ಬಾಲ್ಯದ ಆಟ ಬದುಕಿಗೆ ಪಾಠ

ಬಾಲ್ಯವೆಂದರೆ ಅದೊಂದು ಮರೆಯಲಾರದ ನುಡಿಚಿತ್ರ; ಕಾಲಚಕ್ರದಲ್ಲಿ ಇತಿಹಾಸವಾಗಿ ಉಳಿದು ನಾವೆಂದೂ ಮರಳಿ ಪಡೆಯಲಾಗದ ಅತಿಮುಖ್ಯ ಗಳಿಗೆಯಿದು; ನೋಡುವ, ಕೇಳುವ ಮತ್ತು ಕಲಿಯುವ ವಿಷಯಗಳನ್ನು ನೇರವಾಗಿ ಮನಸ್ಸಿಗೆ ತಂದುಕೊಂಡು ಅವುಗಳನ್ನು ನೆನಪಿನಾಳದಲ್ಲಿ ಇರಿಸಿಕೊಳ್ಳುವ ಕಾಲ. ಈ ನೆನಪಿನಾಳಕ್ಕೆ ಇಳಿದಾಗ ಮಾಡಿದ ತಪು್ಪ-ಒಪು್ಪಗಳು ಕಣ್ಣಮುಂದೆ ಸುಳಿದುಹೋಗುತ್ತವೆ. ಈ ಅನುಭವಗಳ ಬುತ್ತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ ‘ವಿಜಯವಾಣಿ’ ನೀಡಿದ ಕರೆಗೆ ಸಾವಿರಾರು ಓದುಗರು ಪ್ರತಿಕ್ರಿಯಿಸಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಬರಹಗಳು ಇಲ್ಲಿವೆ. ಇದೇ ರೀತಿ, ಬಾಲ್ಯದಲ್ಲಿಯೇ ಸಿಕ್ಕ ಉತ್ತಮ ಅವಕಾಶದಿಂದಾಗಿ ಚಿಕ್ಕ ವಯಸ್ಸಿನಿಂದಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಲಾವಿದರು ತಮ್ಮ ಬಾಲ್ಯವನ್ನು ಮೆಲುಕು ಹಾಕಿದ್ದಾರೆ.

ಆಟದಿಂದ ಏಕಾಗ್ರತೆ

8-9 ವರ್ಷ ವಯಸ್ಸಿನವಳಿದ್ದೆ. ಆಗ ಒಂದು ದಿನ ಅಂಕಲ್ ಮನೆಗೆ ಹೋಗಿದ್ವಿ. ಅಲ್ಲಿ ಟೇಬಲ್ ಟೆನ್ನಿಸ್ ಇತ್ತು. ಅದಾಗಲೇ ನನ್ನ ಅಣ್ಣ ಅದರ ಆಟ ಕಲಿತಿದ್ದ. ಆದರೆ ನಾನು ಅಷ್ಟೊಂದು ಕಲಿತಿರಲಿಲ್ಲ. ನನ್ನ ಅಣ್ಣನಿಗೆ ಆಗ 10ನೇ ಕ್ಲಾಸಿನ ಪರೀಕ್ಷೆ ನಡೆಯುತ್ತಿತ್ತು. ಅದಕ್ಕೆ ಅವನು ಆಟ ಆಡದೇ ಓದತೊಡಗಿದ. ನಾನು ಆಡಲು ಶುರು ಮಾಡಿದೆ. ಅಲ್ಲಿಂದಲೇ ನನಗೆ ಇದರಲ್ಲಿ ತುಂಬಾ ಆಸಕ್ತಿ ಹುಟ್ಟಲು ಶುರುವಾಯ್ತು. ಅಲ್ಲಿಂದ ಶುರುವಾದ ನನ್ನ ಆಟದ ಆಸಕ್ತಿ, ಅಂತಾರಾಷ್ಟ್ರೀಯ ಮಟ್ಟದವರೆಗೆ ತಂದು ನಿಲ್ಲಿಸಿದೆ. ಈಗ ನನಗೆ 18 ವರ್ಷ ವಯಸ್ಸು. ಈಗಾಗಲೇ ಅನೇಕ ಬಾರಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಬಾಲ್ಯದಲ್ಲಿಯೇ ನಮ್ಮೊಳಗೊಂದು ಆಸಕ್ತಿ ಇರುತ್ತದೆ. ಅದನ್ನು ನಾವು ಗುರುತಿಸಿದರೆ ಉತ್ತಮ ಭವಿಷ್ಯ ಸಾಧ್ಯ. ನಾನು ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಓದುತ್ತಿದ್ದೆ. ಆಗಲೇ ಆಟಕ್ಕೆಂದು ಹಲವು ಕಡೆ ಹೋಗಬೇಕಾಗಿತ್ತು. ನನ್ನ ಗುರುಗಳು ನನ್ನ ಅಭ್ಯಾಸಕ್ಕೆ ಯಾವುದೇ ತೊಂದರೆ ಬಾರದಂತೆ ಸಂಪೂರ್ಣ ನೆರವು ನೀಡಿದರು. ಆದ್ದರಿಂದಲೇ ಶಾಲೆಯಲ್ಲಿಯೂ ಉತ್ತಮ ಅಂಕ ಗಳಿಸಲು ನನಗೆ ಸಾಧ್ಯವಾಯಿತು. ಜೊತೆಗೆ, ಟೇಬಲ್ ಟೆನ್ನಿಸ್​ನಂಥ ಆಟ ಆಡುವುದರಿಂದ ಏಕಾಗ್ರತೆ ಹೆಚ್ಚು ಬರುತ್ತದೆ. ಇದು ನನ್ನ ಶಾಲೆಯ ಅಭ್ಯಾಸಕ್ಕೂ ನೆರವಾಯಿತು. ಒಮ್ಮೆ ಓದಿದರೆ ಸಾಕಾಗಿತ್ತು. ಆದ್ದರಿಂದ ಮಕ್ಕಳು ಹೆಚ್ಚೆಚ್ಚು ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.

| ಅರ್ಚನಾ ಕಾಮತ್ಅಂ, ತಾರಾಷ್ಟ್ರೀಯ ಮಟ್ಟದ ಟೇಬಲ್ ಟನ್ನಿಸ್ ಆಟಗಾರ್ತಿ

ಅವಕಾಶ ಬಳಸಿಕೊಳ್ಳಿ

‘ಚಿನ್ನಾರಿ ಮುತ್ತ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೇ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್. ಜೀವನದಲ್ಲಿ ಇಂಥ ಅವಕಾಶಗಳು ಕೆಲವೊಮ್ಮೆ ಮಾತ್ರ ಸಿಗುತ್ತವೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಬದಲಾಗುತ್ತದೆ ಎಂಬುದಕ್ಕೆ ಅದೊಂದು ಉದಾಹರಣೆ. ಆ ಚಿತ್ರದಲ್ಲಿನ ನನ್ನ ಪಾತ್ರವನ್ನು ಕೂಡ ಎಲ್ಲರೂ ಸ್ಪೂರ್ತಿಯಾಗಿ ಇಟ್ಟುಕೊಳ್ಳಬಹುದು. ‘ಚಿನ್ನಾರಿ ಮುತ್ತ’ದಲ್ಲಿ ನಟ ಅವಿನಾಶ್ ಒಂದು ಮಾತು ಹೇಳುತ್ತಾರೆ. ‘ಓಡಬೇಕೆಂದರೆ ಬರೀ ದೇಹ ಓಡುವುದಲ್ಲ. ಮನಸ್ಸು ಕೂಡ ಓಡಬೇಕು’ ಎಂಬ ಆ ಡೈಲಾಗ್ ನನಗೆ ಪ್ರತಿ ಹಂತದಲ್ಲೂ ನೆನಪಾಗುತ್ತದೆ. ಮಾಡುವ ಪ್ರತಿ ಕೆಲಸದಲ್ಲೂ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ನಾವು ಭಾಗಿಯಾಗಬೇಕು ಎಂಬುದು ಆ ಮಾತಿನ ಅರ್ಥ. ಜಿಮ್ಲ್ಲಿ ವರ್ಕೌಟ್ ಮಾಡುವುದರಿಂದ ಹಿಡಿದು, ಪ್ರತಿ ಕೆಲಸಕ್ಕೂ ಅದು ಅನ್ವಯ ಆಗುತ್ತದೆ. ಮಕ್ಕಳಾಗಲೀ, ಪಾಲಕರಾಗಲಿ ಅದನ್ನು ಅರ್ಥ ಮಾಡಿಕೊಳ್ಳಬೇಕು.

