ಇಂಡಿ: ತಾಲೂಕಿನ ಹಿರೇಬೇವನೂರ ವಿಶ್ವ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಜಂತುಹುಳು ಮಾತ್ರೆ ನುಂಗಿದ ಕೆಲವೇ ಕ್ಷಣಗಳಲ್ಲಿ 5 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ವಿದ್ಯಾರ್ಥಿಗಳಾದ ಶರತ್ ಕೋರೆ, ವಿರಾಟ್ ಚಾಂದಕವಟೆ, ಯುವರಾಜ ಸ್ವಾಮಿ, ಪ್ರೀತಮ್ ವಳಸಂಗ್, ಸಂಕೇತ ಗೊಟ್ಯಾಳ ಎಂಬುವವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನದ ಊಟದ ನಂತರ ಶಾಲೆಯ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಲಾಗಿದೆ. ಜಂತುಹುಳು ಮಾತ್ರೆ ನುಂಗಿದ ಒಟ್ಟು 33 ಮಕ್ಕಳಲ್ಲಿ 5 ಮಕ್ಕಳು ಹೊಟ್ಟೆ ಹುರಿ ತಾಳಲಾರದೆ ಶಾಲೆಯಲ್ಲಿ ಒದ್ದಾಡುತ್ತಿದ್ದಾಗ ಗಾಬರಿಯಾದ ಶಿಕ್ಷಕರು ಕೂಡಲೇ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಆಸ್ಪತ್ರೆಗೆ ಬಂದ ಮಕ್ಕಳಿಗೆ ಕೂಡಲೇ ಚಿಕಿತ್ಸೆ ನೀಡಿದ ವೈದ್ಯರು, ಮಾತ್ರೆ ಸೇವನೆಯಿಂದ ಏನೂ ಆಗುವುದಿಲ್ಲ. ಕೆಲವು ಮಕ್ಕಳಿಗೆ ಹೀಗಾಗುತ್ತದೆ. ಇದರಿಂದ ಪೋಷಕರು ಗಾಬರಿಪಡುವುದು ಅಗತ್ಯವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಒಂದು ಮಾತ್ರ ಸೇವನೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದು ರಾಷ್ಟ್ರೀಯ ಜಂತುಹುಳ ಕಾರ್ಯಕ್ರಮವಾಗಿದ್ದು, ಸರ್ಕಾರ ಎಲ್ಲ ಶಾಲಾ ಮಕ್ಕಳಿಗೆ ನೀಡುತ್ತಿದೆ. ಮಕ್ಕಳಲ್ಲಿ ಅಲರ್ಜಿ ಮತ್ತು ಎಸಿಡಿಟಿಯಿಂದ ಈ ರೀತಿಯ ತೊಂದರೆಯಾಗುತ್ತದೆ.
ರಾಮಕೃಷ್ಣ ಇಂಗಳೆ, ಮುಖ್ಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಇಂಡಿ