ಬಾಲಮಂದಿರದ 103 ಮಕ್ಕಳು ರಾತ್ರಿ ಊಟ ಸೇವಿಸಿ ಅಸ್ವಸ್ಥ, ತುರ್ತು ಚಿಕಿತ್ಸೆ

ಬೆಂಗಳೂರು: ರಾತ್ರಿ ಊಟ ಸೇವಿಸಿದ ಬಳಿಕ ಸುಮಾರು 103ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಊಟ ಮಾಡಿದ‌ ಬಳಿಕ 5ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಬಳಿಕ ಹಲವು ವಿದ್ಯಾರ್ಥಿಗಳು ಹೊಟ್ಟೆಯಲ್ಲಿ ತಳಮಳ ಆಗುತ್ತಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ 103 ವಿದ್ಯಾರ್ಥಿಗಳನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ.

ಈ ವೇಳೆ ಫುಡ್ ​​ಪಾಯಿಸನ್​ನಿಂದ ಘಟನೆ ಆಗಿರುವುದು ಬೆಳಕಿಗೆ ಬಂದಿದೆ. ಸದ್ಯ ಎಲ್ಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಸೇಫ್ ಆಗಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಮಾನತಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಮ್‌ನಲ್ಲಿ ನಡೆಯುತ್ತಿರುವ ಬಾಲಮಂದಿರದಲ್ಲಿ ನಿನ್ನೆ ರಾತ್ರಿ ಊಟ ಮಾಡಿದ ನಂತರ ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆ ತರಲಾಗಿದೆ. ಮೂರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಇನ್ನೂ 40 ಮಕ್ಕಳಿಗೆ ಚಿಕಿತ್ಸೆಯಲ್ಲಿ ಇದ್ದಾರೆ. ಅಡುಗೆ ಮಾಡಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಫುಡ್‌ ಸ್ಯಾಂಪಲ್ಸ್‌ನಿಂದ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಸದ್ಯ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಎಲ್ಲರೂ ಆರೋಗ್ಯದಿಂದಿದ್ದಾರೆ. ಮೂರು ಮಕ್ಕಳಿಗೆ ಮಾತ್ರ ಲಿಕ್ವಿಡ್ ಆಹಾರ ನೀಡಲಾಗುತ್ತಿದೆ. ಉಳಿದವರು ಕ್ಷೇಮವಾಗಿದ್ದು, ಮಧ್ಯಾಹ್ನ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನವೀನ್ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)