| ವಿಜಯ ರಾಘವೇಂದ್ರ ನಟ

ಕಲೆ ಫಾಸ್ಟ್ ಫುಡ್ ಆಗುವುದು ಬೇಡ

ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ನನ್ನ ಸಂಗೀತ ಕಲಿಕೆಗೆ ನಾಂದಿಹಾಡಿತು. ಮಾತು ಬರುತ್ತಲೇ ಸಂಗೀತ ಹೇಳುತ್ತಿದ್ದೆನಂತೆ. ನಾನು ತೊದಲು ನುಡಿ ಆಡಿಯೇ ಇಲ್ಲವಂತೆ. ಇದಕ್ಕೆ ಸಂಗೀತವೇ ಕಾರಣ ಇದ್ದರೂ ಇರಬಹುದು ಎನ್ನುತ್ತಾರೆ ನನ್ನಪ್ಪ. ನಾಲ್ಕನೆಯ ವಯಸ್ಸಿನಲ್ಲಿಯೇ ಕರ್ನಾಟಕಿ ಶಾಸ್ತ್ರೀಯ ಸಂಗೀತ ಅಧ್ಯಯನ ಶುರು ಮಾಡಿದೆ. ನಮ್ಮ ಅಪ್ಪ ಬ್ಯಾಂಕ್ ಉದ್ಯೋಗಿಯಾಗಿದ್ದರು. ನನಗೆ ಹಿಂದೂಸ್ತಾನಿ ಸಂಗೀತ ಕಲಿಸಬೇಕು ಎಂಬ ಉದ್ದೇಶದಿಂದಲೇ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರಿನಿಂದ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡರು. ಹೀಗೆ ನನ್ನ ಕಲಿಕೆ ಮುಂದುವರಿಯಿತು. ಈಗಿನ ಮಕ್ಕಳನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ‘ಫಾಸ್ಟ್ ಫುಡ್’ ಥರ ಮಕ್ಕಳು ದಿಢೀರ್ ಎಂದು ಹಾಡು ಕಲಿತು, ಟೀವಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಈಗಿನ ಅಪ್ಪ-ಅಮ್ಮಂದಿರದ್ದು. ಅದಕ್ಕೆ ಈಗಿನ ಮಕ್ಕಳು ಎಷ್ಟು ಬೇಗ ಫೇಮಸ್ ಆಗುತ್ತಾರೋ, ಅಷ್ಟೇ ಬೇಗ ಕಳಚಿಕೊಳ್ಳುತ್ತಾರೆ. ನಾನು ಹೇಳುವುದು ಇಷ್ಟೇ. ಮೊದಲು ಶಾಸ್ತ್ರೀಯ ಸಂಗೀತದ ಫೌಂಡೇಷನ್ ಮಕ್ಕಳಿಗೆ ಹಾಕಿ. ಈ ಅಡಿ ಪಾಯ ಗಟ್ಟಿಯಾಗಿದ್ದರಷ್ಟೇ ಯಾವುದೇ ಸಂಗೀತ ಹಾಡಲು ಮಕ್ಕಳು ಶಕ್ಯರಾಗುತ್ತಾರೆ. ಮಕ್ಕಳು ಕೂಡ ಇಂಥ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡರೆ ಅದು ಅವರ ಮನಸ್ಸನ್ನು ವಿಕಸಿತಗೊಳಿಸುವುದರಿಂದ, ಶಾಲೆಯ ಅಧ್ಯಯನಕ್ಕೂ ಸಹಕಾರಿಯಾಗುತ್ತದೆ.

| ಅರ್ಚನಾ ಉಡುಪ, ಹಿನ್ನೆಲೆ ಗಾಯಕಿ

3ನೇ ಕ್ಲಾಸಿನಲ್ಲೇ ಪುಸ್ತಕ ಬರೆದೆ

ನಾನು ಹುಟ್ಟಿದ್ದು ಸಾಗರ ತಾಲ್ಲೂಕಿನ ಆನಂದಪುರಂನಲ್ಲಿ. ಅಜ್ಜಿ ಮನೆಯಲ್ಲಿಯೇ ಇದ್ದೆ. ನನ್ನಜ್ಜಿ ಕೊಂಕಣಿ ಜನಪದ ಕಥೆ, ಹಾಡು ಎಲ್ಲಾ ಹೇಳುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸದಾ ಅದು ನನ್ನ ಕಿವಿಯ ಮೇಲೆ ಬೀಳುತ್ತಲೇ ಇತ್ತು. ಅದರ ಪ್ರಭಾವಳಿಯೇ ಇರಬೇಕು, ಇನ್ನೂ ಸರಿಯಾಗಿ ಮಾತು ಬರುವ ಮುನ್ನವೇ ಏನೇನೋ ಪದ್ಯಗಳನ್ನು ಹೇಳುತ್ತಿದ್ದೆನಂತೆ. ಅಜ್ಜಿ ಮನೆಯಿಂದ ಶಾಲೆಗೆಂದು ನನ್ನೂರು ತೀರ್ಥಹಳ್ಳಿಗೆ ಬಂದೆ. ಅಲ್ಲಿ ಅಜ್ಜಿಯ ಹಾಡು, ಕಥೆ ತುಂಬಾ ಮಿಸ್ ಮಾಡ್ಕೋಳೋಕೆ ಶುರು ಮಾಡಿದೆ. ನನ್ನ ಮನೆಯಲ್ಲಿ ತುಂಬಾ ಪುಸ್ತಕಗಳಿದ್ದವು. ಹಾಗೆಂದು ನನ್ನ ಇಡೀ ಕುಟುಂಬದಲ್ಲಿ ಯಾರೂ ಸಾಹಿತಿಗಳಲ್ಲ. ಅಜ್ಜಿ ಇಲ್ಲದ ಕಾರಣ, ಪುಸ್ತಕ ಓದೋಕೆ ಶುರು ಮಾಡಿದೆ. ಕುವೆಂಪು ಅವರ ಬರಹಗಳು ತುಂಬಾ ಆಸಕ್ತಿ ಹುಟ್ಟಿಸಿದವು. ಕುಪ್ಪಳಿ ನಮಗೆ ಹತ್ತಿರ ಇದ್ದುದರಿಂದ ಅಲ್ಲಿಯೇ ನಡೆಯುವ ಕಮ್ಮಟಗಳಿಗೆ ಹೋಗಿ ಬರುತ್ತಿದ್ದೆ.

ಇದರಿಂದ ಸಾಹಿತ್ಯದಲ್ಲಿ ತಂತಾನೇ ಆಸಕ್ತಿ ಬೆಳೆಯಿತು. 3ನೇ ಕ್ಲಾಸ್ ಇರುವಾಗಲೇ ‘ಹೂಗೊಂಚಲು’ ಎಂಬ ಕಥೆ-ಕವನ ಸಂಕಲನ ಹೊರತಂದೆ. ನಂತರ 4,5,6 ಹೀಗೆ ಒಂದೊಂದು ಕ್ಲಾಸ್​ನಲ್ಲೂ ಒಂದೊಂದು ಕಥೆ, ಕವನ ಸಂಕಲನ ಬಂತು. ಅದಾಗಲೇ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’, ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳನ್ನು ಓದಿದೆ.

ಹೀಗೆ ಶುರುವಾದ ನನ್ನ ಪಯಣ ಈ 20ನೇ ವಯಸ್ಸಿನಲ್ಲಿಯೂ ಮುಂದುವರಿದಿದೆ. ನನ್ನ ಒಂದು ಕಾದಂಬರಿ ಸಿನಿಮಾ ಕೂಡ ಆಯಿತು. ನನಗೆ ಸಿಕ್ಕ ಬಾಲ್ಯ ಈಗಿನ ಮಹಾನಗರಗಳ ಮಕ್ಕಳಿಗೆ ಸಿಗುತ್ತಿಲ್ಲ ಎನ್ನುವುದು ದುರದೃಷ್ಟಕರ. ಓದುವ ಹವ್ಯಾಸ ಮಕ್ಕಳಲ್ಲಿ ಹೈಫೈ ತಂತ್ರಜ್ಞಾನದಿಂದಾಗಿ ಕ್ಷೀಣಿಸುತ್ತಾ ಇದೆ. ಎಲ್ಲಾ ಮಕ್ಕಳಲ್ಲಿಯೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸದೇ ವ್ಯರ್ಥವಾಗುತ್ತಿದೆ. ಮಕ್ಕಳು ಸಾಹಿತ್ಯಾಸಕ್ತಿ ಬೆಳೆಸಿಕೊಂಡರೆ ಅವರ ಭವಿಷ್ಯ ನಿಜಕ್ಕೂ ಉಜ್ವಲವಾಗುತ್ತದೆ. ಏಕಾಗ್ರತೆ ಇದರಿಂದ ಸಾಧ್ಯ. ಸಾಹಿತ್ಯಾಸಕ್ತಿ ಮಕ್ಕಳ ಶಾಲೆ ಅಧ್ಯಯನಕ್ಕೂ ತುಂಬಾ ಸಹಾಯಕ.

| ವಿತಾಶಾ ರಿಯಾ (ಮುದ್ದು ತೀರ್ಥಹಳ್ಳಿ) ಸಾಹಿತಿ

ಬುದ್ಧಿ ಕಲಿಸಿತ್ತು ಅಪ್ಪನ ಏಟು

ನನಗಾಗ ಆರೇಳು ವರ್ಷ. ಒಮ್ಮೆ ಅಪ್ಪ ಹಣ ಎಣಿಸುತ್ತಿದ್ದರು. ಸ್ನೇಹಿತರೊಬ್ಬರು ಕರೆದರೆಂದು ಹಣವನ್ನು ಅಲ್ಲಿಯೇ ಬಿಟ್ಟು ಹೋದರು. ನಾನು ಒಂದು ನೋಟನ್ನು ಮುಚ್ಚಿಟ್ಟು ಆಟವಾಡಲು ಹೋದೆ. ವಾಪಸ್ ಬಂದಾಗ ಅಪ್ಪ ನನ್ನನ್ನು ‘ಹಣವನ್ನು ತೆಗೆದುಕೊಂಡಿದ್ದಿಯಾ’ ಎಂದು ಪ್ರಶ್ನಿಸಿದರು. ನಾನು ತಡವರಿಸುತ್ತಾ ‘ಇಲ್ಲ’ ಎಂದೆ. ನಮ್ಮಪ್ಪ ‘ಗೊತ್ತಾಯ್ತು ನಿನ್ನ ಕಪಟ ಬುದ್ಧಿ’ ಎಂದವರೇ ಕೆನ್ನೆಗೆ ಬಾರಿಸಿದರು. ನಾನು ಅಳುತ್ತಾ ಅಜ್ಜಿಯ ಹತ್ತಿರ ಹೋದೆ. ಆಗ ಅಜ್ಜಿಯು ಹೊಡೆದುದ್ದಕ್ಕೆ ಅಪ್ಪನನ್ನು ಬೈದರು. ಆದರೆ ನಮ್ಮಪ್ಪ ‘ಹೀಗೆ ಏಟು ಕೊಡದಿದ್ದರೆ ಅವನಿಗೆ ಬುದ್ಧಿ ಬರುವುದಿಲ್ಲ’ ಎಂದು ಹೇಳಿ ಕಳ್ಳತನ ಎಷ್ಟು ಕೆಟ್ಟದ್ದು ಎಂದು ಪಾಠ ಮಾಡಿದರು. ನಮ್ಮಪ್ಪನ ಆ ಎರಡು ಏಟು ನನ್ನ ಜೀವನದ ಮೊದಲ ಪಾಠವಾಯ್ತು. ಯಾವುದೇ ಕಾರಣಕ್ಕೂ ಕಳ್ಳತನ ಮಾಡಬಾರದು ಎಂದು ತಿಳಿಯಿತು.

