ಸಭಿಕರ ಮನಗೆದ್ದ ಮಕ್ಕಳ ನೃತ್ಯ

ಮೈಸೂರು: ಆರ್ಟಿಕ್ಯುಲೇಟ್ ಫೆಸ್ಟಿವಲ್ ವತಿಯಿಂದ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉದ್ಗಮ-2’ ಕಾರ್ಯಕ್ರಮದಲ್ಲಿ 8 ರಿಂದ 15 ವಯಸ್ಸಿನ ಪುಟ್ಟ ಬಾಲಕ-ಬಾಲಕಿಯರು ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ ಮತ್ತು ಕಥಕ್ ನೃತ್ಯ ಪ್ರದರ್ಶಿಸಿ ನೃತ್ಯ ಪ್ರೇಮಿಗಳ ಮನ ಗೆದ್ದರು.

ಹೊಳೆಯುವ ಮುಖ ಮಂಡಲದಲ್ಲಿ ಹೂ ನಗೆಯೊಂದಿಗೆ ನರ್ತಿಸಿದ ಬಾಲೆ ಪೂಜಾ ಸಾತನೂರ್ ಭರತನಾಟ್ಯವನ್ನು ಸಾದರ ಪಡಿಸಿದರು. ಪುಟ್ಟ ನರ್ತಕಿ ಬಿ.ಕೆ.ಸಂಜನಾ ಪ್ರಸಾದ್‌ಅವರ ಕೂಚಿಪುಡಿ ಪ್ರದರ್ಶನ ಎಲ್ಲರನ್ನೂ ರಂಜಿಸಿತು. ಪ್ರಿಷಾ ಸಿನ್ಹಾ ಒಡಿಸ್ಸಿ ನೃತ್ಯ ಪ್ರಸ್ತುತಪಡಿಸಿದರು.

ಸೈಯ್ನ ಕದ್ನಿ, ವೈಭವಿ ಆರ್.ಶೆಟ್ಟಿ, ವೈಷ್ಣವಿ ಆರ್.ಶೆಟ್ಟಿ, ಫಲ್ಗುಣಿ ವಿ.ಕದಂಬಲಿತಾಯತ್ ಹಾಗೂ ಶರ್ಮ ವಿ.ಭಾರದ್ವಾಜ್ ಅವರ ಸಮೂಹ ಕಥಕ್ ನೃತ್ಯ ನೋಡಗರನ್ನು ಸೆಳೆಯಿತು. ಎಲ್ಲರಲ್ಲೂ ಸಮಾನಂತರ ಪ್ರತಿಭೆ, ಪರಸ್ಪರ ಹೊಂದಾಣಿಕೆ ಕಂಡು ಬಂತು. ಲಯದ ಮೇಲೆ ಸೊಗಸಾದ ಹಿಡಿತ ಸಾಧಿಸಿದರು. ತತ್ಕಾರಗಳು ಸುಸ್ಪಷ್ಟವಾಗಿ, ಲಯಬದ್ಧವಾಗಿ ಪ್ರಸ್ತುಗೊಂಡಿದ್ದು ಪ್ರಶಂಸನೀಯ.

ನೃತ್ಯೋತ್ಸವವು ಮೈಸೂರು ಬಿ.ನಾಗರಾಜ್ ಮಾರ್ಗದರ್ಶನದಲ್ಲಿ ನಡೆಯಿತು. ಇದು ಸಂಪೂರ್ಣ ಮಕ್ಕಳ ಕಾರ್ಯಕ್ರಮವಾಗಿದ್ದು, ಪುಟ್ಟ ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹರ್ಷದಿಂದ ತಿಳಿಸಿದರು.