಹಿತಿ ತಿಳಿಸುವ ಯತ್ನ ನಡೆದಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

| ಸುರೇಶಗೌಡ್ರ ಪಾಟೀಲ, ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ

ರಡು ದಿನ ಜರುಗುವ ಕಾರ್ಯಕ್ರಮದಲ್ಲಿ ದೇವಿಹೊಸೂರು ಆಹಾರ ಹಾಗೂ ತೋಟಗಾರಿಕೆ ಸಂಶೋಧನೆ ಕೇಂದ್ರದ ಡಾ. ಟಿ.ಬಿ. ಅಲ್ಲೊಳ್ಳಿ ಅವರು ಮೆಣಸಿನಕಾಯಿ ತಳಿ ಹಾಗೂ ಆಹಾರ ಸಂಸ್ಕರಣಾ ಪ್ರಾಮುಖ್ಯತೆ, ಡಾ. ಪ್ರಭುದೇವ ಅಜ್ಜಪ್ಪಳವರ ಅವರು ಮೆಣಸಿನಕಾಯಿ ಉತ್ಪಾದನೆ ತಾಂತ್ರಿಕತೆಗಳು, ಡಾ. ಅಬ್ದುಲ್ ಖರೀಂ, ಬೆಳೆಗೆ ಕೀಟ ಹಾಗೂ ರೋಗ ನಿಯಂತ್ರಣ ಕ್ರಮಗಳ ಕುರಿತು ಉಪನ್ಯಾಸ ನೀಡಲ್ದಿದಾರೆ. ಮೆಣಸಿನಕಾಯಿ ಮೇಳ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಯೋಜನೆಗಳ ಮಾಹಿತಿ ತಲುಪಿಸಲಾಗುವುದು.

| ಟಿ.ವಿಜಯಲಕ್ಷಿ್ಮೕ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