-ನಿಂಗಪ್ಪ ಎಸ್.ಡಂಬಳಿ, ಅಥಣಿ, ಬೆಳಗಾವಿ

ಹೆಸರು ಮಾಡಬೇಕೆಂದು ಕಲಿಯಬೇಡಿ

ನನ್ನ ಕುಟುಂಬದಲ್ಲಿ ಯಾರೂ ಸಂಗೀತಕಾರರಲ್ಲ. ಆದರೆ ನನ್ನ ತಂದೆ ಸಂಗೀತ ನಿರ್ದೇಶಕ ನೌಶಾದ್ ಅಲಿ ಅವರ ಬಹುದೊಡ್ಡ ಫ್ಯಾನ್ ಆಗಿದ್ದರು. ಅವರ ಹಾಡುಗಳನ್ನು ಪ್ರತಿದಿನವೂ ಹಾಕುತ್ತಿದ್ದರು. ಜೊತೆಗೆ, ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಎಲ್ಲಾ ಸಂಗೀತ ಕಾರ್ಯಕ್ರಮಗಳಿಗೂ ಕಡ್ಡಾಯವಾಗಿ ಕರೆದುಕೊಂಡು ಹೋಗುತ್ತಿದ್ದರು. ಅದರಿಂದ ಪ್ರಭಾವಿತಳಾಗಿಯೇ ಇರಬೇಕು, ಯಾವ ರಾಗಗಳನ್ನು ಬೇಕಾದರೂ ಸುಲಭದಲ್ಲಿ ಗುರುತಿಸುತ್ತಿದ್ದೆನಂತೆ. ನನ್ನ ತಂದೆ, ಕಾಲೇಜಿನ ಉಪನ್ಯಾಸಕರಾಗಿದ್ದರು. ಅವರ ಕಾಲೇಜಿಗೆ ನೌಶಾದ್ ಅತಿಥಿಯಾಗಿ ಬಂದಿದ್ದರು. ಅವರನ್ನು ನಮ್ಮ ಮನೆಗೆ ತಂದೆಯವರು ಕರೆತಂದಾಗ, ಅವರ ಎದುರು ಅವರದ್ದೇ ರಚನೆಯ ಹಾಡುಗಳನ್ನು ಹಾಡಿದೆ. ಆಗಿನ್ನೂ ನಾಲ್ಕು ವರ್ಷದಾಕೆ ನಾನು. ನನ್ನ ಹಾಡು ಕೇಳಿ ಅವರು ಎಷ್ಟು ಭಾವುಕರಾದರೆಂದರೆ, ನನ್ನ ತಂದೆಯ ಹತ್ತಿರ, ‘ಇವಳನ್ನು ಉತ್ತಮ ಗುರುವಿನ ಬಳಿ ಸಂಗೀತಕ್ಕೆ ಕಳುಹಿಸಿ, ಈಕೆ ಮುಂದೆ ದೇಶದ ದೊಡ್ಡ ಆಸ್ತಿಯಾಗಲಿದ್ದಾಳೆ’ ಎಂದರಂತೆ. ಅವರ ಅಣತಿಯಂತೆ ನನ್ನನ್ನು ಸಂಗೀತ ಅಭ್ಯಾಸಕ್ಕೆ ಕಳುಹಿಸಲಾಯಿತು. ಅನೇಕ ಗುರುಗಳ ಬಳಿ ಸಂಗೀತ ಕಲಿತೆ. ನಾಲ್ಕನೇ ವಯಸ್ಸಿಗೆ ಒಂದು ಸಂಗೀತ ಕಛೇರಿಯನ್ನೂ ಮಾಡಿದೆ. ಸಂಗೀತದಂಥ ಯಾವುದೇ ಕಲೆ ಇರಲಿ, ಡೆಡಿಕೇಷನ್ ಮುಖ್ಯ. ಫೇಮಸ್ ಆಗಬೇಕು, ಹೆಸರು ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಯಾವುದೇ ಕ್ಷೇತ್ರಕ್ಕೆ ಬಂದರೆ ಪ್ರಯೋಜನ ಇಲ್ಲ. ಪಾಲಕರು ಮಕ್ಕಳನ್ನು ಒತ್ತಾಯಪೂರ್ವಕವಾಗಿ ಕಳುಹಿಸುವುದು ಸರಿಯಲ್ಲ. ಯಾವುದೇ ಕಲೆ ಒತ್ತಾಯದಿಂದ ಬರುವುದಿಲ್ಲ. ಎಲ್ಲಾ ಮಕ್ಕಳಿಗೆ ನಾನು ಹೇಳುವುದು ಇಷ್ಟೇ. ಚಿಕ್ಕವಯಸ್ಸಿನಿಂದಲೇ ಶಾಲೆಯ ಅಭ್ಯಾಸದ ಜೊತೆಜೊತೆಗೆ ವಿವಿಧ ಕಲೆಗಳಲ್ಲಿ ಆಸಕ್ತಿ ವಹಿಸಿದರೆ ಅವರ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ.

| ಸಂಗೀತಾ ಕಟ್ಟಿ ಕುಲಕರ್ಣಿ ಹಿನ್ನೆಲೆ ಗಾಯಕಿ

ಸಮಯ ವ್ಯರ್ಥ ಮಾಡಿಕೊಂಡೆ

ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯ ವೇಳೆ ವಿಪರೀತ ಅನಾರೋಗ್ಯವಾಗಿ ಪರೀಕ್ಷೆ ಬರೆಯಲು ಆಗಲಿಲ್ಲ. ಪದವಿ ಪರೀಕ್ಷೆಯ ವೇಳೆಯೂ ಇದೇ ರೀತಿ ಆಯಿತು. ಎರಡು ವರ್ಷಗಳನ್ನು ನಾನು ಅನಾರೋಗ್ಯದಿಂದ ಕಳೆದುಕೊಂಡೆ ನಿಜ. ಆದರೆ ಇನ್ನೊಂದು ದಿಕ್ಕಿನಿಂದ ನಾನು ಯೋಚನೆ ಮಾಡಲೇ ಇಲ್ಲ. ಮರು ಪರೀಕ್ಷೆ ಬರೆಯಲು ಇನ್ನೂ ಅನೇಕ ತಿಂಗಳು ಇದ್ದವು. ಆದರೆ ಆ ಅವಧಿಯನ್ನು ನಾನು ಒಳ್ಳೆಯದ್ದಕ್ಕೆ ಬಳಸಿಕೊಳ್ಳಲೇ ಇಲ್ಲ. ನನ್ನ ಭವಿಷ್ಯಕ್ಕೆ ಅನುಕೂಲ ಆಗುವಂಥ ಹಲವಾರು ಕೋರ್ಸ್​ಗಳನ್ನು ಸೇರಿಕೊಳ್ಳಬಹುದಿತ್ತು. ಅದರ ಬಗ್ಗೆ ನಂತರದ ವರ್ಷಗಳಲ್ಲಿ ಯೋಚಿಸಿ ದುಃಖ ಪಡುತ್ತಿದ್ದೇನೆ. ಆದರೆ ಕಳೆದು ಹೋದ ಅಮೂಲ್ಯ ಕ್ಷಣಗಳು ಮತ್ತೆ ಬರುವುದಿಲ್ಲವಲ್ಲ. ಆದ್ದರಿಂದ ಯಾವುದಾದರೂ ಕಾರಣಕ್ಕೆ ಫೇಲ್ ಆದರೆ ದಯವಿಟ್ಟು ಸಮಯ ವ್ಯರ್ಥ ಮಾಡದೇ ವಿವಿಧ ಕೋರ್ಸ್​ಗಳಿಗೆ ಸೇರಿಕೊಳ್ಳಿ. ಕೆಲವೊಮ್ಮೆ ಕಾಲೇಜಿನ ಅಧ್ಯಯನಕ್ಕಿಂತ ಆ ಕೋರ್ಸ್​ಗಳೇ ಭವಿಷ್ಯಕ್ಕೆ ದಾರಿ ಆಗುತ್ತವೆ.

| ಶ್ರೀರಂಗ ಪುರಾಣಿಕ ವಿಜಯಪುರ

25 ಸಾವಿರ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ

ನನಗೀಗ 27ವರ್ಷ. ಈ ವಯಸ್ಸಿನಲ್ಲಿಯೇ ಸಂಗೀತಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾದದ್ದು ನನ್ನ ಅಪ್ಪ ಖ್ಯಾತ ಸಂಗೀತಗಾರ ಸುಬ್ರಮಣ್ಯಂ ಅವರಿಂದಾಗಿ. ನಾನು ಆರು ವರ್ಷದ ಹುಡುಗನಿದ್ದಾಗ ವಯೋಲಿನ್​ನಲ್ಲಿ ಮೊದಲ ಸಂಗೀತ ಕಛೇರಿ ಕೊಟ್ಟಿದ್ದೆ. ಬಾಲ್ಯದಲ್ಲಿ ಹೆದರಿಕೆ ಎನ್ನುವುದೇ ಇರುವುದಿಲ್ಲ. ಅದಕ್ಕಾಗಿ ಕಛೇರಿ ಕೊಡುವಾಗಲೂ ತಪ್ಪಾಯಿತೋ, ಯಾರು ಏನು ಹೇಳುತ್ತಾರೋ ಎನ್ನುವ ಭಯ ಕಾಡುವುದಿಲ್ಲ. ಅದೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಶಾಲಾ ದಿನಗಳಲ್ಲೇ ‘ಸಾ-ಪಾ’ ಎನ್ನುವ ಸಂಗೀತ ತರಗತಿ ಆರಂಭಿಸಿ, ದೇಶದಾದ್ಯಂತ ಸುಮಾರು 25ಸಾವಿರ ಮಕ್ಕಳಿಗೆ ಶಾಲೆಗಳಲ್ಲಿ ಸಂಗೀತಾಭ್ಯಾಸ ಮಾಡಿಸುತ್ತಿದ್ದೇನೆ. ಇಲ್ಲಿ ಶಾಸ್ತ್ರೀಯ, ಪಾಶ್ಚಿಮಾತ್ಯ ಎಲ್ಲ ರೀತಿಯ ಸಂಗೀತಗಳನ್ನೂ ವಿವಿಧ ಶಿಕ್ಷಕರು ಕಲಿಸುತ್ತಿದ್ದಾರೆ. ಸಂಗೀತದಿಂದ ನನ್ನ ಶಾಲೆಯ ಕಲಿಕೆಯಲ್ಲಿಯೂ ತುಂಬಾ ಸಹಾಯವಾಗಿದೆ. ಬೇರೆ ಬೇರೆ ಕಡೆ ಕಛೇರಿ ಕೊಡಲು ಹೋಗಬೇಕಿರುವ ಕಾರಣ, ಸಮಾಜದ ಜೊತೆ ಬೆರೆಯಲು, ಸಾಮಾನ್ಯರು ಸೇರಿದಂತೆ ಗಣ್ಯಾತಿಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲು ಇದು ಅನುಕೂಲ ಮಾಡಿಕೊಟ್ಟಿದೆ.

