ಮಕ್ಕಳಲ್ಲಿ ಮೂಡಲಿ ವೈಜ್ಞಾನಿಕ ಮನೋಭಾವ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಶಾಲಾ ಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಂತಾದರೆ ಪ್ರಬುದ್ಧ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ಅವರು, ವಿದ್ಯೆ ಒಂದೇ ಶಾಶ್ವತ ಆಸ್ತಿ. ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಕಲಿಕೆ ಸಂದರ್ಭದಲ್ಲಿ ಓದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಇಲ್ಲಿ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲು ಸರ್ಕಾರದ ಸಹಕಾರ, ನೆರವು ನೀಡುವುದಾಗಿ ಭರವಸೆ ನೀಡಿದರು.
ವಿವಿ ಕುಲಪತಿ ಪ್ರೊ.ಎಸ್.ಆರ್. ನಿರಂಜನ್ ಮಾತನಾಡಿ, ದೇಶದ ಅಗತ್ಯಕ್ಕೆ ಅನುಗುಣ ವಿಜ್ಞಾನಿಗಳು ಸಂಶೋಧನೆ ಮಾಡಬೇಕು. ಜೀವವಿರುವ ದೇಹವು ವೈಜ್ಞಾನಿಕ ತಳಹದಿ ಆಧರಿಸಿ 24 ಗಂಟೆ ಕರಾರುವಾಕ್ಕಾಗಿ ಚಲನಶೀಲ ಹೊಂದಿರುತ್ತದೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ಲಾಂಟಿಂಗ್ ಕ್ಲಿನಿಕ್ ಸ್ಥಾಪಿಸಲಾಗಿದ್ದು, ರೈತರು ತಮ್ಮ ಯಾವುದೇ ಸಸ್ಯಗಳಿಗೆ ಏನೇ ರೋಗ ಬಂದರೂ ಸ್ಯಾಂಪಲ್ ತಂದು ಕ್ಲಿನಿಕ್ನಲ್ಲಿ ತೋರಿಸಿ ಸೂಕ್ತ ಪರಿಹಾರ ಪಡೆಯಬಹುದು ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮೇಯರ್ ಮಲ್ಲಮ್ಮ ವಳಕೇರಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ್, ವಿಜ್ಞಾನ ಪರಿಷತ್ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್, ಬಾಲ ವಿಜ್ಞಾನ ಮಾಸಪತ್ರಿಕೆ ಸಂಪಾದಕಿ ಶ್ರೀಮತಿ ಹರಿಪ್ರಸಾದ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಪರಿಷತ್ ರಾಜ್ಯ ಸಮಿತಿ ಸದಸ್ಯರಾದ ಸಿ.ಕೃಷ್ಣೇಗೌಡ, ಜಗನ್ನಾಥ ಹಲ್ಮಡಗಿ, ಜಿಲ್ಲಾಧ್ಯಕ್ಷ ಡಾ.ಸಂಗಮೇಶ ಹಿರೇಮಠ, ಹಿರಿಯ ವಿಜ್ಞಾನ ಸಂವಹನಕಾರಾದ ಡಾ.ಬಾಲಕೃಷ್ಣ ಅಡಿಗ, ಪ್ರೊ.ಎಂ.ಆರ್.ನಾಗರಾಜು, ಡಿಡಿಪಿಐ ಶಾಂತಗೌಡ ಪಾಟೀಲ್ ಸೇರಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರಿಷತ್ ರಾಜ್ಯ ಸಮಿತಿ ಸದಸ್ಯ ಎಚ್.ಜಿ.ಹುದ್ದಾರ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಕರಾವಿಪ ಜಿಲ್ಲಾ ಸಮಿತಿ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯ ಸಹಯೋಗದಡಿ ಈ ಸಮಾವೇಶ ಆಯೋಜಿಸಲಾಗಿದೆ. ವಿವಿ ಆಡಳಿತಾತ್ಮಕ ಕಚೇರಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನವರೆಗೆ ಜನಪದ ಕಲಾ ಜಾಥಾ ನಡೆಯಿತು.