ಚಳ್ಳಕೆರೆ: ಮನೆ ಮತ್ತು ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ತಹಸೀಲ್ದಾರ್ ಎಂ. ಮಲ್ಲಿಕಾರ್ಜುನಪ್ಪ ಹೇಳಿದರು.
ನಗರದ ಚಿತ್ರಯ್ಯನಹಟ್ಟಿ ಸಮೀಪದ ಜಗಲೂರಜ್ಜ ಪ್ರೌಢಶಾಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಆಯೋಜಿಸಿದ್ದ ಡೆಂೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸಮಸ್ಯೆ ಸಣ್ಣದೆಂದು ನಿರ್ಲಕ್ಷ ಮಾಡಿದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಏನೇ ತೊಂದರೆ ಆದರೂ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು. ಸೊಳ್ಳೆ ನಿಯಂತ್ರಣ ಮಾಡುವ ಮೂಲಕ ರೋಗ ಮುಕ್ತ ಬದುಕು ಸಾಗಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎನ್. ಪ್ರೇಮಸುಧಾ ಮಾತನಾಡಿ, ಸೊಳ್ಳೆ ಚಿಕ್ಕ ಕೀಟವಾದರೂ ಮಾರಣಾಂತಿಕ ಕಾಯಿಲೆ ಸೃಷ್ಟಿಸುವ ಶಕ್ತಿ ಹೊಂದಿದೆ. ಇವುಗಳ ನಿಯಂತ್ರಣಕ್ಕಾಗಿ ರಾತ್ರಿ ಮಲಗುವಾಗ ಪರದೆ ಬಳಸಬೇಕು. ಮನೆ ಸುತ್ತಮುತ್ತ ಚಂಡು ಹೂವಿನ ಗಿಡ ಬೆಳೆಸಬೇಕು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳನ್ನು ಜಂಕ್ ಫುಡ್ನಿಂದ ದೂರವಿಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ವೆಂಕಟೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ಮುಖ್ಯಶಿಕ್ಷಕಿ ಹೇಮಲತಾ, ಆಶಾ ಕಾರ್ಯಕರ್ತೆಯರಿದ್ದರು.