| ಅಂಬಿ ಸುಬ್ರಹ್ಮಣ್ಯಂ ವಯೋಲಿನ್ ವಾದಕ

ಶಿಕ್ಷಕನನ್ನಾಗಿ ರೂಪಿಸಿದ ಆ ಮಾತುಗಳು

ನಮ್ಮ ತಂದೆಯವರು ಪ್ರಾಥಮಿಕ ಶಾಲಾ ಶಿಕ್ಷಕರು. ವಾರಾನ್ನದ ಮೂಲಕ ಕೆಲವು ವಿದ್ಯಾರ್ಥಿಗಳನ್ನು ಮನೆಯಲ್ಲಿಟ್ಟುಕೊಂಡು ಉಚಿತವಾಗಿ ಬಟ್ಟೆ ಊಟ ವಸತಿ ಕೊಡುತ್ತಾ ಓದಿಸುತ್ತಿದ್ದರು. ಅವರಿಗೆ ಮನೆಯಲ್ಲಿ ಪಾಠ ಮಾಡುವಾಗ ನನಗೂ ಪಾಠ ಹೇಳಿ ಕೊಡುತ್ತಿದ್ದರು.ಅವರ ನೀತಿಯುತ ಮಾತುಗಳು, ಬದುಕನ್ನು ರೂಪಿಸಿಕೊಳ್ಳುವ ಬಗೆ, ಗುರಿ, ಕನಸುಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಅವರು ಹೇಳುತ್ತಿದ್ದ ಮಾತುಗಳು ನನಗೆ ತಲೆಗೆ ಹತ್ತುತ್ತಿರಲಿಲ್ಲ. ನನ್ನ ಸ್ನೇಹಿತರೂ ನನ್ನಂಥವರೆ. ಅದಕ್ಕಾಗಿ ನನ್ನ ಚಿತ್ತವೆಲ್ಲ ಬರೀ ಆಟದ ಕಡೆಗೆ. ಹೈಸ್ಕೂಲ್​ನಲ್ಲಿ ಕ್ಲಾಸ್​ಗಳಿಗೆ ಚಕ್ಕರ್ ಹಾಕಿ ಊರೂರು ಸುತ್ತುತ್ತಿದ್ದೆ. ಇದನ್ನು ಗಮನಿಸುತ್ತಿದ್ದ ನಮ್ಮ ತಂದೆಯವರ ಸ್ನೇಹಿತರೊಬ್ಬರು ಅವರ ಗಮನಕ್ಕೆ ತಂದರು. ಕೆಂಡಾಮಂಡಲರಾದ ನನ್ನ ತಂದೆ ಹೊಡೆಯಲು ಆರಂಭಿಸಿದರು. ಮೈ ತುಂಬಾ ಬರೆಗಳೇ ಮೂಡಿದ್ದವು.

‘ನಾನು ಹಗಲು ರಾತ್ರಿ ಓದಿ ಶಿಕ್ಷಕನಾಗಿ ಈ ಸಂಸಾರ ರಥವನ್ನು ಎಳೆಯುತ್ತಿದ್ದೇನೆ. ನೀನು ಚೆನ್ನಾಗಿ ಓದಿ ನಮ್ಮನ್ನೆಲ್ಲಾ ಸಾಕತಿಯಾ ಅಂದರೆ ನೀನು ಹೀಗೆ ಮಾಡ್ತಾ ಇದ್ದೀಯಾ? ನನ್ನ ವಿದ್ಯಾರ್ಥಿಗಳಿಗೆ ಕೆಲವರಿಗೆ ಅನ್ನ ಇಲ್ಲಾ, ತಂದೆ ತಾಯಿ ಇಲ್ಲಾ, ಕೆಲವರಿಗೆ ಬಟ್ಟೆ ಇಲ್ಲಾ. ನಿನಗೆ ಎಲ್ಲವೂ ಇದೆ. ಆದರೆ ನೀನು ಏನು ಮಾಡುತ್ತಿದ್ದೀಯಾ?’ಎಂದು ದಬಾಯಿಸಿದರು. ಅಮ್ಮನೂ ಅವರ ಮಾತಿಗೆ ಧ್ವನಿಗೂಡಿಸಿದರು. ಇಡೀ ದಿನ ನನ್ನ ಜೊತೆ ಮಾತನಾಡಲಿಲ್ಲ. ಅವರು ಆಡಿದ ಮಾತುಗಳನ್ನೇ ಮೆಲುಕು ಹಾಕಿದೆ. ಅಪ್ಪಾಜಿಯಂತೆ ಶಿಕ್ಷಕನಾಗಬೇಕೆಂದುಕೊಂಡದ್ದು ಆಗಲೇ. ಕೆಟ್ಟವರ ಸಹವಾಸ ಬಿಟ್ಟೆ. ಓದಿನತ್ತ ಹೆಚ್ಚು ಆಸಕ್ತಿ ವಹಿಸುತ್ತಾ ಬಂದೆ. ಎಂ.ಎಡ್ ಪದವಿಯಲ್ಲಿಯೂ ಉತ್ತಮ ಅಂಕ ಗಳಿಸಿದೆ. ನನ್ನ ಅರ್ಹತೆ ಮೇಲೆ ಶಿಕ್ಷಕರ ಹುದ್ದೆಯೂ ಸಿಕ್ಕಿತು. ಇಂದು ಸಭೆ ಸಮಾರಂಭಗಳಿಗೆ ನಾನು ಅತಿಥಿ ಉಪನ್ಯಾಸಕನಾಗಿ ಹೋಗುವುದನ್ನು ಕಂಡಾಗ ನಮ್ಮ ತಂದೆಗೆ ಸ್ವರ್ಗಕ್ಕೆ ಮೂರೇಗೇಣು.

| ಬಸವರಾಜ ಗಂ. ಪುರಾಣಿಕಮಠ ಬೈಲಹೊಂಗಲ

ಅಮ್ಮನಿಂದ ಕಲಿತ ದುಡ್ಡಿನ ಪಾಠ

ಆಗ ನನಗೆ ವಯಸ್ಸು ಹತ್ತಿರಬಹುದು. ಶಾಲೆಯ ಬಳಿ ಪೇರುಕಾಯಿ, ಶೇಂಗಾ, ಬಟಾಣಿ, ಬಾರಿಕಾಯಿ ಇತ್ಯಾದಿ ಮಾರುವ ಮುದುಕಿ ಇದ್ದಳು. ನನ್ನ ಶ್ರೀಮಂತ ಗೆಳತಿಯರು ದುಡ್ಡು ತಂದು ತಮಗೇನು ಬೇಕೋ ಅದನ್ನು ತಿನ್ನುತ್ತಿದ್ದರು. ನಮ್ಮ ಮನೆಯಲ್ಲಿ ಪಾಕೆಟ್ ಮನಿ ಕೊಡುತ್ತಿರಲಿಲ್ಲ. ದುಡ್ಡು ಬೇಕೆಂದಾಗ ಯಾವುದಕ್ಕೆ ಬೇಕು ಎಂದು ಹೇಳಿದರೆ ಮಾತ್ರ ನನ್ನಮ್ಮ ದುಡ್ಡು ಕೊಡುತ್ತಿದ್ದಳು. ಏನೇ ಖರೀದಿಸಿದರೂ ಅವಶ್ಯಕತೆಯ ಮಾನದಂಡ ವಿಧಿಸುತ್ತಿದ್ದಳು. ಅದೊಂದು ದಿನ ಗೆಳತಿಯ ಬಳಿ ಐವತ್ತು ಪೈಸೆ ಸಾಲ ಕೇಳಿ ಅದರಿಂದ ಪೇರುಕಾಯಿ, ಶೇಂಗಾ ಖರೀದಿಸಿ ತಿಂದಿದ್ದೆ. ಮನೆಗೆ ಹೋದ ಮೇಲೆ ಅಮ್ಮನಿಗೆ ನಿಜ ವಿಷಯ ತಿಳಿಸಿ ಐವತ್ತು ಪೈಸೆ ಕೊಡು ಅಂದೆ. ಆಗ ಅಮ್ಮ ‘ನಿನ್ನ ಬಳಿ ದುಡ್ಡಿಲ್ಲದ ಮೇಲೆ ಯಾಕೆ ತಿನ್ನಬೇಕಿತ್ತು. ಸಾಲ ಮಾಡೋದು ಬಹಳ ಸುಲಭ. ಅದನ್ನು ತೀರಿಸೋದು ಬಹಳ ಕಷ್ಟ. ದುಡ್ಡು ಸಂಪಾದನೆ ಮಾಡೋರಿಗೆ ತಾನೇ ಅದರ ಕಷ್ಟ ತಿಳಿಯೋದು? ಐವತ್ತು ಪೈಸೆ ಇದ್ದರೆ ಸ್ವಲ್ಪ ತರಕಾರಿ ಕೊಳ್ಳಬಹುದು’ ಎಂದಳು. ಆಗ ನನ್ನ ತಪ್ಪಿನ ಅರಿವಾಗಿ ಗಳಗಳನೆ ಅತ್ತೆ. ‘ಇನ್ಯಾವತ್ತೂ ಈ ರೀತಿ ಮಾಡೋದಿಲ್ಲ. ತಪ್ಪಾಯ್ತು’ ಎಂದೆ. ಆಗ ಅಮ್ಮ ನನ್ನ ಕಣ್ಣೊರೆಸಿ ಒಂದು ಮಾತು ಕೂಡ ಆಡದೇ ‘ತೊಗೋ ಐವತ್ತು ಪೈಸೆ’ ಅಂತ ಕೊಟ್ಟಳು. ಅಮ್ಮ ಮೌನವಾಗಿದ್ದರೂ ನಾನು ಜೀವನದಲ್ಲಿ ಕಲಿತ ಪಾಠ ಎಂದರೆ ‘ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು’ ಎಂಬುದು.

