ರಹೀಂ ನಗರ ದೊಡ್ಡಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ

ಚಳ್ಳಕೆರೆ: ರೋಗ ಹರಡುವ ತಾಣವಾಗಿದ್ದ ರಹಿಂ ನಗರ ಸಮೀಪದ ದೊಡ್ಡ ಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ ಸಿಕ್ಕಿದೆ.

ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ‘ಕೊಳಚೆ ನೀರಿನಿಂದ ಸಿಗದ ಮುಕ್ತಿ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ನಗರಸಭೆ ಹಾಗೂ ಶಾಸಕರು, ಹಳ್ಳದ ನೀರು ಸರಾಗವಾಗಿ ಹರಿಯಲು ಸಣ್ಣ ನೀರಾವರಿ ಇಲಾಖೆಯ 99 ಲಕ್ಷ ರೂ. ಅನುದಾನದಲ್ಲಿ ತಡೆಗೋಡೆ ಕಾಮಗಾರಿ ಆರಂಭಿಸಿದ್ದಾರೆ.

ಈ ಪ್ರದೇಶದ 100ಕ್ಕೂ ಹೆಚ್ಚು ಗುಡಿಸಲು ಮಳೆ ಬಂದಾಗ ಜಲಾವೃತವಾಗುತ್ತಿದ್ದವು. ಆ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಸಮೀಪದ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆಯುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ನಗರಾಡಳಿತ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಇದೀಗ ಕಾಮಗಾರಿ ಆರಂಭಗೊಂಡಿರುವುದು ಸ್ಥಳೀಯರ ಆತಂಕ ನಿವಾರಿಸಿದೆ.

ಶಾಸಕರ ನಿರ್ದೇಶನದಂತೆ, ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಈ ಕಾಮಗಾರಿ ಆರಂಭಗೊಂಡಿದೆ. ಎರಡೂವರೆ ಮೀಟರ್ ಎತ್ತರ, 210 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಹಾಯಕ ಸಣ್ಣ ನೀರಾವರಿ ಇಲಾಖೆ, ಚಿತ್ರದುರ್ಗ ಇಂಜಿನಿಯರ್ ಅಣ್ಣಪ್ಪ ತಿಳಿಸಿದ್ದಾರೆ.

Leave a Reply

Your email address will not be published. Required fields are marked *