| ಛಾಯಾ ಪಿ. ಮಠ್ ಕಲಬುರಗಿ

ನಾಯಕತ್ವದ ಗುಣ ಬೆಳೆಸಿಕೊಂಡೆ

ನಾನು ಸುಮಾರು 8, 9ನೇ ವಯಸ್ಸಿನವನಿದ್ದೆ. ಸ್ವಲ್ಪ ಜಾಣನೇ ಆಗಿದ್ದರಿಂದ ನನ್ನನ್ನೇ ಲೀಡರ್ ಮಾಡುತ್ತಿದ್ದರು. ಶಿಕ್ಷಕರು ಇಲ್ಲದಾಗ ಕ್ಲಾಸಿನ ಮೇಲ್ವಿಚಾರಣೆ ನಾನೇ ನೋಡಿಕೊಳ್ಳಬೇಕಾಗಿ ಬರುತ್ತಿದ್ದುದರಿಂದ ನನಗೆ ಒಂಥರಾ ಇರಿಸುಮುರಿಸು. ಏಕೆಂದರೆ, ನನ್ನ ಸ್ನೇಹಿತರು ಮಾತನಾಡಿದರೂ ಅವರ ಹೆಸರು ಬರೆಯಬೇಕಿತ್ತು. ಶಿಕ್ಷಕರು ಅವರಿಗೆ ಭಯಂಕರ ಏಟು ನೀಡುತ್ತಿದ್ದರು. ಸ್ನೇಹಿತರದ್ದಷ್ಟೇ ಬಿಟ್ಟು ಬೇರೆಯವರ ಹೆಸರು ಬರೆದರೆ ನಾನು ಮೋಸ ಮಾಡುತ್ತಿದ್ದೇನೆ ಎನಿಸಿ, ಎಲ್ಲರ ಹೆಸರು ಬರೆದು ಟೀಚರ್​ಗೆ ಕೊಡುತ್ತಿದ್ದೆ. ಇದರಿಂದ ನನ್ನ ಕೆಲ ಸ್ನೇಹಿತರು ನನ್ನ ಮೇಲೆ ಕಿಡಿ ಕಾರಿದರೂ, ಯಾರಿಗೂ ಮೋಸ ಮಾಡುತ್ತಿಲ್ಲ ಎಂಬ ಸಮಾಧಾನ ನನಗೆ. ಶಿಕ್ಷಕರಿಗೂ ನನ್ನ ಮೇಲೆ ಅಭಿಮಾನ. ಇದೇ ಮುಂದೆ ನನಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಾಯವಾಯಿತು. ನಾನು ಓದಿನಲ್ಲಿ ಹಿಂದೆ ಇದ್ದವರಿಗೆಲ್ಲಾ ಹೇಳಿಕೊಡಬೇಕಿತ್ತು. ಆಗ ಇದೆಲ್ಲಾ ಸ್ವಲ್ಪ ಕಿರಿಕಿರಿ ಎನಿಸಿದರೂ ಪಾಠ ಪುನರಾವರ್ತನೆಯಾಗಿ ಇನ್ನಷ್ಟು ಅಂಕ ಗಳಿಸಲು ಸಹಾಯವಾಯಿತು. ನಮ್ಮ ಟೀಚರ್, ಚೆನ್ನಾಗಿ ಅಭ್ಯಾಸ ಮಾಡುವವರಿಗೆ ಸ್ವಲ್ಪ ಪ್ರೋತ್ಸಾಹಧನವನ್ನೂ ನೀಡುತ್ತಿದ್ದರು, ಜೊತೆಗೆ ಉಳಿತಾಯದ ಪಾಠ ಮಾಡುತ್ತಿದ್ದರು. ಇದರಿಂದ ನನಗೆ ಉಳಿತಾಯ ಮಾಡುವ ರೂಢಿಯೂ ಹೆಚ್ಚಿತು.

| ಪ್ರೊ ಚಂದ್ರಶೇಖರ ಅ. ಹಿರೇಮಠ ನಿಪ್ಪಾಣಿ, ಬೆಳಗಾವಿ

ರಿಜಿಸ್ಟರ್ ಪೋಸ್ಟ್ ಮಾಡಿದ್ದು ಹೇಗೆ ಮರೆಯಲಿ?

ನಾನಾಗ ಹತ್ತರ ಪೋರ. ಅದೇ ತಾನೇ ಸೈಕಲ್ ಓಡಿಸಲು ಕಲಿತು ಏನೋ ಸಾಧಿಸಿದವನಂತಿದ್ದೆ. ಸಹಪಾಠಿ ರಾಮು ಊರಿಗೆ ಹೊರಟಾಗ ತನ್ನ ಸೈಕಲ್ ನನಗೆ ಕೊಟ್ಟಿದ್ದ. ಒಂದು ದಿನ ತಂದೆಯವರು ಎಲ್ಲೋ ಹೋಗಬೇಕಾಗಿದ್ದರಿಂದ ರಿಜಿಸ್ಟರ್ ಪೋಸ್ಟ್ ಮಾಡಿ ಬಾ ಎಂದರು. ನನಗೆ ಪೋಸ್ಟ್ ಆಫೀಸ್ ವ್ಯವಹಾರ ಏನು ಎಂದೇ ಗೊತ್ತಿರಲಿಲ್ಲ. ಆದರೆ ಪೋಸ್ಟ್ ಆಫೀಸ್​ಗೆ ಸೈಕಲ್ ಮೇಲೆ ಹೋಗೋ ಉಮೇದಿ. ಅಪ್ಪ ಹೇಳಿದಾಗ ಎಲ್ಲಾ ಗೊತ್ತು ಅನ್ನೋ ಹಾಗೆ ತಲೆೆಯಾಡಿಸಿದೆ. ಹುಮ್ಮಸ್ಸಿನಿಂದ ಮನೆ ಬಿಟ್ಟೆ. ಮುಖ್ಯರಸ್ತೆಗೆ ತಲುಪುವಷ್ಟರಲ್ಲಿ ಹಿಂದಿನ ಚಕ್ರ ಠುಸ್… ಹಾಗೂ ಹೀಗೂ ಸೈಕಲ್ ತಳ್ಳಿಕೊಂಡು ಹೊರಟೆ.ಅಲ್ಲೇ ವಿದ್ಯುತ್ ಕಂಬಕ್ಕೆ ಕಟ್ಟಿದ ಅಂಚೆ ಪೆಟ್ಟಿಗೆ ಕಂಡೆ. ಅದರಲ್ಲೇ ಕವರ್ ಹಾಕಿ ಬಂದೆ. ಮಧ್ಯಾಹ್ನ ಮನೆಗೆ ಬಂದ ತಂದೆಯವರು ‘ರಿಜಿಸ್ಟರ್ ಪೋಸ್ಟ್​ನ ರಸೀದಿ ಕೊಡು’ ಎಂದಾಗ ಹೌಹಾರಿ ಎಲ್ಲಾ ವಿಷಯ ತಿಳಿಸಿದೆ. ಅಪ್ಪ ನನ್ನ ಕರೆದುಕೊಂಡು ಆ ಅಂಚೆ ಡಬ್ಬಿ ಇರುವೆಡೆ ಹೋದರು. ಟಪಾಲು ತೆಗೆದುಕೊಂಡು ಹೋಗುವ ಸಿಬ್ಬಂದಿ ಬರುವವರೆೆಗೆ ಕಾಯ್ದು ನಾನು ಮಾಡಿದ್ದ ‘ಘನಂದಾರಿ’ ಕಾರ್ಯ ಅವನಿಗೆ ಹೇಳಿ, ಕವರ್ ಪಡೆದರು. ಅಪ್ಪ-ಅಮ್ಮನ ಮಾತು ಕೇಳದಿದ್ದರೆ ಎಂಥ ಫಜೀತಿ ಪಡಬೇಕಾಗುತ್ತದೆ ಎಂದು ಅಂದು ನಾನು ಅರಿತೆ.

| ಅರವಿಂದ. ಜಿ.ಜೋಷಿ ಮೈಸೂರು

10ರ ನೋಟು ಕಲಿಸಿತು ಪಾಠ

ನಾನು ಎರಡನೇ ಕ್ಲಾಸಿನಲ್ಲಿದ್ದೆ. ಸಹಪಾಠಿಗಳ ಬಳಿ ಇದ್ದ ಬಣ್ಣದ ಲೇಖನಿ ನೋಡಿ ಅದನ್ನು ಕೊಳ್ಳುವ ಮನಸ್ಸಾಯಿತು, ಮನೆಯಲ್ಲಿ ಹೇಳಿದರೆ ಅದನ್ನು ಕೊಡಿಸುವುದಿಲ್ಲೆಂದು ಮನೆಯಿಂದ ಹತ್ತು ರೂಪಾಯಿ ಕದ್ದು ಒಂದು ಅಂಗಡಿಯಲ್ಲಿ ಆ ಲೇಖನಿ ತೆಗೆದುಕೊಳ್ಳುವಷ್ಟರಲ್ಲಿಯೇ ಊರಿನ ಹಿರಿಯರೊಬ್ಬರು ನೋಡಿಬಿಟ್ಟರು. ಅವರು ನನ್ನ ಅಪ್ಪನಿಗೆ ವಿಷಯ ತಿಳಿಸಿದರೆ ಬಾಸುಂಡೆ ಬರುವಷ್ಟು ಏಟು ಕಟ್ಟಿಟ್ಟಿದ್ದೇ ಎಂದುಕೊಂಡು ಹೆದರಿ ಆ ನೋಟನ್ನು ಯಾರಿಗೂ ತಿಳಿಯದ ಹಾಗೆ ಹರಿದು ಒಂದು ಪೊದೆಯ ಹೊಳಗೆ ಹಾಕಿ ಮನೆಗೆ ಬಂದೆ. ಆದರೆ ಅಪ್ಪನಿಗೆ ಹಣ ಕದ್ದಿದ್ದು ತಿಳಿದೇ ಹೋಗಿತ್ತು. ಉದ್ದದ ಕೋಲು ನನ್ನನ್ನು ಕಾಯುತ್ತಿತ್ತು! ಮನೆಗೆ ಬಂದದ್ದೇ ತಡ ರಪ ರಪ ಏಟು ಬಿತ್ತು. ನಂತರ ಹರಿದ ಚೂರುಗಳನ್ನು ಆರಿಸಿ ತಂದು ಅದಕ್ಕೆ ಟೇಪನ್ನು ಹಾಕಿ ಹಾಗೂ ಹೇಗೋ ಚಲಾಯಿಸಿದರೂ ಕೂಡ.

ನಾನು ಪಟ್ಟ ನೋವಿಗೆ ಮನ ನೊಂದಿದ್ದ ಅಪ್ಪ, ರಾತ್ರಿ ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡು ಆ ಹತ್ತು ರೂಪಾಯಿ ಗಳಿಸಲು ಅವರು ಪಡುವ ಶ್ರಮದ ಬಗ್ಗೆ ನನಗೆ ವಿವರವಾಗಿ ಹೇಳಿದರು. ನಮ್ಮ ಪೋಷಕರು ತಮ್ಮ ನೋವನ್ನೆಲ್ಲಾ ಮರೆತು ಮಕ್ಕಳು ಚೆನ್ನಾಗಿ ಇರಲಿ ಎಂದು ಎಷ್ಟೆಲ್ಲಾ ಕಷ್ಟಪಟ್ಟು ಹಣ ಸಂಪಾದನೆ ಮಾಡುತ್ತಾರೆ , ಅವರ ಶ್ರಮ ಎಷ್ಟು ಎಂಬುದು ಆಗ ನನಗೆ ಅರ್ಥವಾಗಿ ತುಂಬಾ ನೊಂದುಕೊಂಡೆ. ಅಂದೇ ಕೊನೆ. ಹಣವನ್ನು ಎಂದಿಗೂ ನಾನು ವೇಸ್ಟ್ ಮಾಡಲಿಲ್ಲ.

| ಮೋಹನ ಬಾಬು

ಕುತ್ತು ತಂತು ಕೋತಿಯಾಟ

8 ವರ್ಷದವಳಿರುವಾಗ ಮನೆಪಾಠಕ್ಕೆ ಹಾಕಿದ್ದರು. ಒಮ್ಮೆಯೂ ಮನೆಪಾಠ ತಪ್ಪಿಸುತ್ತಿರಲಿಲ್ಲ. ಅದೊಂದು ದಿನ ನನ್ನ ಸ್ನೇಹಿತೆಯರು ಎಷ್ಟು ಬೇಡವೆಂದರೂ ಕೇಳದೇ, ಕೋತಿಯಾಟ ನೋಡಲು ಕರೆದುಕೊಂಡು ಹೋದರು. ನಾನು ಗೈರಾಗಿದ್ದರಿಂದ ಟ್ಯೂಷನ್ ಮೇಸ್ಟ್ರು ಮನೆಗೆ ಬಂದು ವಿಚಾರಿಸಿದರು. ನನ್ನ ಅಪ್ಪ-ಅಮ್ಮನಿಗೆ ಗಾಬರಿಯಾಯಿತು. ಹುಡುಕಾಟ ನಡೆಸಿ ಪೊಲೀಸ್ ಠಾಣೆಗೆ ದೂರು ಕೊಡಲೂ ಮುಂದಾದರು. ಅಷ್ಟೊತ್ತಿಗೆ ನಾನು ಬಂದು ವಿಷಯ ತಿಳಿಸಿದೆ. ನನ್ನ ಅಪ್ಪನ ಕೋಪ ನೆತ್ತಿಗೇರಿತು. ಚೆನ್ನಾಗಿ ಬೈದರು. ಅವರ ಕೋಪ ಕಂಡ ನಮ್ಮ ಮೇಸ್ಟ್ರು, ನನ್ನನ್ನು ಆಚೆಗೆ ಕರೆದು ಬುದ್ಧಿಮಾತು ಹೇಳಿದರು. ‘ನೀನು ಇರುವುದು ಒಬ್ಬಳೇ ಮಗಳು. ತುಂಬಾ ಬುದ್ಧಿವಂತೆ. ಚೆನ್ನಾಗಿ ಓದಿ ಅಪ್ಪ-ಅಮ್ಮನನ್ನು ಮುಂದೆ ನೋಡಿಕೊಳ್ಳುವ ಜವಾಬ್ದಾರಿ ನಿನ್ನ ಮೇಲಿದೆ. ಎಲ್ಲಿಗೆ ಹೋಗುವುದಿದ್ದರೂ, ಏನೇ ಕೆಲಸ ಮಾಡುವುದಿದ್ದರೂ ಅವರನ್ನು ಕೇಳಿಯೇ ಮಾಡು’ ಎಂದು ಹೇಳಿದರು. ಅಂದಿನಿಂದ ನಾನು ಆ ತಪ್ಪನ್ನು ಮುಂದೆಂದೂ ಮಾಡಲಿಲ್ಲ.

| ಆರ್. ಮಹಾಲಕ್ಷ್ಮಿ

ಗುರುವಿನ ಗುಲಾಮನಾಗುವ ತನಕ…

ವಿಜಯಪುರದ ಗುರುಗಳು ನಮ್ಮ ಹಳ್ಳಿಯಲ್ಲೇ ವಾಸವಾಗಿದ್ದುಕೊಂಡು ಸೇವೆ ಸಲ್ಲಿಸುತ್ತಿದ್ದರು. ಆಗಿನ ದಿನಗಳಲ್ಲಿ ನಮ್ಮೂರಿನ ಜನ ಕುಡಿಯುವ ನೀರಿಗಾಗಿ ಒಂದು ಕಿ.ಮೀ.ದೂರದ ಬಾವಿಯಿಂದ ನೀರು ತರುತ್ತಿದ್ದರು. ನಾನು ದಿನವೂ ಬೆಳಗ್ಗೆ ಬೇಗನೆದ್ದು ಒಂದು ಕೊಡ ನೀರನ್ನು ತಂದು ಮಲಗಿದ್ದ ಗುರುಗಳನ್ನು ಎಬ್ಬಿಸಿ, ನೀರು ಹಾಕಿ ಮತ್ತೆ ನಮ್ಮ ಮನೆಗೆ ನೀರು ತಂದು ಶಾಲೆಗೆ ಹೋಗುತ್ತಿದ್ದೆ. ಹಬ್ಬದ ದಿನಗಳಲ್ಲಿ ಗುರುಗಳ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ ಬರುತ್ತಿದ್ದೆ. ಒಂದು ದಿನ ಶಾಲಾ ಸಮಿತಿಯ ಸಭೆಯಲ್ಲಿ ನನ್ನ ಈ ಸೇವೆಯ ಬಗ್ಗೆ ಶ್ಲಾಘಿಸಿದರು. ಅಂದು ನನಗಾದ ಖುಷಿ ಅಷ್ಟಿಷ್ಟಲ್ಲ. ಇದರಿಂದ ಇನ್ನಷ್ಟು ಸ್ಪೂರ್ತಿ ಪಡೆದು ಇತರರಿಗೆ ಸಹಾಯ ಮಾಡುವುದನ್ನು ಕಲಿತೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನುಡಿಯಂತೆ ಗುರುವಿನ ಸೇವೆಯಿಂದ ನಾನು ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕ ಆರೋಗ್ಯವನ್ನೂ ಪಡೆದೆ. ಇದೇ ನನಗೆ ಗುರುವಿನ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಕಲಿತದ್ದನ್ನೇ ನನ್ನ ವಿದ್ಯಾರ್ಥಿಗಳಿಗೂ ಬೋಧಿಸುತ್ತಿದ್ದೇನೆ.

| ಶಿವಾನಂದಪ್ಪ ಬಿ. ಹರಗುವಳ್ಳಿ ಶಿಕಾರಿಪುರ

ಫೇಲ್ ಆದ ಮೇಲೆ ಬುದ್ಧಿ ಬಂತು

ಐದನೇ ಕ್ಲಾಸಿನ ನಂತರ ಒಂದು ಕಿ.ಮೀ ದೂರ ಇರುವ ಪಕ್ಕದ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಿತ್ತು. ತುಂಬಾ ತುಂಟ. ಗುರುಗಳು ಹೇಳುವುದೆಲ್ಲಾ ಅರ್ಧಂಬರ್ಧ ಮೆದುಳಿಗೆ ತುಂಬಿಸಿಕೊಂಡು, ಇನ್ನರ್ಧ ನನಗೆ ಸಂಬಂಧವೇ ಇಲ್ಲ ಎಂಬಂತೆ ಗಾಳಿಗೆ ತೂರಿ ಬಿಡುತ್ತಿದ್ದೆ.

ಒಂದು ದಿನ ಯಾರು ಸುಂದರವಾಗಿ ಹಾಡು ಹಾಡುತ್ತಾರೋ ಅವರಿಗೆ ಒಂದು ಬಳಪವನ್ನು ನೀಡಲಾಗುವುದು ಎಂದು ಗುರುಗಳು ಹೇಳಿದರು. ನಾನು ಕನ್ನಡ ಸಿನಿಮಾದ ಒಂದು ಹಾಡು ಹಾಡಿದೆ. ಆಶ್ಚರ್ಯ ಎಂದರೆ ನನಗೇ ಬಹುಮಾನ ಬಂತು. ನನ್ನ ಗುರುಗಳು ನನ್ನನ್ನು ಶ್ಲಾಘಿಸಿ, ‘ಹಾಡನ್ನು ಮುಂದುವರೆಸು, ಕೀಪ್ ಇಟ್ ಅಪ್’ ಎಂದರು. ನನಗೆ ಅರಿವೇ ಇಲ್ಲದೆ ನನ್ನೊಳಗೆ ಹುದುಗಿದ್ದ ಸಂಗೀತ ಕಲೆಯನ್ನು ಹೊರ ಹಾಕಿತ್ತು ಗುರುಗಳ ಮಾತು.

ಸಂಗೀತ ಬಂದರೆ ಸಾಕೆ? ಶಾಲೆಗೆ ಹೋಗಬೇಕಲ್ಲ. ಇಂಗ್ಲಿಷ್ ತಲೆಗೆ ಹತ್ತುತ್ತಲೇ ಇರಲಿಲ್ಲ. ಕ್ಲಾಸಿಗೂ ಆಗೊಮ್ಮೆ ಈಗೊಮ್ಮೆ ಹೋಗುತ್ತಿದ್ದೆ. ಪರಿಣಾಮ, ಇಂಗ್ಲಿಷ್ ಪರೀಕ್ಷೆಯಲ್ಲಿ ಖಾಲಿ ಪೇಪರ್ ಕೊಟ್ಟುಬಂದೆ!

ಸರಿಯಾಗಿ ಶಾಲೆಗೆ ಬರುವುದಿಲ್ಲವೆಂದು ಶಿಕ್ಷಕರಿಂದ ಚೆನ್ನಾಗಿ ಪೆಟ್ಟು ತಿನ್ನುವ ಬದಲು, ಶಾಲೆಗೆ ಹೋಗದೇ ಅಮ್ಮನಿಂದಲೇ ಪೆಟ್ಟು ತಿನ್ನುವುದು ಒಳಿತೆಂದು ಮನೆಯಲ್ಲೇ ಉಳಿದುಬಿಟ್ಟೆ. ಆಮೇಲೆ ಶಾಲೆ ಎಂದರೆ ಅಲರ್ಜಿ ಶುರುವಾಗಿ ಅಜ್ಜಿಯ ಮನೆಯಲ್ಲಿ ಇರುವ ದನ ಕರುಗಳನ್ನು ಮೇಯಿಸಿಕೊಂಡು ಇರೋಣ ಎಂಬ ನಿರ್ಧಾರದಲ್ಲಿದ್ದು ಅಜ್ಜಿ ಮನೆ ಸೇರಿದೆ. ಅದೊಂದು ದಿನ ನನ್ನ ಅಕ್ಕ ಅಜ್ಜಿ ಮನೆಗೆ ಬಂದಳು. ನನ್ನನ್ನು ಅಪ್ಪನ ಬಳಿ ಕರೆತಂದಳು. ನನ್ನ ವ್ಯಥೆಯನ್ನು ಅಪ್ಪನ ಬಳಿ ತೋಡಿಕೊಂಡೆ. ಮರುದಿನ ಶಾಲೆಗೆ ಬಂದ ನನ್ನಪ್ಪ ಇಂಗ್ಲಿಷ್ ಸರ್ ಬಳಿ ವಿನಂತಿ ಮಾಡಿಕೊಂಡು, ‘ಅವನಿಗೆ ಬರದಿದ್ದರೆ ಪೆಟ್ಟು ನೀಡಬೇಡಿ, ಇನ್ನೊಮ್ಮೆ ತಿಳಿಸಿ ಹೇಳಿ’ ಎಂದರು, ಜೊತೆಗೆ ಮಹತ್ವದ ಪಾಠ ನನಗಾಯಿತು. ಆದರೆ ಅದಾಗಲೇ ಪರೀಕ್ಷೆ ಬಂದಿದ್ದರಿಂದ ಎಂಟನೇ ಕ್ಲಾಸ್​ನಲ್ಲಿ ಫೇಲ್ ಆದೆ. ನನ್ನೆಲ್ಲಾ ಸ್ನೇಹಿತರು ಮುಂದಿನ ಕ್ಲಾಸ್​ಗೆ ಹೋದಾಗಲೇ ಶಿಕ್ಷಣದ ಅರಿವು ನನಗಾದದ್ದು. ಆಮೇಲೆ ಸರಿಯಾಗಿ ಓದಿದೆ. ಸರ್ ಮೆಚ್ಚುಗೆಗೆ ಪಾತ್ರನಾದೆ. ಎಸ್ಸೆಸ್ಸೆಲ್ಸಿಯಿಂದ ಹಿಡಿದು ಎಂ.ಎ ಪತ್ರಿಕೋದ್ಯಮದವರೆಗೂ ಉತ್ತಮ ಅಂಕವನ್ನೇ ಪಡೆದೆ.

| ಡ್ಯಾನಿಯಲ್.ಜೆ ಹುಣಸನಹಳ್ಳಿ

ಜ್ಞಾನ ತುಂಬಿದ ಸ್ಕೇಲ್ ಏಟು!

ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನಮ್ಮ ಮೇಸ್ಟ್ರ ಮರದ ಸ್ಕೇಲ್ ಕಂಡರೆ ಭಯವಾಗುತ್ತಿತ್ತು. ಅದು ಅವರ ಕೈಗೆ ಬಂತೆಂದರೆ ಸಾಕು, ಯಾರಿಗಾದರೂ ‘ಕಜ್ಜಾಯ’ ಸಿಕ್ಕವೆಂದೇ ಅರ್ಥ. ಅಕ್ಷರ ತಪ್ಪು ಮಾಡುವಂತೆ ಇರಲಿಲ್ಲ. ಅಕ್ಷರಗಳು ಗೊತ್ತಿದ್ದರೂ ಎಲ್ಲಿ ಹೊಡೆಯುತ್ತಾರೋ ಎನ್ನುವ ಭಯ. ಆನಂತರ, ನನಗೆ ಅರಿವಾದದ್ದು ಇಂಥ ಏಟು ಬಿದ್ದರೇನೇ ಶಿಕ್ಷೆಯ ಭಯದಿಂದಾದರೂ ಸರಿಯಾಗಿ ಬರೆಯುವುದನ್ನು ವಿದ್ಯಾರ್ಥಿಗಳು ಕಲಿಯುತ್ತಾರೆಂದು. ಇದರಿಂದಲೇ ನಾನು ಕೂಡ ಚೆನ್ನಾಗಿ ಬರೆಯುವುದನ್ನು ಕಲಿತುಕೊಂಡೆ. ನಮ್ಮನ್ನು ರಜಾದಿನಗಳಲ್ಲಿ ಗಣತಿಗಾಗಿ ಶಿಕ್ಷಕರು ಅವರ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ನಾವು ಅಲ್ಲಿ ಫಾಮರ್್​ಗಳನ್ನು ಹೇಗೆ ತುಂಬಬೇಕು ಎಂದು ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳಾಗಿದ್ದಾಗ ಈ ರೀತಿ ಶಿಕ್ಷಕರ ಜೊತೆ ಬಿಸಿಲಿನಲ್ಲಿ ಹೋಗುವುದು, ಫಾಮ್ರ್ ತುಂಬುವುದು ಕಿರಿಕಿರಿ ಎನ್ನಿಸಿದರೂ ಅದರಿಂದ ಅಕ್ಷರ ಜ್ಞಾನದ ಜೊತೆಗೆ ವ್ಯಾವಹಾರಿಕ ಜ್ಞಾನವೂ ಹೆಚ್ಚುತ್ತಾ ಹೋಯಿತು. ‘ಪ್ರತಿಬಾರಿಯೂ ನಾವೇ ಹೇಳಿಕೊಟರೆ ನೀವು ಕಲಿಯುವುದಾದರೂ ಹೇಗೆ? ಎನ್ನುತ್ತಿದ್ದ ನಮ್ಮ ಆ ಸಣ್ಣತಿಪ್ಪಯ್ಯ ಮಾಸ್ಟರ್ ಮಾತುಗಳು ಇಂದಿಗೂ ಎಷ್ಟೊಂದು ಪ್ರಸ್ತುತ! ಆ ಮಾತೇ ನನಗೆ ದಾರಿದೀಪವಾಯಿತು. ಶಿಕ್ಷಕರು ನೀಡುವ ಶಿಕ್ಷೆ, ಅವರು ಮಾಡಿಸುವ ಕೆಲಸ ಎಲ್ಲವೂ ವಿದ್ಯಾರ್ಥಿಗಳ ಅನುಕೂಲಕ್ಕೆ ಎನ್ನುವುದನ್ನು ಮಕ್ಕಳು ಮತ್ತು ಪಾಲಕರು ತಿಳಿದುಕೊಳ್ಳಬೇಕಿದೆ.

| ಮಧುಸೂಧನ್ ಕೆ. ಆರ್. ತೋರಣಗಟ್ಟೆ

ಶಾಲೆಗೆ ಹೋಗುವಾಗಲೇ ಬಟ್ಟೆ ಹೊಲಿಯುವುದ ಕಲಿತೆ

ನಾನು ಶಾಲೆಗೆ ಹೋಗುತ್ತಿದ್ದ ದಿನಗಳು. ನನ್ನ ತಂದೆ ಬಟ್ಟೆ ಹೊಲಿಯುತ್ತಿದ್ದರು. ಅವರು ಹೊಲಿಯುವ ಗೌನ್, ಜಬಲಾ, ಕುಲಾವಿಗಳನ್ನು ಏಕಾಗ್ರಚಿತ್ತದಿಂದ ರಾಟಿಯ ಹತ್ತಿರ ನಿಂತು ಸದಾ ನೋಡುತ್ತಿದ್ದೆ. ನಂತರ ಅಲ್ಲಿಯೇ ತುಂಡು ಬಟ್ಟೆಗಳನ್ನು ತೆಗೆದುಕೊಂಡು ಒಂದೊಂದಾಗಿ ಜೋಡಿಸಿ ಹೊಲಿಯುವುದಕ್ಕೆ ಪ್ರಯತ್ನಿಸುತ್ತಿದ್ದೆ.

8 ನೇ ತರಗತಿಗೆ ಬರುವಷ್ಟರಲ್ಲಿ ಪೂರ್ತಿ ಹೊಲಿಗೆ ಕೆಲಸವನ್ನು ಕಲಿತುಕೊಂಡೆ. ಬಟ್ಟೆ ಹೊಲಿಯುವುದೇ ಮುಂದೆ ನನ್ನ ಜೀವನಕ್ಕೆ ದಾರಿಮಾಡಿಕೊಟ್ಟಿತು. ಚಿಕ್ಕವರಿದ್ದಾಗಲೇ ಏನಾದರೊಂದು ಕಲಿತರೆ ಅದು ಭವಿಷ್ಯದ ದಿಕ್ಕನ್ನೇ ಬದಲಾಯಿಸಬಲ್ಲುದು. ಆದ್ದರಿಂದ ಯಾವುದನ್ನೂ ಸಣ್ಣ ಕೆಲಸ ಎಂದು ಭಾವಿಸದೇ ಎಳೆಯ ವಯಸ್ಸಿನಲ್ಲಿಯೇ ಉತ್ಸಾಹದಿಂದ ಅದನ್ನು ಕಲಿಯಬೇಕು.

| ಮಂಜುಳಾ ನವಲೆ ಮಧುಗಿರಿ

ನಿಧಿ ಹುಡುಕಲು ಹೊರಟಿದ್ವಿ!

ನಾನು ಮತ್ತು ನನ್ನ ಸ್ನೇಹಿತೆಯರು ನಿಧಿಯ ಬಗ್ಗೆ ಅಲ್ಲಲ್ಲಿ ಕೇಳಿಸಿಕೊಂಡು ಅದರ ಹುಡುಕಾಟಕ್ಕೆ ಹೋಗುವ ಚರ್ಚೆಯನ್ನೂ ಮಾಡಿದೆವು. ದಿನವೊಂದು ಗೊತ್ತು ಮಾಡಿ ಅಂದು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೆವು.

ಆ ವಿಷಯ ನಮ್ಮ ಗಣಿತ ಮೇಸ್ಟ್ರಿಗೆ ತಿಳಿದುಬಿಟ್ಟಿತು. ನಮ್ಮನ್ನು ಕರೆದು ಚೆನ್ನಾಗಿ ಬೈದರು. ಮನೆ ಬಿಟ್ಟು ಹೋದರೆ ಆಗುವ ಅನಾಹುತವೇನು, ನಾವು ಎಂಥ ದೊಡ್ಡ ತಪ್ಪನ್ನು ನಾವು ಮಾಡಲು ಹೊರಟಿದ್ದೇವೆ ಎಂದೆಲ್ಲಾ ವಿವರಿಸಿದರು. ಅವರ ಮಾತು ಕೇಳಿದ ಮೇಲೆ ನಮಗೆ ನಾವು ಮಾಡಹೊರಟಿದ್ದ ‘ಘನಂಧಾರಿ ಕಾರ್ಯ’ದ ಬಗ್ಗೆ ಬೇಸರವಾಯಿತು. ನಿಧಿ ಹುಡುಕುವ ಕಾರ್ಯ ಕೈಬಿಟ್ಟೆವು. ಇಲ್ಲದಿದ್ದರೆ ಅದೇನಾಗುತ್ತಿತ್ತೋ ಆ ದೇವರೇ ಬಲ್ಲ, ನೆನೆಸಿಕೊಂಡರೆ ಭಯವಾಗುತ್ತದೆ.

| ಸುಮಾ ಮಹೇಶ್ ಕೊಪ್ಪಳ

ತುಂಟಾಟ ಕಲಿಸಿದ ಪಾಠ

8ನೇ ತರಗತಿಯಲ್ಲಿದ್ದಾಗ ಬಳ್ಳಾರಿಯಲಿ ್ಲದುತ್ತಿದ್ದೆ. ರಜೆಗೆ ಊರಿಗೆ ಹೋಗಿದ್ದೆ. ಅಲ್ಲಿ ಟೋನಿ ಎಂಬಾತನ ಬಳಿ ಜಿಮ್ೆ ಬೇಕಾಗುವ ಎಲ್ಲ ಪರಿಕರವಿತ್ತು. ಮಕ್ಕಳು ಮಾಡಬಹುದಾದ ವ್ಯಾಯಾಮಗಳನ್ನು ಆತನನ್ನು ಅನುಸರಿಸಿ ಮಾಡುತ್ತಿದ್ದೆ. ಭಾರ ಎತ್ತುವುದನ್ನು ಮಕ್ಕಳು ಎಂದಿಗೂ ಮಾಡಕೂಡದೆಂದು ಆತ ಪದೇ ಪದೇ ಎಚ್ಚರಿಸುತ್ತಿದ್ದ. ಒಮ್ಮೆ ಆತ ಹೊರಗಡೆ ಹೋದಾಗ ಭಾರೀ ತೂಕದ ವ್ಹೀಲ್​ಗಳನ್ನು ನಿಧಾನವಾಗಿ ಹೆಚ್ಚಿಸುತ್ತಾ ಎತ್ತಲು ಪ್ರಯತ್ನಿಸಿದೆ. ಅಷ್ಟರಲ್ಲಿ ಟೋನಿ ಬಂದು ತಡೆದ. ಅಂದು ರಾತ್ರಿ ತಡೆಯಲಾಗದ ಹೊಟ್ಟೆ ನೋವು. ನನ್ನನ್ನು ಪರಿಶೀಲಿಸಿದ ಡಾಕ್ಟರ್ ಕೂಡಲೇ ಬಳ್ಳಾರಿಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದರು. ಅಲ್ಲಿ ಎಕ್ಸರೇ ತೆಗೆದು ಪರಿಶೀಲಿಸಿದ ವೈದ್ಯರು, ‘ನಿಮ್ಮ ಪುಣ್ಯ. ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ. ಆದರೆ ಕನಿಷ್ಠ 15 ದಿನಗಳ ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದರು. ಕೆಲವು ದಿನಗಳ ನಂತರ ಜ್ವರ ಕೂಡ ಪ್ರಾರಂಭವಾಗಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ ಪ್ರತಿ ಶನಿವಾರ ನಡೆಸಲಾಗುತ್ತಿದ್ದ ಟೆಸ್ಟ್​ಗಳಲ್ಲಿ ನಾನು ಗಳಿಸಿದ್ದ ಉತ್ತಮ ಅಂಕಗಳ ಆಧಾರದ ಮೇಲೆ 8ನೇ ತರಗತಿ ತೇರ್ಗಡೆ ಮಾಡಿದರು. ಅದೇ ಕೊನೆ. ನನ್ನ ಅತಿಯಾದ ತುಂಟಾಟಕ್ಕೆ ಕಡಿವಾಣ ಬಿದ್ದಿತ್ತು. ಮಕ್ಕಳು ತುಂಟಾಟ ಮಾಡಿದರೂ ಅದು ಎಷ್ಟರ ಮಟ್ಟಿಗೆ ಸೀಮಿತ ಆಗಿರಬೇಕು ಎಂಬುದಾಗಿ ಅಪ್ಪ-ಅಮ್ಮ ಹೇಳಿದ ಬುದ್ಧಿಮಾತು ಸಾಕಷ್ಟು ತಲೆಗೆ ನೆಟ್ಟಿತ್ತು.

| ಪಂಪಾಪತಿ ಹಿರೇಮಠ ಧಾರವಾಡ

ಆಸ್ಪತ್ರೆ ಸೇರಿಸಿದ ಪ್ರಯೋಗ

ಬಾಲ್ಯದಲ್ಲಿ ಹೊಸಹೊಸ ಪ್ರಯೋಗ ಮಾಡುವ ಆಸೆ. ಅದೊಂದು ದಿನ ಸ್ನೇಹಿತರು ಸೇರಿ ಶಾಲೆ ಪಕ್ಕದಲ್ಲಿದ್ದ ಗಿಡಗಂಟಿ ಹತ್ತಿರ ಹೋದೆವು. ಅಲ್ಲಿ ಹರಳೆಣ್ಣೆ ಗಿಡ ಇತ್ತು. ಅದು ಏನು ಎತ್ತ ಎಂದು ನೋಡದೇ, ಎಲ್ಲರೂ ಸೇರಿ ಅದರ ಬೀಜ ತಿಂದೇ ಬಿಟ್ಟೆವು. ತಿನ್ನುವಾಗ ಹಸಿ ಕಡಲೆಕಾಯಿ ಥರ ರುಚಿ ಅನ್ನಿಸಿದ್ದರಿಂದ ಮತ್ತೂ ಮತ್ತೂ ತಿಂದೆವು. ಕೆಲವೇ ಕ್ಷಣ. ಎಲ್ಲರಿಗೂ ವಾಂತಿ, ಹೊಟ್ಟೆನೋವು ಆರಂಭವಾಯಿತು. ನಂತರ ಭೇದಿ ಶುರುವಾಯಿತು. ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಯಿತು. ತುಸು ಹೆಚ್ಚೇ ತಿಂದಿದ್ದ ನನ್ನ ಪರಿಸ್ಥಿತಿ ತುಂಬಾ ಹದಗೆಟ್ಟಿತು. ನನ್ನ ಪಾಲಕರು ಕಂಗಾಲಾಗಿ ಹೋಗಿದ್ದರು. ಮೂರು ದಿನಗಳು ಆಸ್ಪತ್ರೆಯಲ್ಲಿ ಇದ್ದ ಮೇಲೆ ನನಗೆ ಬುದ್ಧಿ ಬಂತು. ಅಂದಿನಿಂದ ಹಿರಿಯರನ್ನು ಕೇಳಿದ ಹೊರತೂ ಹೊಸ ಸಾಹಸಕ್ಕೆ ಕೈ ಹಾಕಲಿಲ್ಲ. ಹಾಗೆನೇ, ಶಿಕ್ಷಕರ ನಡವಳಿಕೆ ಕೂಡ ಮಕ್ಕಳ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ನನ್ನ ನೆಚ್ಚಿನ ಟೀಚರ್ ಸುಷ್ಮಾ ಮೇಡಂ ಸಾಕ್ಷಿ. ಅವರಿಂದ ನಾನು ಕಲಿತದ್ದು ತುಂಬಾ ಇದೆ.

| ಅಭಿಷೇಕ್ ಶಂಕರಘಟ್ಟ